ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಯಾವುದೇ ಕೆಲಸವಾಗಬೇಕಾದರೆ ಸೂಟ್‌ಕೇಸ್ ನೀಡಬೇಕು. ಇಲ್ಲವಾದರೆ ಕೆಲಸವಾಗುವುದಿಲ್ಲ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಮಲ್ಲಿಕಾ ಘಂಟಿ ನೀಡಿರುವ ಹೇಳಿಕೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಡಳಿತ ವ್ಯವಸ್ಥೆಗೆ ಹಿಡಿದಿರುವ ಕೈಗನ್ನಡಿ ಎಂದು ರಾಜ್ಯ ಬಿಜೆಪಿ ವಕ್ತಾರ ಹಾಗೂ ಶಾಸಕ ಎಸ್.ಸುರೇಶ್ ಕುಮಾರ್ ಆರೋಪಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ ಎಂದು ಬಿಜೆಪಿ ಆರೋಪಿಸುತ್ತಲೇ ಬಂದಿದ್ದು, ಮಲ್ಲಿಕಾ ಘಂಟಿ ಅವರ ಹೇಳಿಕೆ ಈ ಆರೋಪಕ್ಕೆ ಪುಷ್ಠಿ ನೀಡಿದೆ. ಹಂಪಿ ವಿವಿಯಲ್ಲಿ ಖಾಲಿ ಇರುವ
ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಮುಖ್ಯಮಂತ್ರಿಗಳ ಬಳ್ಳಾರಿ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ವಿಷಯ ಪ್ರಸ್ತಾಪವಾಗಿದ್ದು, ಅಗತ್ಯವಿರುವ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ ಮರುದಿನವೇ ಕುಲಪತಿಗಳು ತಮ್ಮ ಈ ಅಸಮಾಧಾನ ಹೊರಹಾಕಿದ್ದಾರೆ. ಇದು ರಾಜ್ಯ ಸರ್ಕಾರದ ಸೂಟ್‌ಕೇಸ್ ಸಂಸ್ಕೃತಿಯನ್ನು ಬಯಲು ಮಾಡಿದೆ ಎಂದು ವ್ಯಂಗ್ಯವಾಡಿದ್ದಾರೆ.
ಹಂಪಿ ವಿವಿ ಕುಲಪತಿಗಳ ಹೇಳಿಕೆ ನಿರಾಧಾರ ಎಂದು ಹೇಳಲಾಗದು. ವಿಧಾನಸೌಧವೇನು ಗಂಗೋತ್ರಿಯಲ್ಲ ಎಂಬ ಆರೋಗ್ಯ ಸಚಿವ ಕೆ.ಆರ್. ರಮೇಶ್ ಕುಮಾರ್ ಅವರ ಹೇಳಿಕೆಯನ್ನೂ ಪ್ರಸ್ತಾಪಿಸಿದ ಸುರೇಶ್ ಕುಮಾರ್, ರಾಜ್ಯ ಸರ್ಕಾರದ ಒಬ್ಬ ಹಿರಿಯ ಸಚಿವರ ಈ ಪ್ರತಿಕ್ರಿಯೆಯನ್ನಾದರೂ ಮುಖ್ಯಮಂತ್ರಿಯವರು ಗಂಭೀರವಾಗಿ ಪರಿಗಣಿಸಬೇಕು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಟ್ ಕೇಸ್ ವ್ಯವಹಾರದಲ್ಲಿ ಶಾಮೀಲಾಗಿರುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.