ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳ ಪ್ರದರ್ಶನವೊಂದು ಇತ್ತೀಚೆಗೆ ಬ್ರಹ್ಮಾವರದ ಆವರ್ಸೆ ಸರಕಾರಿ ಪ್ರೌಢಶಾಲೆಯಲ್ಲಿ ಎರಡು ದಿನ ನಡೆಯಿತು. ಉಡುಪಿ ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಸೃಜನಾತ್ಮಕವಾಗಿ ರಚಿಸಿರುವ ಚಿತ್ರಕಲೆ ಮತ್ತು ಕ್ರಾಫ್ಟ್ ಕೃತಿಗಳ ರಚನೆ, ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನ ನಡೆದು ಶಾಲೆಯ ಎಲ್ಲಾ ಕೊಠಡಿಗಳು ಕಲಾಕೃತಿಗಳಿಂದ ತುಂಬಿತುಳುಕಿದವು. ಕಲಾಕೃತಿಗಳ ಸೊಬಗನ್ನು ಸವಿಯಲು ಎರಡು ದಿನ ಸಾಲದು ಎಂಬ ಗೊಣಗಾಟ ಕೇಳಿಬರುತ್ತಿತ್ತು. ಕಿರಿಯ ಕರಗಳ ಕರಕುಶಲತೆಗೆ ಎಲ್ಲರೂ ಮನಸೋತರು.
ಉಡುಪಿ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಪ್ರೌಢಶಾಲಾ ವೃತ್ತಿ ಶಿಕ್ಷಣ ಶಿಕ್ಷಕರ ಸಂಘ ಹಾಗೂ ಚಿತ್ರಕಲಾ ಶಿಕ್ಷಕರ ಸಂಘಗಳು ಜಂಟಿಯಾಗಿ ಆಯೋಜಿಸಿದ ಈ ಕಲಾಪ್ರದರ್ಶನದಲ್ಲಿ ಪ್ರತಿಯೊಂದು ಶಾಲೆಯ ಮಕ್ಕಳೂ ವಿಶಿಷ್ಟ ಉಮೇದ್ವಾರಿಕೆಯೊಂದಿಗೆ ಅಚ್ಚುಕಟ್ಟಾಗಿ ಚಿತ್ರಗಳನ್ನು, ಕರಕುಶಲ ವಸ್ತುಗಳನ್ನು ಜೋಡಿಸಿಟ್ಟಿದ್ದರು. ಸ್ವತಃ ಮಕ್ಕಳೇ ತಮ್ಮ ಸೃಷ್ಟಿಯೆದುರು ತಾವು ಬೆರಗುಗೊಂಡರು. ಇನ್ನಷ್ಟು ಹೊಸ ಕಲಾಕೃತಿ ರಚಿಸಬೇಕೆಂಬುದಕ್ಕೆ ಈ ಕಲಾಪ್ರದರ್ಶನ ಪ್ರೇರಣೆಯಾಯಿತು.
ಕಸದಿಂದ ರಸ ಎಂಬಂತೆ ಅನುಪಯುಕ್ತ ವಸ್ತುಗಳಿಂದ ರಚಿಸಿದ ಕಲಾಕೃತಿಗಳು ತುಂಬಾ ಇದ್ದವು. ಜೊತೆಗೆ ಪ್ರಕೃತಿಯ ವಸ್ತುಗಳನ್ನು ಬಳಸಿ ರಚಿಸಿದ ಕೃತಿಗಳು, ಸಿದ್ಧವಸ್ತುಗಳನ್ನು ಬಳಸಿ ರಚಿಸಿದ ಕಲಾಕೃತಿಗಳು ಹಾಗೂ ತೋಟಗಾರಿಕೆಯ ಫಲಪುಷ್ಪಗಳು, ಔಷಧೀಯ ಸಸ್ಯಗಳು, ಕಸಿಗಿಡಗಳು ಪ್ರದರ್ಶನದಲ್ಲಿದ್ದವು. ತರಕಾರಿ ಕತ್ತರಿಸಿ ಮೂಡಿಸಿದ ಮಾದರಿಗಳು, ನಿರುಪಯೋಗಿ ರಟ್ಟು, ಕಾಗದ, ಗೆರಟೆ, ಸ್ಟ್ರಾ, ನಾರು, ಬೀಜ, ಧವಸಧಾನ್ಯ, ಮಣಿಗಳು, ಪ್ಲಾಸ್ಟಿಕ್ ಬಾಟಿÉಗಳಿಂದ ಸೃಷ್ಟಿಸಿದ ಹೂದಾನಿಗಳು, ಹಕ್ಕಿ ಗೂಡುಗಳು, ಗೂಡುದೀಪಗಳು, ಭತ್ತದ ಕಣಜ, ಯಕ್ಷಗಾನ ಮುಖವಾಡಗಳು, ಬಟ್ಟೆಯ ಕಸೂತಿಗಳು, ಆಭರಣಗಳು, ಶೃಂಗಾರ ಸಾಧನಗಳು, ಮನೆಗುಡಿಸಲುಗಳ ಮಾದರಿಗಳು, ಟೊಪೊಗ್ರಫಿ ಭೂದೃಶ್ಯಗಳು, ಬಲೂನಿನ ಮುಖವಾಡಗಳು ರಾಶಿ ರಾಶಿ ಇದ್ದವು. ಮಕ್ಕಳ ಮೆಚ್ಚಿನ ವಿಷಯಗಳಾದ ಗುಡ್ಡ-ಬೆಟ್ಟಗಳಿರುವ ನಿಸರ್ಗ, ಮಳೆಗಾಲದ ದೃಶ್ಯ, ಕಡಲತೀರ, ಕಂಬಳ, ಕೋಳಿ ಅಂಕ, ತನ್ನ ಮನೆ ಹಾಗೂ ಸುತ್ತಲಿನ ವಾತಾವರಣ, ನನ್ನ ಶಾಲೆ, ನನ್ನ ಮೆಚ್ಚಿನ ನಾಯಿ, ದೀಪಾವಳಿ-ಕ್ರಿಸ್ಮಸ್ ಹಬ್ಬ, ಬರ್ತ್‌ಡೇ ಆಚರಣೆ, ಉತ್ಸವ-ಜಾತ್ರೆಗಳು, ಆಟದ ಮೈದಾನ, ಕುಂಬಾರ, ಬಡಗಿ, ದೇವದೇವತೆಗಳ ರೂಪಗಳು ಗ್ಲಾಸ್ ಪೈಟಿಂಗ್, ಎಂಬ್ರಾಯಟರಿ, ಕೊಲಾಜ್ ಹೀಗೆ ವಿವಿಧ ಮಾಧ್ಯಮಗಳಲ್ಲಿ ಆಕರ್ಷಕವಾಗಿ ಮೂಡಿಬಂದಿದ್ದವು. ಅಯಾ ಶಾಲೆಯ ವೃತ್ತಿಶಿಕ್ಷಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ನಿಂತು ಕಲಾಪ್ರದರ್ಶನವನ್ನು ಚೆಂದಗಾಣಿಸಿಕೊಟ್ಟರು. ಎರಡನೆ ದಿನ ನಡೆದ ಸಮಾರಂಭದಲ್ಲಿ ಅತ್ಯುತ್ತಮ ಮಾದರಿ ರಚಿಸಿದ ಶಾಲೆಗಳಿಗೆ ಬಹುಮಾನ ಹಾಗೂ ಹೂ ಗಿಡಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.
ಉಪಾಧ್ಯಾಯ ಮೂಡುಬೆಳ್ಳೆ