Advertisement

ಕೈ ಮಗ್ಗವನ್ನು ಕೈ ಹಿಡಿಯುವವರು?

12:05 PM Oct 07, 2021 | Team Udayavani |

ಕುಮಟಾ: ತಾಲೂಕಿನ ಬಾಡದ ಖಾದಿ ವಸ್ತ್ರ ಉತ್ಪಾದನಾ ಕೇಂದ್ರದ ನೂಲುವ, ನೇಯುವ ಕೈಗಳು ಕಳೆದ ಮೂರು ವರ್ಷಗಳಿಂದ ಸಂಪೂರ್ಣವಾಗಿ ಕೆಲಸ ನಿಲ್ಲಿಸಿವೆ. ಇದನ್ನೇ ಅವಲಂಬಿಸಿದ್ದ ನೇಕಾರ ಕುಟುಂಬಗಳು ಬದುಕು ನೀಗಿಸಲು ಚರಕ ಕೈಬಿಟ್ಟು ಪರ್ಯಾಯ ಮಾರ್ಗದಲ್ಲಿ ಸಾಗುವಂತಾಗಿದೆ.

Advertisement

ಸುಮಾರು ೧೯೫೮ ರಲ್ಲಿ ಬಾಡದಲ್ಲಿ ಆರಂಭವಾದ ಖಾದಿ ವಸ್ತ್ರ ಉತ್ಪಾದನಾ ಕೇಂದ್ರದಲ್ಲಿ ಮೊದಲು ಕೇವಲ ಹೆಣ್ಣು ಮಕ್ಕಳು, ಮಹಿಳೆಯರು ಚರಕದಲ್ಲಿ ಹತ್ತಿಯ ನೂಲು ಸಿದ್ಧಪಡಿಸಿಕೊಟ್ಟರೆ ಗಂಡಸರೂ ಕೈಮಗ್ಗದಲ್ಲಿ ವಸ್ತ್ರ ನೇಯ್ಗೆ ಮಾಡುತ್ತಿದ್ದರು. ಸುತ್ತಮುತ್ತಲ ೧೫೦ ಕ್ಕೂ ಹೆಚ್ಚು ಕುಟುಂಬಗಳು ಖಾದಿ ನೇಯ್ಗೆಯಲ್ಲಿ  ಉತ್ತಮವಾಗಿ ಜೀವನ ನಿರ್ವಹಣೆ ನಡೆಸಿದ್ದರು. ಇದೆಲ್ಲವನ್ನೂ ನಿರ್ವಹಿಸುತ್ತಿದ್ದ ಉತ್ತರ ಕನ್ನಡ ಜಿಲ್ಲಾ ಖಾದಿ ಗ್ರಾಮಸೇವಾ ಸಮಿತಿ ಇವರಿಗೆ ಬೆಂಬಲವಾಗಿ ನಿಂತಿತ್ತು.

ಇದನ್ನೂ ಓದಿ;- ದಸರಾ ಗೊಂಬೆ ಬೇಡಿಕೆ ಶೇ.30 ಅಧಿಕ

ತದನಂತರ ಬದಲಾದ ಕಾಲಘಟ್ಟದಲ್ಲಿ ಕಳೆದ ೧೫- ೨೦ ವರ್ಷಗಳಿಂದ ಖಾದಿ ನೇಯ್ಗೆ ಕುಂಠಿತಗೊಳ್ಳುತ್ತಾ ಸಾಗಿತು. ಆಧುನಿಕ ಪೋಷಾಕುಗಳ ಭರಾಟೆಯಲ್ಲಿ ಹಿಂದೆ ಸ್ವಾತಂತ್ರ್ಯ ಹೋರಾಟದ ಮಾನ ಹೆಚ್ಚಿಸಿದ್ದ ಖಾದಿಯ ಶುದ್ಧ ಹಾಗೂ ಸಾಂಪ್ರದಾಯಿಕ ಮಹತ್ವಗಳು ಬದಲಾಗಿವೆ. ಕ್ರಮೇಣ ಬಾಡದ ನೇಯ್ಗೆ ಕೇಂದ್ರದಲ್ಲಿ ಯುವ ಕೆಲಸಗಾರರು ಬರುವುದು ನಿಂತಿತು. ಕೇಂದ್ರ ಉತ್ಪಾದನೆ ಸ್ಥಗಿತಗೊಳಿಸುವ ಕಾಲಕ್ಕೆ ೧೮ ಮಂದಿ ಮುದಿ ವಯಸ್ಸಿನ ನೇಕಾರರು ಮಾತ್ರ ಉಳಿದುಕೊಂಡಿದ್ದು ಖಾದಿಯ ಮೂಲ ಆಶಯಗಳ ಅವನತಿಯಾಗಿದ್ದರಿಂದ ಸದ್ಯ ಉತ್ತರ ಕನ್ನಡ ಜಿಲ್ಲಾ ಖಾದಿ ಗ್ರಾಮಸೇವಾ ಸಮಿತಿ ಏನೂ ಮಾಡಲಾಗದೇ ಕೈಚೆಲ್ಲಿ ಕುಳಿತಿದೆ.

