ಮೈಸೂರು: ಪ್ರವಾಸಿಗರಿಗೆ ಉತ್ತಮ ಗುಣಮಟ್ಟದ ಕರಕುಶಲ ವಸ್ತುಗಳು ಸುಲಭವಾಗಿ ಸಿಗುವಂತೆ ಮಾಡುವ ಉದ್ದೇಶದಿಂದ ಮೃಗಾಲಯದಲ್ಲಿ ಆರಂಭಿಸಿರುವ ಕಾವೇರಿ ಆರ್ಟ್ ಅಂಡ್ ಕ್ರಾಪ್ಟ್ ಎಂಪೋರಿಯಂ ಮಳಿಗೆಯನ್ನು ಸಚಿವೆ ಡಾ.ಗೀತಾ ಮಹದೇವಪ್ರಸಾದ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಪ್ರವಾಸಿಗರಿಗೆ ಗುಣಮಟ್ಟದ ಪಾರಂಪರಿಕ ಕರಕುಶಲ ವಸ್ತುಗಳು ಸುಲಭವಾಗಿ ಸಿಗುವಂತೆ ಮಾಡುವ ಉದ್ದೇಶದಿಂದ ಸರ್ಕಾರದ ಸಂಸ್ಥೆಯೇ ಮೃಗಾಲಯದಲ್ಲಿ ಮಳಿಗೆ ಆರಂಭಿಸಿರುವುದು ಸಂತಸದ ಸಂಗತಿಯಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿಗೂ ಈ ಮಳಿಗೆ ಸಹಕಾರಿಯಾಗಲಿದೆ. ಪ್ರವಾಸಿಗರು ಹಾಗೂ ಸಾರ್ವಜನಿಕರು ಇದರ ಲಾಭ ಪಡೆಯಬೇಕಿದೆ ಎಂದರು.
ಮಳಿಗೆಯಲ್ಲಿ ಏನಿದೆ?: ರಾಜ್ಯ ಸರ್ಕಾರದ ಕರಕುಶಲ ಅಭಿವೃದ್ಧಿ ನಿಗಮದಿಂದ ರಾಜ್ಯದಲ್ಲಿ ಆರಂಭಿಸುತ್ತಿರುವ 13ನೇ ಶಾಖೆ ಇದಾಗಿದೆ. ನೂತನ ಮಳಿಗೆಯಲ್ಲಿ ಶ್ರೀಗಂಧದ ಕೆತ್ತನೆ, ಬೀಟೆ ಮರದ ಕೆತ್ತನೆ ಮತ್ತು ಇನ್-ಲೇ, ಚನ್ನಪಟ್ಟಣದ ಆಟಿಕೆ, ನವಲಗುಂದದ ಜಮಖಾನ, ಬಿದಿರಿನ ಕಲೆ, ಕುಂಬಾರಿಕೆ ಕಲೆ, ಕಸೂತಿ ಮತ್ತು ಮಿರರ್ ಎಂಬ್ರಾಯಡರಿ ಕಲೆ, ಕಿನ್ನಾಳದ ಆಟಿಕೆಗಳು, ಕಂಚಿನ ಕಲಾಕೃತಿಗಳು, ಸುಗಂಧ ದ್ರವ್ಯಗಳು ಮೊದಲಾದ ಕರಕುಶಲ ವಸ್ತುಗಳು ಲಭ್ಯವಿದೆ.
ಈ ಸಂದರ್ಭದಲ್ಲಿ ಶಾಸಕ ಎಂ.ಕೆ.ಸೋಮಶೇಖರ್, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್, ಮೃಗಾಲಯ ನಿರ್ದೇಶಕ ಬಿ.ಪಿ.ರವಿ, ಕಾವೇರಿ ಆರ್ಟ್ ಅಂಡ್ ಕ್ರಾಪ್ಟ್ ಎಂಪೋರಿಯಂನ ವ್ಯವಸ್ಥಾಪಕ ಪರಶುರಾಮ್, ಮಾರುಕಟ್ಟೆ ವ್ಯವಸ್ಥಾಪಕ ಸುಲಾವುದ್ದೀನ್ ಮುಂತಾದವರಿದ್ದರು.
ಪಾರಂಪರಿಕ ಕರಕುಶಲ ಕಲೆಯನ್ನು ಉಳಿಸಬೇಕಿದೆ. ಇದಕ್ಕಾಗಿ ಸಂಕೀರ್ಣದಿಂದ ಕಚ್ಚಾವಸ್ತುಗಳಾದ ಶ್ರೀಗಂಧ, ಬೆಳ್ಳಿ, ಸತುಗಳನ್ನು ಶೇ.50 ರಿಯಾಯಿತಿ ದರದಲ್ಲಿ ಕುಶಲಕರ್ಮಿಗಳಿಗೆ ನೀಡಲಾಗುತ್ತಿದೆ. ಇದರ ಜತೆಗೆ ಸಾವಿರಾರು ಕುಶಲಕರ್ಮಿಗಳಿಗೆ ಉದ್ಯೋಗವನ್ನು ಕಲ್ಪಿಸಲಾಗಿದೆ.
-ಆರ್.ಪಿ.ಶರ್ಮಾ, ವ್ಯವಸ್ಥಾಪಕ ನಿರ್ದೇಶಕ, ಕಾವೇರಿ ಆರ್ಟ್ ಅಂಡ್ ಕ್ರಾಪ್ಟ್ ಎಂಪೋರಿಯಂ.