Advertisement
“ಮಕ್ಕಳಿಗೆ ಹೇಗೂ ಬೇಸಗೆ ರಜೆ. ತವರು ಮನೆಗೆ ಹೋಗಿ ನಾಲ್ಕು ದಿನ ಇದ್ದು ಬರುತ್ತೇನೆ’ ಅಂತ ಮನೆಯಾಕೆ ಹೇಳಿದಾಗ, ನನಗಾದ ಸಂತೋಷ ಅಷ್ಟಿಷ್ಟಲ್ಲ. “ಗಂಡಸರೆಂದರೆ ಗಂಡಸರೇ’ ಅಂತ ಗೊಣಗಿ, ನನ್ನ ಬಗ್ಗೆ ಇನ್ನೇನೇನೋ ತಪ್ಪುತಪ್ಪಾಗಿ ಊಹಿಸಿಕೊಳ್ಳದಿರಿ. ಶಾಲೆಗೆ ರಜೆ ಕೊಟ್ಟ ತಕ್ಷಣ, ಮಕ್ಕಳನ್ನು ತಮ್ಮ ತಲೆಯ ಮೇಲಿನ ಭಾರವೆಂಬಂತೆ ಬೇಸಿಗೆ ಶಿಬಿರಕ್ಕೆ ಕಳಿಸಿ, ರಜೆ ಮುಗಿದುಬಿಡಲಿ ಅಂತ ನಿಟ್ಟುಸಿರುಯ್ಯುವ ಜಾಯಮಾನ ಖಂಡಿತ ನನ್ನದಲ್ಲ. ಅದರ ಬದಲು, ಹೆಂಡತಿ ತವರುಮನೆಗೆ ಹೋದರೆ ಅಲ್ಲಿ ಅವುಗಳಿಗೆ ಆಟವಾಡಿಕೊಳ್ಳಲು ಜೊತೆಗೆ ಅವಳ ಅಣ್ಣನ ಮಕ್ಕಳೂ ಇರುತ್ತಾರಲ್ಲ. ಜೊತೆಗೆ ಈ ಸಮಯದಲ್ಲಿ ತಾನೇ, ಮಕ್ಕಳು ತಮ್ಮ ಚಿಕ್ಕಪ್ಪ, ದೊಡ್ಡಪ್ಪ, ಚಿಕ್ಕಮ್ಮ, ದೊಡ್ಡಮ್ಮ, ತಾತ, ಅಜ್ಜಿ, ಸೋದರಮಾವ ಅನ್ನುವ ಹತ್ತಿರದ ಸಂಬಂಧಗಳನ್ನು ಪರಿಚಯ ಮಾಡಿಕೊಳ್ಳುವುದು? ಹಾಗಾಗಿ ಆಕೆ ತವರು ಮನೆಗೆ ಹೋಗಿಬರುವುದು ಒಳ್ಳೆಯ ನಿರ್ಧಾರವೆನ್ನಿಸಿತು.
Related Articles
Advertisement
ಸರಿಯಾದ ಸಮಯಕ್ಕೆ ಕೈಕೊಟ್ಟು ಮತ್ತೂಂದು ಪ್ರಳಯಕ್ಕೆ ಕಾರಣವಾದ ಸ್ಕೂಟರನ್ನು ಬೈದುಕೊಳ್ಳುತ್ತ ಮನೆಯೊಳಕ್ಕೆ ಬಂದು ಗಡಿಬಿಡಿಯಿಂದಲೇ ಕಸ ಗುಡಿಸಿ, ಯಾವುದೋ ಮ್ಯಾಗಜೀನನ್ನು ನೋಡುತ್ತ ಕುಳಿತೆ. ಬಾಗಿಲು ಬಡಿದ ಸದ್ದು. ಬಾಗಿಲು ತೆರೆದರೆ, ನನ್ನ ಹೆಂಡತಿ ಮಕ್ಕಳೊಂದಿಗೆ ಉರಿಮುಖದಲ್ಲಿ ನಿಂತಿದ್ದಳು. ಏನೂ ಆಗಿಲ್ಲವೆಂಬಂತೆ ನಟಿಸುತ್ತ ಮಾತಿನಲ್ಲೇ ಅವಳನ್ನು ಸಮಾಧಾನ ಮಾಡಲೆತ್ನಿಸಿದೆ. ಏನೂ ಕೇಳಿಸಿಕೊಳ್ಳಲಿಲ್ಲ ಎಂಬಂತೆ ಕೈಲಿದ್ದ ಬ್ಯಾಗುಗಳನ್ನು ಎಸೆದವಳೇ ಸೋಫಾದ ಮೇಲೆ ಕೂತಳು. ಟಿಪಾಯಿಯ ಮೇಲೆ ತೆರೆದಿಟ್ಟಿದ್ದ ಮ್ಯಾಗಝೀನು ಮತ್ತು ಅದರೊಳಗೆ ನಗುತ್ತಿದ್ದ ಮಾದಕ ನಟಿಯ ಫೋಟೋ ಉರಿಯುವ ಬೆಂಕಿಗೆ ತುಪ್ಪ ಸುರಿದಿತ್ತು.
