ಬದುಕಿನಲ್ಲಿ ಯಾರೂ ಹುಟ್ಟುತ್ತಲೇ ಸಾಧಕರಾಗಲ್ಲ. ಎಲ್ಲರೂ ಆಯಾ ಪರಿಸ್ಥಿತಿಯಲ್ಲಿ ಕುಂಟುತ್ತಾ, ಈಜುತ್ತಾ, ಬೀಳುತ್ತಾ,ಓಡುತ್ತಾ ಸಾಧಕರಾಗುವುದು. ಎಲ್ಲರೊಳಗೊಂದು ನ್ಯೂನತೆ ಇದ್ದೇ ಇರುತ್ತದೆ. ಕೆಲವರಿಗೆ ಮಾನಸಿಕವಾಗಿ, ಇನ್ನೂ ಕೆಲವರಿಗೆ ದೈಹಿಕವಾಗಿ. ಕೆಲವರಿಗೆ ಬೆಳೆಯುತ್ತಾ ಇನ್ನೂ ಕೆಲವರಿಗೆ ಹುಟ್ಟುತ್ತಾ.ಒಟ್ಟಿನಲ್ಲಿ ಎಲ್ಲರಿಗೂ ಒಂದು ನ್ಯೂನತೆ. ಆದರೆ ನಮ್ಮ ಕಣ್ಣಿಗೆ ಕಾಣುವುದು ಇನ್ನೊಬ್ಬರ ನ್ಯೂನತೆ ವಿನಃ ನಮ್ಮ ನ್ಯೂನತೆ ಅಲ್ಲ.
ಹೀಗೆ ನ್ಯೂನತೆಯಿಂದಲೇ ತಾಯಿಯ ಗರ್ಭದಿಂದ ಹೊರಬಂದವಳು ಜಾರ್ಖಂಡಿನ ಬಸಂತಿ. ಹುಟ್ಟುತ್ತಲೇ ಎರಡು ಕೈಗಳು ಇರಲಿಲ್ಲ. ಕೈಗಳೇ ಇಲ್ಲದ ಬಸಂತಿಯನ್ನು ಅಪ್ಪ ಅಮ್ಮ ಪ್ರತಿನಿತ್ಯ ಪ್ರೀತಿಯಿಂದ ಸಾಕಿ ಸಲಹುತ್ತಾರೆ. ಕ್ಷಣಗಳು ದಿನಗಳಾಗಿ, ದಿನಗಳು ತಿಂಗಳಾಗಿ,ವರ್ಷಗಳು ಉರುಳುತ್ತಿದ್ದಂತೆ ಬಸಂತಿಯ ಪರಿಸ್ಥಿತಿಯನ್ನು ಮನಗಂಡ ತಂದೆ ತಾಯಿ ಆಕೆಯನ್ನು ಯಾವುದೇ ಕಾರಣಕ್ಕೂ ಶಾಲೆಯ ಹೊಸ್ತಿಲಿಗೆ ಹೋಗದಂತೆ ತೀರ್ಮಾನವನ್ನು ಮಾಡುತ್ತಾರೆ. ತನ್ನ ಮಗಳು ಬರೆಯಲು ಅಸಮರ್ಥಳು, ಅವಳಿಗೆ ಬರೆಯಲು ಕೈಗಳಿಲ್ಲ ಎನ್ನುವ ಕೂರಗಿನಿಂದ ಬಸಂತಿಯ ತಂದೆ ತಾಯಿ ಆಕೆಯನ್ನು ಶಾಲೆಗೆ ಕಳಿಸಲು ಹಿಂದೇಟು ಹಾಕುತ್ತಾರೆ.
