Advertisement

ದಿವ್ಯಾಂಗಿಗಳು ದೈವ ಸ್ವರೂಪಿ: ಸಚಿವ ಖೂಬಾ

12:20 PM Nov 12, 2021 | Team Udayavani |

ಬೀದರ: ನಗರದ ಪನ್ನಾಲಾಲ್‌ ಹಿರಾಲಾಲ್‌ ಕಾಲೇಜು ಆವರಣದಲ್ಲಿ ರಾಜಸ್ಥಾನ ನಾರಾಯಣ ಸೇವಾ ಸಂಸ್ಥಾನ ವತಿಯಿಂದ ಕೈ, ಕಾಲು, ಕಣ್ಣು, ಕಿವಿ ಮತ್ತು ಕ್ಯಾನ್ಸರ್‌ ರೋಗಿಗಳಿಗಾಗಿ ಉಚಿತ ಆರೋಗ್ಯ ಶಿಬಿರ ನಡೆಯಿತು.

Advertisement

ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಸಚಿವ ಭಗವಂತ ಖೂಬಾ ರೋಗಿಗಳಿಗೆ ಸಾಧನ ಸಲಕರಣೆ ವಿತರಿಸಿ ಮಾತನಾಡಿ, ದಿವ್ಯಾಂಗಿಗಳು ದೈವ ಸ್ವರೂಪಿಯಾಗಿದ್ದು, ಯಾರೂ ಸಹ ದಿವ್ಯಾಂಗಿಯೆಂದು ಮನಸ್ಸಿನಲ್ಲಿ ನಕಾರಾತ್ಮಕ ಭಾವನೆ ಬೇಡ. ದೇಶದೆಲ್ಲೆಡೆ ನಾರಾಯಣ ಸೇವಾ ಸಂಸ್ಥಾನದಿಂದ ನಡೆಯುವ ಉಚಿತ ಆರೋಗ್ಯ ಶಿಬಿರಗಳ ಲಾಭ ಜಿಲ್ಲೆಯ ಆಸಕ್ತರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಶಿಬಿರದಲ್ಲಿ ಸಂಸ್ಥಾನದಿಂದ ಒಟ್ಟು 225 ಜನರಿಗೆ ಕೈ, ಕಾಲು ಆರೋಗ್ಯ ತಪಾಸಣೆ ಮಾಡಿ 15 ಜನರಿಗೆ ತ್ರಿಚಕ್ರ ಸೈಕಲ್‌, 5 ವ್ಹೀಲ್‌ ಚೇರ್‌, 25 ಬೆಸಾಕಿ (ಕ್ರಚರ್) ನೀಡಲಾಯಿತು. 8 ಜನರಿಗೆ ಶಸ್ತ್ರ ಚಿಕಿತ್ಸೆ ಅಗತ್ಯವಿದ್ದು, ಆಸಕ್ತರಿದ್ದಲ್ಲಿ ಉದಯಪುರ (ರಾಜಸ್ಥಾನ)ದಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಜತೆಗೆ ಬರುವ 45 ದಿನಗಳಲ್ಲಿ 25 ಜನರಿಗೆ ಕೃತಕ ಕೈ-ಕಾಲುಗಳು ಹಾಗೂ 12 ಜನರಿಗೆ ಕ್ಲಿಪರ್‌ ಜೋಡಣೆ ಮಾಡಲಾಗುವುದು ಎಂದು ಹೇಳಿದರು.

ದೆಹಲಿ ತಾರಾ ನೇತ್ರಾಲಯದಿಂದ ಒಟ್ಟು 1181 ಜನರಿಗೆ ಕಣ್ಣಿನ ತಪಾಸಣೆ ನಡೆಸಲಾಗಿದೆ. ಇದರಲ್ಲಿ 930 ಜನರಿಗೆ ಔಷಧ ಹಾಗೂ 870 ಜನರಿಗೆ ಕನ್ನಡಕ ನೀಡಲಾಗಿದೆ ಮತ್ತು 56 ಜನರಿಗೆ ಶಸ್ತ್ರಚಿಕಿತ್ಸೆ ಮಾಡಲು ಉದ್ದೇಶಿಸಲಾಗಿದೆ. ಅವರಿಗೆ ಮುಂಬೈ ಅಥವಾ ದೆಹಲಿಯಲ್ಲಿ ಉಚಿತ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಎಎಲ್‌ಎಸ್‌ಪಿ ಶ್ರವಣ ಸಂಸ್ಥೆಯಿಂದ ಒಟ್ಟು 396 ಜನರಿಗೆ ತಪಾಸಣೆ ನಡೆಸಲಾಗಿದೆ. ಇದರಲ್ಲಿ 231 ಜನರಿಗೆ ಕಿವಿಗೆ ಸಂಬಂಧಿಸಿದ ಶ್ರವಣ ಯಂತ್ರಗಳನ್ನು ನೀಡಲಾಗಿದೆ. ಜತೆಗೆ ದೆಹಲಿಯ ಆಕ್ಷನ್‌ ಕ್ಯಾನ್ಸರ್‌ ಆಸ್ಪತ್ರೆಯಿಂದ ಒಟ್ಟು 16 ಜನ ರೋಗಿಗಳಿಗೆ ಆರೋಗ್ಯ ತಪಾಸಣೆ ಮಾಡಲಾಗಿದೆ. ಅವರೆಲ್ಲರೂ ಬಯಸಿದ್ದಲ್ಲಿ ದೆಹಲಿಯಲ್ಲಿ ಅಗತ್ಯ ವ್ಯವಸ್ಥೆಗಳೊಂದಿಗೆ ಉಚಿತ ಚಿಕಿತ್ಸೆ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ಸೇವಾ ಸಂಸ್ಥಾನದ ಟ್ರಸ್ಟಿ ಸತ್ಯಭೂಷಣ ಜೈನ್‌, ಧಾತ್ರಿ ಪೆಸ್ಟಿಸೈಡ್ಸ್‌ ಅಧ್ಯಕ್ಷ ಆರ್‌.ಜಿ. ಅಗರವಾಲ್‌, ಕಾಲೇಜು ಅಧ್ಯಕ್ಷ ರಾಜಕುಮಾರ ಅಗರವಾಲ್‌, ಕಾರ್ಯದರ್ಶಿಗಳಾದ ಬ್ರೀಜಕಿಶೋರ ಮಾಲಾಣಿ, ನಂದಕೀಶೋರ ವರ್ಮಾ, ಪುನೀತ್‌ ಸಿಂಗ್‌, ಬಂಟಿ, ನಿಲೇಶ, ಅಮರ ಏರೋಳಕರ್‌, ರಾಜು ಕರಡ್ಯಾಳ, ನಿತಿನ್‌ ಕರ್ಪೂರ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next