Advertisement
ಧಾರ್ಮಿಕ, ಸಾಮಾಜಿಕ, ದೇಸಿ ಗೋ ಸಾಕಣೆ, ಗುರುಕುಲ ಶಿಕ್ಷಣ, ಸಾವಯವ ಕೃಷಿ, ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ, ಪರಂಪರೆ-ಸಂಸ್ಕೃತಿ ರಕ್ಷಣೆ, ಸ್ತ್ರೀ ಸಬಲೀಕರಣ, ಸಭ್ಯ ಹಾಗೂ ಸಾತ್ವಿಕ ಸಮಾಜ ರೂಪಿಸಲು ತನ್ನದೇ ಆದ ಮಹತ್ವದ ಕೊಡುಗೆ ನೀಡುತ್ತಿರುವ ಸಿದ್ಧಗಿರಿಯ ಶ್ರೀ ಕಾಡಸಿದ್ದೇಶ್ವರ ಮಠ ಹಾಗೂ ಸಿದ್ಧಗಿರಿ ಗುರುಕುಲ ಪ್ರತಿಷ್ಠಾನ ಇದೀಗ ಕರಕುಶಲತೆಗೆ ಯುವಕರನ್ನು ಆಕರ್ಷಿಸುವ, ಹಳ್ಳಿಗಳಲ್ಲಿ ಉದ್ಯಮ ವಾತಾವರಣ ಸೃಷ್ಟಿಸುವ ಮಹತ್ವದ ಯೋಜನೆಗೆ ಮುಂದಾಗಿದೆ.
Related Articles
Advertisement
ಗುರುಕುಲ ಮಕ್ಕಳಿಗೂ ತರಬೇತಿ: ಸಿದ್ಧಗಿರಿ ಗುರುಕುಲ ಪ್ರತಿಷ್ಠಾನದಿಂದ ಪ್ರಾಚೀನ ಶಿಕ್ಷಣ ಪರಂಪರೆಯ ಗುರುಕುಲ ಆರಂಭಿಸಲಾಗಿದ್ದು, ಸುಮಾರು 200 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಆ ವಿದ್ಯಾರ್ಥಿಗಳಿಗೂ ಕರಕುಶಲ ತರಬೇತಿ ನೀಡಲಾಗುತ್ತದೆ. ಸಿದ್ಧಗಿರಿ ಕರಕುಶಲ ಕೇಂದ್ರದಲ್ಲಿ ಬೆಳಿಗ್ಗೆ ಕರಕುಶಲತೆ ಬಗ್ಗೆ ಆಸಕ್ತಿ ವಹಿಸುವ ಸಾರ್ವಜನಿಕರಿಗೆ ಮಧ್ಯಾಹ್ನದಿಂದ ಗುರುಕುಲ ಮಕ್ಕಳಿಗೆ ತರಬೇತಿ ನೀಡಲಾಗುತ್ತಿದೆ.
ಗುರುಕುಲದಲ್ಲಿ ಶಿಕ್ಷಣ ಮುಗಿಸಿ ಹೊರ ಬರುವ ವಿದ್ಯಾರ್ಥಿ ಯಾವುದೇ ಉದ್ಯೋಗಕ್ಕೆ ಅರ್ಜಿ ಹಾಕಿ ಎದುರು ನೋಡುವ ಬದಲು ತಾನೇ ಕೆಲವರಿಗೆ ಉದ್ಯೋಗ ನೀಡುವಂತಾಗಬೇಕು. ಏನಿಲ್ಲವೆಂದರೂ ಕನಿಷ್ಠ ತಿಂಗಳಿಗೆ 1ಲಕ್ಷ ರೂ.ಆದಾಯ ಗಳಿಸುವಂತಾಗಬೇಕೆಂಬ ಉದ್ದೇಶದೊಂದಿಗೆ ಕರಕುಶಲ ಸೇರಿ ವಿವಿಧ ನೈಜ ಜೀವನಕ್ಕೆ ಪೂರಕ ತರಬೇತಿ, ಶಿಕ್ಷಣ ನೀಡಲಾಗುತ್ತದೆ.
ಸ್ತ್ರೀ ಶಕ್ತಿ ಗುಂಪುಗಳಿಗೆ ಆದ್ಯತೆ: ಸ್ತ್ರೀ ಶಕ್ತಿ ಗುಂಪುಗಳಿಗೆ, ಮಹಿಳೆಯರು ಹಾಗೂ ಯುವಕರಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಸ್ತ್ರೀ ಶಕ್ತಿ ಗುಂಪುಗಳಿಗೆ ಕಸೂತಿ, ಗೊಂಬೆ ಮಾಡುವುದು, ಕೌದಿ ತಯಾರು, ಆಹಾರ ಸಂಸ್ಕರಣೆ ಇನ್ನಿತರ ತರಬೇತಿ ನೀಡಲಾಗುತ್ತದೆ. ಮಹಿಳೆಯರು ಮನೆಯಲ್ಲೇ ಕೌದಿ ತಯಾರಿಸಿ ಮಾಸಿಕ 6-10 ಸಾವಿರ ರೂ.ವರೆಗೆ ಗಳಿಸಬಹುದಾಗಿದೆ.
ಕರಕುಶಲ ತರಬೇತಿ ಪಡೆಯುವವರು ತಮ್ಮ ಹಳ್ಳಿಗಳಲ್ಲೇ ಅವುಗಳ ಮಾರಾಟಕ್ಕೆ ಮುಂದಾಗಬೇಕು. ಜತೆಗೆ ಉಳಿದ ಉತ್ಪನ್ನಗಳನ್ನು ಸಿದ್ಧಗಿರಿ ಕರಕುಲಶ ಕೇಂದ್ರದಿಂದ ಖರೀದಿಸಲಾಗುವುದು. ಉದ್ಯೋಗಕ್ಕಾಗಿ ಯುವಕರು ನಗರಕ್ಕೆ ವಲಸೆ ಹೋಗುವ ಬದಲು ತಮ್ಮ ಹಳ್ಳಿಗಳಲ್ಲೇ ಸ್ವಯಂ ಉದ್ಯಮಿಗಳನ್ನಾಗಿ ಮಾಡುವ ಗುರಿ ಹೊಂದಲಾಗಿದೆ. ಮುಂದಿನ ದಿನಗಳಲ್ಲಿ ಕರಕುಶಲ ವಿವಿ ಸ್ಥಾಪಿಸುವ ಚಿಂತನೆ ಇದೆ.– ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಸಿದ್ಧಗಿರಿ ಮಠ – ಅಮರೇಗೌಡ ಗೋನವಾರ