ದಾವಣಗೆರೆ: ಶಿವಮೊಗ್ಗದ ಕುಖ್ಯಾತ ರೌಡಿ ಶೀಟರ್ ಹಂದಿ ಅಣ್ಣಿ ಕೊಲೆ ಪ್ರಕರಣದ ಆರೋಪಿಯ ಕೊಲೆ ಮತ್ತೋರ್ವ ಆರೋಪಿತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ನಾಲ್ವರನ್ನು ಗುರುವಾರ ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗದ ಸುನೀಲ್, ವೆಂಕಟೇಶ್, ಅಭಿಲಾಷ್, ಪವನ್ ಬಂಧಿತರು. ನಾಲ್ವರು ಕೊಲೆಗಡುಕರು ಹಾವೇರಿ ಜಿಲ್ಲೆಯ ಶಿಗ್ಗಾವಿ ಪೊಲೀಸರಿಗೆ ಶರಣಾಗಿದ್ದಾರೆ ಎನ್ನಲಾಗುತ್ತಿದ್ದು, ನಾಲ್ವರನ್ನು ಬಂಧಿಸಿ, ವಿಚಾರಣೆ ಸಹ ನಡೆಸಲಾಗುತ್ತಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್ ತಿಳಿಸಿದ್ದಾರೆ.
ನಾಲ್ವರು ಆರೋಪಿಗಳು ಬುಧವಾರ ದಾವಣಗೆರೆ ಜಿಲ್ಲೆಯ ಚೀಲೂರು-ಗೋವಿನಕೋವಿ ಬಳಿ ರೌಡಿ ಶೀಟರ್ ಹಂದಿ ಅಣ್ಣಿ ಕೊಲೆ ಪ್ರಕರಣದ ಆರೋಪಿಗಳಾಗಿದ್ದ ಮೂಲತಃ ಹರಿಹರ ತಾಲೂಕಿನ ಭಾನುವಳ್ಳಿಯ ಅಂಜನಿ ಅಲಿಯಾಸ್ ಆಂಜನೇಯ (30) ಮತ್ತು ಮಧು (28) ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಅಂಜನಿ ಅಲಿಯಾಸ್ ಆಂಜನೇಯ ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿರುವ ಮಧುವನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿವಮೊಗ್ಗದ ಕುಖ್ಯಾತ ರೌಡಿ ಶೀಟರ್ ಹಂದಿ ಅಣ್ಣಿ ಕೊಲೆ ಪ್ರಕರಣದ ಆರೋಪಿಗಳಾಗಿದ್ದ ಅಂಜನಿ ಮತ್ತು ಮಧು ಕೆಲವೇ ದಿನಗಳ ಹಿಂದೆಯಷ್ಟೇ ಜಾಮೀನು ಮೇಲೆ ಹೊರ ಬಂದಿದ್ದರು. ಶಿವಮೊಗ್ಗದ ನ್ಯಾಯಾಲಯಕ್ಕೆ ಹಾಜರಾಗಿ ಬೈಕ್‌ನಲ್ಲಿ ವಾಪಾಸ್ ಆಗುತ್ತಿರುವಾಗ ಚೀಲೂರು ಗೋವಿನಕೋವಿ ಬಳಿ ಸ್ಕಾರ್ಪಿಯೋದಲ್ಲಿ ಬಂದ ನಾಲ್ವರು ಬೈಕ್‌ಗೆ ಡಿಕ್ಕಿ ಹೊಡೆಸಿ, ಅಡ್ಡಗಟ್ಟಿ ಏಕಾಏಕಿ ಮಾರಕಾಸ್ತ್ರಗಳಿಂದ ಭೀಕರ ದಾಳಿ ನಡೆಸಿದ್ದರು.
ಇದನ್ನೂ ಓದಿ: ವಿಜಯಪುರ: ಕೇಂದ್ರ ಸಚಿವೆ ಸಾಧ್ವಿ ನಿರಂಜನಾ ಜ್ಯೋತಿ ಕಾರು ಅಪಘಾತ