Advertisement

ಈ ಕುರಿತು ಉದಯವಾಣಿಯೊಂದಿಗೆ ಮಾತನಾಡಿದ ಬಾಡ ಖಾದಿ ವಸ್ತ್ರ ತಯಾರಿಕೆ ಕೇಂದ್ರದ ವ್ಯವಸ್ಥಾಪಕ ನಿತ್ಯಾನಂದ ಭಟ್ ಹೇಳುವಂತೆ, ಹೊಸ ಕೆಲಸಗಾರರು ಸಿಗುವುದಿಲ್ಲ. ಸಿಕ್ಕರೂ ದಿನಕ್ಕೆ ೫೦೦ ರೂ ಕನಿಷ್ಟ ಕೂಲಿ ಕೊಡುವಷ್ಟು ಕೆಲಸವೂ ಇಲ್ಲ. ಈಗಿರುವವರು ೭೫ ರಿಂದ ೮೦ ವರ್ಷದವರು. ೨೯ ವರ್ಷದ ಹಿಂದೆ ನಾನು ಕೆಲಸ ಆರಂಭಿಸುವಾಗ ೧೨೦ ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದರು. ಯಾಕೆ ಇಷ್ಟೊಂದು ಕಷ್ಟಪಟ್ಟು ಕೆಲಸ ಮಾಡಬೇಕೆಂಬ ಭಾವನೆಯಿಂದ ಹಲವರು ಬಿಟ್ಟಿದ್ದಾರೆ.

ನಿಗದಿತ ಪ್ರಮಾಣದಲ್ಲಿ ಉತ್ಪಾದನೆ ಮಾಡಬೇಕಾಗುತ್ತದೆ. ಹೆಚ್ಚು ಬೇಡಿಕೆಯಿರುವ ವಸ್ತ್ರ ಸಿದ್ಧಪಡಿಸಿ ಕೊಡಬೇಕಾಗುತ್ತದೆ. ಆದರೆ ಅದರಿಂದ ನಮ್ಮ ಕೆಲಸಗಾರರಿಗೆ ಕನಿಷ್ಟ ದಿನಗೂಲಿ ಹುಟ್ಟುತ್ತಿಲ್ಲ. ನಾಡಿನ ಕೆಲವೆಡೆ ಖಾಸಗಿ ಮಗ್ಗಗಳು ಬೆಳೆದಿವೆ. ಮುಖ್ಯವಾಗಿ ಇಲ್ಲಿ ಕೆಲಸಗಾರರ ಕೊರತೆಯಿಂದ ಸಮಸ್ಯೆಯಾಗಿದೆ. ಕಳೆದ ೨ ವರ್ಷದ ಹಿಂದೆ ನೂಲು ಖಾಲಿಯಾಯಿತು. ಫೆಡರೇಷನ್​ನವರು ನೂಲು ಕೊಡಲು ವಿಳಂಬ ಮಾಡಿದರು. ಸರ್ಕಾರದಿಂದ ಸಿಗಬೇಕಿದ್ದ ೮-೯ ಲಕ್ಷರೂ ರಿಯಾಯಿತಿ ಬರಲಿಲ್ಲ. ನೇಯ್ಗೆ ಜನ ಒಬ್ಬೊಬ್ಬರಾಗಿ ಬಿಟ್ಟು ಹೋದರು. ಹೀಗಾಗಿ ನಮಗೂ ಉತ್ಪಾದನೆ ನಿಲ್ಲಿಸುವುದು ಅನಿವಾರ್ಯವಾಗಿದೆ ಎನ್ನುತ್ತಾರೆ.