“ಪಾಪ ನೀವೆಷ್ಟು ಬಿಝಿ ಇದ್ದೀರಿ, ಮುಂದುವರೆಸಿ’ ಅಂತ ಹೇಳಿ ಅತ್ತ ತಿರುಗಿದಳು. ನನ್ನ ದಡ್ಡತನಕ್ಕೆ ನಾನೇ ಶಪಿಸಿಕೊಂಡೆ. ಕೊಂಚ ಹೊತ್ತು ವ್ಯರ್ಥ ಮಾತಿಗಿಂತ ಮೌನವೇ ಲೇಸು ಅಂತ ಸುಮ್ಮನೆ ಮಕ್ಕಳೊಡನೆ ಮಾತನಾಡುತ್ತ ಕುಳಿತೆ. “ನಾನಿಲ್ಲದಿದ್ದರೆ ಈ ಮನೆ ಗತಿ ನೋಡಬೇಕು’ ಅಂತ ಗೊಣಗುತ್ತ, ನಾನು ಈಗಾಗಲೇ ಗುಡಿಸಿ, ಒರೆಸಿ ಶುಚಿಗೊಳಿಸಿದ್ದ ಮನೆಯನ್ನೇ ಇನ್ನೊಮ್ಮೆ ಗುಡಿಸಲು ಶುರುಮಾಡಿದಳು. ಅದೆಲ್ಲಿ ಅಡಗಿ ಕುಳಿತಿತ್ತೋ ಆ ಸೋಡಾ ಬಾಟೆಲ್ಲು, ಪೊರಕೆ ಸೋಕಿದ ಕ್ಷಣ ಸೋಫಾದ ಕೆಳಗಿಂದ ಲೊಳಲೊಳನೆ ಉರುಳಿ ಬಂತು. ಈಕೆ ಇನ್ನೂ ಮೂರು ದಿನ ಬರುವುದಿಲ್ಲವೆಂದು ಗೆಳೆಯರಿಗೆ ಹೇಳಿ¨ªೆ. ಇದೇ ಸಮಯವೆಂದು ತಿಳಿದಿದ್ದ ಗೆಳೆಯರು “ತೀರ್ಥ ಸಮಾರಾಧನೆ’ ನಡೆಸಲು ಬಂದೇಬಿಟ್ಟರು. ನಾವು ಅದೇನೇ ಸಾಕ್ಷಿ ನಾಶ ಮಾಡಿದ್ದರೂ, ಕೆಳಗಿಟ್ಟಿದ್ದ ಈ ಖಾಲಿ ಸೋಡಾ ಬಾಟೆಲ್ಲು ಮಾತ್ರ ಉರುಳಿ ಹೋಗಿ ಸೋಫಾದ ಕೆಳಗೆ ಸರಿಯಾದ ಸಮಯಕ್ಕಾಗಿ ಅಡಗಿ ಕುಳಿತಿತ್ತು. “ಇದಕ್ಕಲ್ಲವೇ ಎರಡು ವಾರದಲ್ಲಿ ಮೂರ್ನಾಲ್ಕು ಸಲವಷ್ಟೇ ಕರೆ ಮಾಡಿದ್ದು ನೀವು? ಈಗ ನಾನು ಬಂದದ್ದೇ ನಿಮಗೆ ಬೇಡವಾಗಿರಬಹುದು’ ಅಂದಳು ಕಣ್ಣೀರಧಾರೆ ಹರಿಸುತ್ತ. ಮತ್ತೆ ಸಮಾಧಾನ ಮಾಡುವ ನನ್ನ ಪ್ರಯತ್ನ ಯಶಸ್ವಿಯಾಗಲೇ ಇಲ್ಲ.