ಕಲಿಯುವ ಹುಮ್ಮಸ್ಸು; ಕಾಲುಗಳೇ ಕೈಗಳಾದವು:
ಆರು ವರ್ಷ ತುಂಬಿದ ಮೇಲೆ ಬಸಂತಿ ತನ್ನ ತಂದೆ ತಾಯಿಯ ಮೇಲೆ ತಾನು ಓದಬೇಕು ಎನ್ನುವ ಒತ್ತಡವನ್ನು ಹಾಕಲು ಆರಂಭಿಸುತ್ತಾಳೆ.ಬಾಲ್ಯದ ಆಟ, ಅಂಗನವಾಡಿಯ ಪಾಠ ಅದು ಯಾವುದರ ಅನುಭವದ ರುಚಿಯನ್ನು ಕಾಣದೇ ಬಸಂತಿ ಕೊನೆಗೂ ತಂದೆ ತಾಯಿಯ ಮನಸ್ಸನ್ನು ಗೆಲ್ಲುತ್ತಾಳೆ. ಓದಬೇಕು ಎನ್ನುವ ಹುಮ್ಮಸ್ಸಿಗೆ ಸ್ಥಳೀಯ ಶಾಲೆಯೊಂದಕ್ಕೆ ಸೇರಿಕೊಳ್ಳುತ್ತಾರೆ. ಪ್ರಾರಂಭದ ದಿನಗಳಲ್ಲಿ ಕೈಗಳಿಲ್ಲದೆ ಹೇಗೆ ಬರೆಯುತ್ತಾಳೆ ಎನ್ನುವ ಅಂತೆ ಕಂತೆಯ ಮಾತುಗಳು ಕೇಳಿ ಬರುತ್ತವೆ.
ಬಸಂತಿ ಹಠಕ್ಕೆ ಮನಸೋತ ತಂದೆ-ತಾಯಿ ಬಸಂತಿಯನ್ನು ಸ್ಥಳೀಯ ಶಾಲೆಯೊಂದಕ್ಕೆ ಸೇರಿಸುತ್ತಾರೆ. ಬಸಂತಿಯನ್ನು ನೋಡಿ ಉಳಿದ ಮಕ್ಕಳಿಗೆ ಭಿನ್ನ ಭಾವನೆ ಬರುತ್ತದೆ. ಆದರೆ ಬಸಂತಿ ಮಾತ್ರ ಉಳಿದವರನ್ನು ನೋಡಿ ಒಂದೇ ಭಾವನೆಯಲ್ಲಿ ಕಲಿಯುತ್ತಾಳೆ,ಬೆಳೆಯುತ್ತಾಳೆ ಜೊತೆಗೆ ಕೈಗಳಿಲ್ಲದಿದ್ರೇನು ತನ್ನ ಕಾಲುಗಳೇ ತನ್ನ ಕೈಗಳು ಎನ್ನುವ ರೀತಿಯಲ್ಲಿ ಪ್ರತಿದಿನ ಅಕ್ಷರಗಳನ್ನು ಬರೆಯಲು ಆರಂಭಿಸುತ್ತಾಳೆ. ಪೆನ್ ಅನ್ನು ತನ್ನ ಕಾಲುಗಳ ಬೆರಳಿನಲ್ಲಿ ಒತ್ತಿ ಹಿಡಿದು ಒಂದೊಂದೇ ಅಕ್ಷರಗಳನ್ನು ಬರೆಯುವ ಅಭ್ಯಾಸ ಮುಂದುವರೆಸಿ ಪ್ರತಿದಿನದ ಹವ್ಯಾಸವನ್ನಾಗಿ ಮಾಡಿಕೊಳ್ಳುತ್ತಾರೆ. ಈ ಪಯಣ ಬಸಂತಿಗೆ ಹೇಳಿದ್ದಷ್ಟು ಸುಲಭವಾಗಿರಲಿಲ್ಲ. ಯೋಚಿಸಿದ್ದಷ್ಟು ಕಠಿಣವೂ ಆಗಿರಲಿಲ್ಲ. ಅಚಲವಾದ ಮನಸ್ಸನ್ನು ಹೊಂದಿದ್ದರೆ ಎಲ್ಲವೂ ಸಾಧ್ಯ ಎನ್ನುವುದನ್ನು ಬಸಂತಿ ಮನಗಂಡಿದ್ದಳು.
