Advertisement

ವಿಪತ್ತು ನಿರ್ವಹಣೆ ಸಮರ್ಥವಾಗಿ ನಿಭಾಯಿಸಿ

02:29 PM Apr 26, 2022 | Team Udayavani |

ರಾಯಚೂರು: ಕೆಲ ತಿಂಗಳಲ್ಲಿ ಮತ್ತೆ ಮಳೆಗಾಲು ಶುರುವಾಗಲಿದ್ದು, ಉಭಯ ನದಿಗಳಲ್ಲಿ ಎದುರಾಗುವ ನೆರೆ ಸೇರಿದಂತೆ ಇನ್ನಿತರ ವಿಪತ್ತು ನಿರ್ವಹಣೆಯನ್ನು ಸಮರ್ಥವಾಗಿ ನಿರ್ವಹಣೆ ಮಾಡುವಂತೆ ಜಿಪಂ ಸಿಇಒ ನೂರ್‌ಜಹಾರ್‌ ಖಾನ್‌ ಸೂಚಿಸಿದರು.

Advertisement

ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಕುಡಿಯುವ ನೀರು, ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಒತ್ತು ನೀಡಬೇಕು. ಕಳೆದ ಬಾರಿ ಕೃಷ್ಣಾ ನದಿಯಲ್ಲಿ ಭೀಕರ ಪ್ರವಾಹ ಹಾಗೂ ಅತಿವೃಷ್ಟಿ ಎದುರಾಗಿತ್ತು. ಆಗ ಜನ ಜಾನುವಾರು ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದರು. ನದಿಪಾತ್ರಗಳಲ್ಲಿ, ನಡುಗಡ್ಡೆಗಳಲ್ಲಿ ವಾಸಿಸುವ ಜನರಿಗೆ ಸಮಸ್ಯೆ ಎದುರಾಗುವ ಕಾರಣ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ಕಳೆದ ಬಾರಿ ಅತಿವೃಷ್ಟಿ ವೇಳೆ ಕೃಷ್ಣಾ, ತುಂಗಭದ್ರಾ ನದಿ ಪಾತ್ರಗಳಲ್ಲಿ ಎದುರಾದ ಸವಾಲುಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಹಿಂದೆ ಎದುರಾದ ಸಂಕಷ್ಟಗಳನ್ನು ಸಮರ್ಥವಾಗಿ ಎದುರಿಸಲು ಕೈಗೊಂಡ ಕ್ರಮಗಳನ್ನು ಆಧರಿಸಿ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಕುಡಿಯುವ ನೀರು, ಆರೋಗ್ಯ ಹಾಗೂ ಮೇವು ಸಂಗ್ರಹಣೆಗೆ ಹೆಚ್ಚಿನ ಒತ್ತು ನೀಡಬೇಕು. ಮೇವಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು. ತಾಲೂಕು ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸಮರ್ಪಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲೆಯಲ್ಲಿರುವ ಎಲ್ಲ ಆಸ್ಪತ್ರೆಗಳ ಸ್ವಚ್ಛಗೊಳಿಸಬೇಕು. ಉತ್ತಮ ಪರಿಸರದ ಬಗ್ಗೆ ಅಗತ್ಯ ಕಾರ್ಯಕ್ರಮ ಕೈಗೊಳ್ಳುವ ಬಗ್ಗೆ ಯಾವುದೆ ಸಮಸ್ಯೆ ಇದ್ದರೂ ಕೂಡಲೇ ಮೇಲಧಿಕಾರಿಗಳ ಗಮನಕ್ಕೆ ತರಬೇಕು. ಅಲ್ಲದೇ, ಸಾರ್ವಜನಿಕರೊಂದಿಗೆ ಸಿಬ್ಬಂದಿ ಉತ್ತಮ ಬಾಂಧವ್ಯ ಹೊಂದಿರಬೇಕು. ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸ್ವತ್ಛತೆಗೆ ವಿಶೇಷ ಆದ್ಯತೆ ನೀಡುವಂತೆ ನಿರ್ದೇಶನ ನೀಡಿದರು.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯದರ್ಶಿ ಡಾ| ಕೆ.ಆರ್‌.ದುರುಗೇಶ್‌, ಸಹಾಯಕ ಆಯುಕ್ತ ರಂಜನಿಕಾಂತ್‌, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೇವಿಕಾ ಆರ್‌., ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಇ ಮೋನಿಕಾ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ|ಸುರೇಂದ್ರ ಬಾಬು, ಜಿಲ್ಲಾ ನಗರಾಭಿವೃದ್ಧಿ ಕೋಶ ಅಧಿಕಾರಿ ಮಹೇಂದ್ರ, ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಶಿವಣ್ಣ, ನಗರಸಭೆಯ ಪೌರಾಯುಕ್ತ ಕೆ.ಮುನಿಸ್ವಾಮಿ ಸೇರಿದಂತೆ ಇತರರು ಸಭೆಯಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next