ಕೋಟ: ಹಂಗಾರಕಟ್ಟೆ ಮೀನುಗಾರಿಕೆ ಜಟ್ಟಿ ಬಳಿ ಅಳಿವೆಯಲ್ಲಿ ವ್ಯಾಪಕ ಕಡಲ್ಕೊರೆತ ಆರಂಭವಾಗಿದ್ದು, ಬೃಹತ್ ಗಾತ್ರದ ತೆರೆಗಳು ತೀರ ಪ್ರದೇಶಕ್ಕೆ ಅಪ್ಪಳಿಸುತ್ತಿವೆ. ಹೀಗಾಗಿ ಕಳೆದ ವರ್ಷ 5 ಲ.ರೂ. ವೆಚ್ಚದಲ್ಲಿ ನಿರ್ಮಿಸಿದ ತಡೆಗೋಡೆ ಕುಸಿಯುವ ಹಂತದಲ್ಲಿದೆ.
ಕಳೆದ ಸಾಲಿನಲ್ಲಿ ತಡೆಗೋಡೆ ನಿರ್ಮಿಸುವಾಗ “ಎಲ್’ ಆಕಾರದಲ್ಲಿ ಕಾಮಗಾರಿ ಕೈಗೊಳ್ಳುವಂತೆ ಸ್ಥಳೀಯರು ಮನವಿ ಮಾಡಿದ್ದರು. ಆದರೆ ಹಾಗೆ ಮಾಡದ ಕಾರಣ ಹಾಗೂ ಒಂದು ಭಾಗದ ಮಣ್ಣು ನೀರಿನ ಹೊಡೆತಕ್ಕೆ ಕೊಚ್ಚಿ ಹೋಗಿ ತಡೆಗೋಡೆಯ ಕಲ್ಲುಗಳು ಅಪಾಯದಲ್ಲಿವೆ.
ಈ ಪ್ರದೇಶ ಸೀತಾ ನದಿ ಸಮುದ್ರ ಸೇರುವ ಆಕರ್ಷಕ ತಾಣವಾಗಿದೆ. ಆದ್ದ ರಿಂದ ಪ್ರವಾಸಿಗರ ಅನುಕೂಲಕ್ಕಾಗಿ ಸೋಲಾರ್ ಲೈಟ್, ಕಲ್ಲುಬೆಂಚ್ ಮುಂತಾದ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಕಡಲ್ಕೊರೆತ ಹೆಚ್ಚಿದಲ್ಲಿ ಇವುಗಳಿಗೆ ಹಾನಿಯಾಗಲಿದೆ.
ಶೀಘ್ರ ದುರಸ್ತಿಗೆ ಮನವಿ
ಅಲೆಗಳ ಹೊಡೆತವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ತತ್‌ಕ್ಷಣ ತಾತ್ಕಾಲಿಕ ಕಾಮಗಾರಿ ಕೈಗೊಂಡು ತಡೆಗೋಡೆಗೆ ಆಗುವ ಹಾನಿಯನ್ನು ತಡೆಗಟ್ಟಬೇಕೆಂದು ಸ್ಥಳೀ ಯರು ಮನವಿ ಮಾಡಿದ್ದಾರೆ.