ತಾನು ಕಲಿತಳು; ಇತರರನ್ನು ಬೆಳೆಸಿದಳು:
ಬಸಂತಿಯ ವಿದ್ಯಾಭ್ಯಾಸ ಇದೇ ರೀತಿ ಮುಂದುವರೆಯಿತು. 1993 ರಲ್ಲಿ ಬಸಂತಿ ಹತ್ತನೇ ತರಗತಿ ಪಾಸ್ ಮಾಡುತ್ತಾಳೆ. ಇದು ಆರಂಭವಷ್ಟೇ ಎನ್ನುವ ನಿರ್ಧಾರವನ್ನಿಟ್ಟುಕೊಂಡು ಮನೆಯಲ್ಲಿ ಸುಮ್ಮನೆ ಕೂರದೆ ಅಕ್ಕಪಕ್ಕದ ಮಕ್ಕಳಿಗೆ ಟ್ಯೂಷನ್ ತರಗತಿಯನ್ನು ನೀಡಿ ಹಣಗಳಿಸುವ ಮೊದಲ ಹಂತಕ್ಕೆ ಏರುತ್ತಾಳೆ. ಈ ಮಧ್ಯೆ ಬಸಂತಿಯ ತಂದೆ ಹಾಗೂ ತಮ್ಮ ಕಾರ್ಖಾನೆ ವಹಿವಾಟು ಸ್ಥಗಿತದಿಂದ ಇದ್ದ ಕೆಲಸವನ್ನು ಕಳೆದುಕೊಂಡು ಮನೆಯಲ್ಲಿ ಕೂರುವ ಪರಿಸ್ಥಿತಿ ಬರುತ್ತದೆ. ಮನೆಯ ಎಲ್ಲಾ ಜವಾಬ್ದಾರಿಯ ಹೊರೆ ಬಸಂತಿಯ ಮೇಲೆ ಬೀಳುತ್ತದೆ.
ಈ ನಡುವೆ ಬಸಂತಿ ಮುಂದೆ ಸಮಾಜಶಾಸ್ತ್ರದ ವಿಷಯದ ಮೇಲೆ ಬಿ.ಎ ಪದವಿಯನ್ನು ಪೂರ್ತಿಗೊಳಿಸುತ್ತಾಳೆ. ತಾನು ಏನಾದರೂ ಮಾಡಬೇಕು ಎನ್ನುವ ಕನಸು ಕಾಣುತ್ತಿದ್ದ ಬಸಂತಿಗೆ ಶಿಕ್ಷಕಿ ಆಗುವ ಆಸೆ ಚಿಗುರುತ್ತದೆ. ಆದರೆ ಈ ಸಮಾಜ ಬಸಂತಿಯ ಆಸೆ ಚಿಗುರಿದ್ದಷ್ಟು ಚಿವುಟುವ ಪ್ರಯತ್ನವನ್ನು ಮಾಡುತ್ತದೆ. ಬಸಂತಿ ಶಿಕ್ಷಕಿಯ ಹುದ್ದೆಗಾಗಿ ಅಲೆಯುತ್ತಾಳೆ. ಕೊನೆಗೆ ಸ್ಥಳೀಯ ಶಾಲೆವೊಂದರಲ್ಲಿ ಗುತ್ತಿಗೆಯ ಆಧಾರದಲ್ಲಿ ಬಸಂತಿಗೆ ಶಿಕ್ಷಕಿಯ ಹುದ್ದೆ ದೊರೆಯುತ್ತದೆ.
ಇಂದು ಬಸಂತಿ ರೂಢಬಾದ್ ಶಾಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಳೆದ 12 ವರ್ಷಗಳಿಂದಲೂ ಕಾಲುಗಳನ್ನೇ ತನ್ನ ಕೈಗಳಂತೆ ಬಳಸಿಕೊಂಡು ಬ್ಲ್ಯಾಕ್ ಬೋರ್ಡ್ ನ ಮೇಲೆ ಒಂದು ಕಾಲಿನಲ್ಲಿ ನಿಂತುಕೊಂಡು ಅಕ್ಷರಗಳನ್ನು ಬರೆಯುತ್ತಾಳೆ. ಅಕ್ಷರಗಳನ್ನು ಡೆಸ್ಟರ್ ನಿಂದ ಒರೆಸುತ್ತಾಳೆ,ಪರೀಕ್ಷಾ ಪೇಪರ್ ಗಳನ್ನು ತಿದ್ದುತ್ತಾಳೆ. ಮಕ್ಕಳ ಪಾಲಿಗೆ ಬಸಂತಿ ಟೀಚರ್ ಅಂದರೆ ಸ್ಪೂರ್ತಿ ಹಾಗೂ ಮಾರ್ಗದರ್ಶಿ. ಸಮಾಜಕ್ಕೂ ಇಂಥ ಬಸಂತಿ ಟೀಚರ್ ಗಳೇ ಜೀವನಕ್ಕೊಂದು ಮುನ್ನಡೆಯುವ ದಾರಿದೀಪ…
– ಸುಹಾನ್ ಶೇಕ್