ಅವಳಿಗೆ ತವರು ಮನೆಯಿಂದ ತಂದಿದ್ದ ಒಂದಷ್ಟು ನಿಪ್ಪಟ್ಟುಗಳನ್ನು ಎತ್ತಿಡಬೇಕಿತ್ತು. ಕೆಂಪು ಡಬ್ಬಿ ಎಲ್ಲಿ ಅಂತ ಕೇಳಿದಳು. ಈಗಾಗಲೇ ಅವಳ ಮುನಿಸು, ಕೋಪ ನೋಡಿ ನನಗೂ ರೋಸಿ ಹೋಗಿತ್ತು. ಅಸಮಾಧಾನದಿಂದಲೇ “ಅಲ್ಲೇ ಇರಬೇಕು ನೋಡು. ನಿನ್ನ ಕೆಂಪು ಡಬ್ಬಿ ನನ್ನ ಜೇಬಿನಲ್ಲಿ ಇರುತ್ತದಾ?’ ಅಂತ ಮುಂದಾಗುವ ಪರಿಣಾಮ ಊಹಿಸದೆ ರೇಗಿದೆ. ಇದಾಗಿ ಒಂದೆರಡು ಗಂಟೆಗಳಾಗಿರಬಹುದು. ಪಕ್ಕದ ಮನೆಯ ಶಾಂತಲಾ ಆಂಟಿಯ ಅನಿರೀಕ್ಷಿತ ಆಗಮನವಾಯಿತು. ಬಂದವರೇ, “ಅವತ್ತು ನಿಮ್ಮ ಯಜಮಾನ್ರು ಎಷ್ಟು ಚೆಂದ ಉಪ್ಪಿಟ್ಟು ಮಾಡಿಕೊಟ್ಟಿದ್ರು ಅಂತೀರ? ನಿಮ್ಮ ಗಂಡನ ಕೈ ಅಡುಗೆ ಚೆನ್ನಾಗಿದೆ. ಇತರರ ಬಗ್ಗೆ ಎಷ್ಟು ಕಾಳಜಿ. ನೀವೇ ಪುಣ್ಯವಂತರು’ ಎನ್ನಬೇಕೆ? ಹೇಳುವುದು ಹೇಳಿಬಿಟ್ಟು ಉಪ್ಪಿಟ್ಟು ತುಂಬಿಕೊಟ್ಟಿದ್ದ ಕೆಂಪು ಡಬ್ಬವನ್ನು ಸಾಕ್ಷಿಯೆಂಬಂತೆ ಕೊಟ್ಟು ಹೊರಟುಹೋದರು. ಇದೇ ಕೆಂಪು ಡಬ್ಬವನ್ನೇ ಈಕೆ ಹುಡುಕುತ್ತಿದ್ದದ್ದು ಎಂಬುದು ಅರಿವಾದಾಗ ಮೂರನೇ ಮಹಾಯುದ್ಧ ಶುರುವಾಗುವ ಮುನ್ಸೂಚನೆ ಸಿಕ್ಕಾಯ್ತು.
“ಅಯ್ಯೋ, ಸ್ವಲ್ಪ ಹೆಚ್ಚು ಉಪ್ಪಿಟ್ಟು ಮಾಡಿದ್ದೆ, ಯಾಕೆ ಬಿಸಾಡೋದು ಅಂತ ಅವರಿಗೆ ಕೊಟ್ಟೆ’ ಅಂತ ಹೇಳುವಷ್ಟರಲ್ಲಿ, ಅಡುಗೆ ಮನೆಯ ಕಡೆಯಿಂದ ಪಾತ್ರೆಗಳು, ಲೋಟಗಳು ಹಾರಾಡತೊಡಗಿದವು. “ಹೆಂಡತಿ ಹಾಸಿಗೆ ಹಿಡಿದಾಗ ಗಂಡ ಅನ್ನಿಸಿಕೊಳ್ಳೋನು ಕೆಲಸ ಮಾಡೋದಿಲ್ಲ. ಪಕ್ಕದ ಮನೆಯವಳಾರಿಗೋ ಹುಷಾರಿಲ್ಲ ಅಂದರೆ, ಎಲ್ಲ ಕೆಲಸಾನೂ ಮಾಡೋಕಾಗುತ್ತೆ’ ಅಂತ ಬೆಂಕಿಯುಗುಳುವ ಅವಳ ಡೈಲಾಗು ಮತ್ತು ಸ್ಟೀಲ್ ಲೋಟವೊಂದು ರಪ್ಪನೆ ಕಿವಿಗೆ ಬಡಿಯಿತು. ನಾನೇ ತೋಡಿಕೊಂಡ ಹಳ್ಳ ಅಂದುಕೊಂಡು, ಕಾರಣಗಳನ್ನೆಲ್ಲ ಕೊಡುತ್ತ ಹೋದೆ. ನನ್ನ ಮಾತುಗಳೆಲ್ಲ ವ್ಯರ್ಥವಾದವು. ಸಮಯ ಸರಿಯುತ್ತಿತ್ತು. ಮತ್ತಷ್ಟು ಅನಾಹುತಗಳಾಗುವ ಮೊದಲೇ ಎಚ್ಚೆತ್ತು, “ಹೋಗಲಿ ಬಿಡು ಮಾರಾಯ್ತಿ. ನನ್ನದು ತಪ್ಪಾಗಿದೆ. ಇನ್ನು ಮುಂದಿನ ಬೇಸಗೆ ರಜೆ ನಿಮ್ಮಮ್ಮನ ಮನೆಯಲ್ಲೇ. ಆಫೀಸಿಗೆ ರಾಜೀನಾಮೆ ಕೊಟ್ಟಾದರೂ ಬರುತ್ತೇನೆ’ ಎಂದು ಅವಳ ಮುಂದೆ ಶಸ್ತ್ರಾಸ್ತ್ರಗಳನ್ನೆಲ್ಲ ತ್ಯಜಿಸಿದ ಎದುರು ಪಾಳಯದ ರಾಜನಂತೆ ಶರಣಾದೆ. ಎಂದಿನಂತೆ ಆಕೆ ಮೌನವಾಗಿದ್ದರೂ, ಯುದ್ಧ ಗೆದ್ದ ಕಿರುನಗೆ ಆಕೆಯ ಮೊಗದ ಮೇಲಿತ್ತು!
-ಸಂತೋಷ್ ಕುಮಾರ್ ಎಲ್. ಎಂ.