ಖಾದಿ ಗ್ರಾಮೋದ್ಯೋಗ ಮಂಡಳಿ ಅಧಿಕಾರಿಗಳ ಪ್ರಕಾರ, ಹಿಂದೆ ಬಾಂಬೆ ಖಾದಿ ಕಮೀಷನ್​ಗೆ ಬಾಡದ ಮಗ್ಗದ ವಸ್ತ್ರಗಳು ದೊಡ್ಡ ಪ್ರಮಾಣದಲ್ಲಿ ರವಾನೆಯಾಗುತ್ತಿತ್ತು. ಖಾದಿ ಗ್ರಾಮೋದ್ಯೋಗ ನಿಗಮ ನೇಯ್ಗೆ ಹಾಗೂ ಮಗ್ಗದ ಅಭಿವೃದ್ಧಿಗೆ ಬೇಕಾದ ಸಹಯೋಗವನ್ನು ನೀಡುತ್ತಾ ಬಂದಿತ್ತು. ಈಗಲೂ ಬಾಡದ ಕೈಮಗ್ಗ ಕೇಂದ್ರಕ್ಕೆ ಸರ್ಕಾರದಿಂದ ಲಭ್ಯವಿರುವ ಎಲ್ಲಾ  ಸವಲತ್ತುಗಳನ್ನು, ಸಹಾಯವನ್ನು ಒದಗಿಸಲು ಸಿದ್ಧವಿದೆ. ಆದರೆ ಅಲ್ಲಿನ ಸಮಸ್ಯೆಗಳು ಬಹುಮುಖವಾಗಿದೆ ಎನ್ನುತ್ತಾರೆ.

ಒಟ್ಟಾರೆ ಬಾಡದ ಕೈಮಗ್ಗ ಖಾದಿ ವಸ್ತ್ರ ಉತ್ಪಾದನಾ ಕೇಂದ್ರ ಮತ್ತೆ ಕಾರ್ಯಾರಂಭಿಸುವ ಲಕ್ಷಣಗಳು ಕ್ಷೀಣಿಸಿವೆ. ಬಹುತೇಕ‌ ಕಟ್ಟಿಗೆಯಿಂದ ನಿರ್ಮಿತವಾದ ಸಲಕರಣೆಗಳು ಇದೀಗ ಲಡ್ಡಾಗಿ ಉಪಯೋಗಿಸಲು ಬಾರದಂತಹ ಸ್ಥಿತಿ ತಲುಪಿದೆ. ಖಾದಿ ವಸ್ತ್ರಕ್ಕೆ ಬೇಡಿಕೆ ಹೆಚ್ಚಿದ್ದರೂ ಕೈಮಗ್ಗದ ಸಮಸ್ಯೆಗಳಿಗೆ ಚಿಕಿತ್ಸೆಯಾಗಬೇಕಿದೆ.

“೧೯೫೮ ರಲ್ಲಿ ಆರಂಭವಾದ ಇಲ್ಲಿನ ಕೈಮಗ್ಗ ಕೇಂದ್ರದಲ್ಲಿ ನೂರಾರು ಮಂದಿ ಕೆಲಸ ಮಾಡುತ್ತಿದ್ದರು. ಉಡುಗೆ ತೊಡುಗೆಯ ಎಲ್ಲಾ ಬಗೆಯ ಬಟ್ಟೆಗಳೂ ಇಲ್ಲಿ ತಯಾರಾಗುತ್ತಿದ್ದವು. ೪ ರೂ ಗೆ ಅಂಗಿ, ೬ ರೂಗೆ ೭ ಮೊಳದ ಪಂಚೆ ಸಿಗುತ್ತಿತ್ತು. ಈಗ ಯಾಕೆ ಬಂದ್ ಆಗಿದೆ ಎಂಬುದೇ ತಿಳಿಯುತ್ತಿಲ್ಲ.”

ನಾರಾಯಣ ಜಟ್ಟಪ್ಪ ನಾಯ್ಕ ಬಾಡ, ನೇಕಾರ

“ಸುಮಾರು ೪೦ ವರ್ಷದಿಂದ ಇಲ್ಲಿ ಕೆಲಸ ಮಾಡಿದ್ದೇವೆ. ಈಗ ಬಂದ್ ಆಗಿದೆ. ನಾವು ಕೈಮಗ್ಗ ನೇಯ್ಗೆಯನ್ನೇ ಅವಲಂಬಿಸಿದ್ದ ಸುಮಾರು ೪೦ ಕುಟುಂಬದವರು ಬೇರೆ ಉದ್ಯೋಗ ಹುಡುಕುತ್ತಿದ್ದೇವೆ. ಕಾರ್ಮಿಕ ಒಕ್ಕೂಟಕ್ಕೂ ತಿಳಿಸಿದ್ದೇವೆ. ಹೊಸ ತಲೆಮಾರಿನ ಕೆಲಸಗಾರರು ಬರುತ್ತಿಲ್ಲ. ಸರ್ಕಾರದಿಂದ ಅಗತ್ಯ ಬೆಂಬಲ ಸಿಗುತ್ತಿಲ್ಲ.”

ಚನ್ನಪ್ಪ ರಾಮ ನಾಯ್ಕ, ಬಾಡ ಕೈಮಗ್ಗದ ನೇಕಾರ.

Advertisement

Udayavani is now on Telegram. Click here to join our channel and stay updated with the latest news.

Next