Advertisement

ಜೆಡಿಎಸ್‌ನ 7 ಬಂಡಾಯ  ಶಾಸಕರಿಗೆ ಕೈ ಟಿಕೆಟ್‌ 

03:45 AM May 09, 2017 | Team Udayavani |

ಮೈಸೂರು/ಮಂಡ್ಯ: ಜೆಡಿಎಸ್‌ನ ಏಳು ಬಂಡಾಯ ಶಾಸಕರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದಲೇ ಟಿಕೆಟ್‌ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Advertisement

ಮಂಡ್ಯ ತಾಲೂಕಿನ ಕೋಡಿಕೊಪ್ಪಲು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಜೆಡಿಎಸ್‌ನ ಎಲ್ಲಾ 7 ಬಂಡಾಯ ಶಾಸಕರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲಾಗುವುದು. ಎಲ್ಲರಿಗೂ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದಲೇ ಟಿಕೆಟ್‌ ನೀಡಲಾಗುವುದು ಎಂದು ಘೋಷಿಸಿದರು.

ಬಳಿಕ, ಮೈಸೂರಿನಲ್ಲಿ ಮಾತನಾಡಿದ ಸಿದ್ದು, ಬಿಜೆಪಿ ವಿರುದ್ಧ ಹರಿಹಾಯ್ದರು. ಸಚಿವ ತನ್ವೀರ್‌ಸೇs…, ಎಂ.ಕೃಷ್ಣಪ್ಪವಿರುದ್ಧ ಯಾರೋ ಆರೋಪ ಮಾಡಿದಾಕ್ಷಣ ಅವರು ಭ್ರಷ್ಟರಾಗುವುದಿಲ್ಲ. ಇಷ್ಟಕ್ಕೂ ಭ್ರಷ್ಟಾಚಾರದ ವಿರುದ್ಧ ಮಾತನಾಡಲು ಬಿಜೆಪಿ ನಾಯಕರಿಗೆ ಯಾವ ನೈತಿಕತೆ ಇದೆ. ಬಿಜೆಪಿ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ಮಾಡಿ ಎಷ್ಟು ಜನ ಜೈಲಿಗೆ ಹೋಗಿದ್ದರು ಎಂದು ಪ್ರಶ್ನಿಸಿದರು.

ಅಂಬರೀಶ್‌ಗೆ ಕಮಲಮ್ಮನ ಜೈಕಾರ
ಅಂಬರೀಶ್‌ ಹಾಜರಾಗುವ ಕಡೆಗಳಲ್ಲೆಲ್ಲಾ ಈ ಮಹಿಳೆ ಇದ್ದೇ ಇರುತ್ತಾರೆ. ಕೈಯ್ಯಲ್ಲೊಂದು ಹಾರ ಹಿಡಿದು ಬಂದು ಎಂತಹ ಜನಸಾಗರವಿದ್ದರೂ ಅದನ್ನು ಬೇಧಿಸಿಕೊಂಡು ಹೋಗಿ ಅಂಬರೀಶ್‌ಗೆ ಹಾರ ಹಾಕಿ ಆಶೀರ್ವಾದ ಪಡೆದು ಬರುವುದು ಈಕೆಯ ಸಂಪ್ರದಾಯ. ಅದರಂತೆ ಮಂಡ್ಯ ತಾಲೂಕಿನ ಕೋಡಿಕೊಪ್ಪಲು ಗ್ರಾಮದಲ್ಲಿ ಬೀರೇಶ್ವರ ದೇವಸ್ಥಾನದ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಕಮಲಾ, ಹಾರ ಹಾಕಲು ಅವಕಾಶ ಕೋರಿದರು. ಅದಕ್ಕೆ ಸಮ್ಮತಿಸಿದ ಅಂಬರೀಶ್‌, “ಕಮಲಮ್ಮ ಬಾರಮ್ಮ’ ಎಂದು ವೇದಿಕೆಗೆ ಕರೆದರು. ವೇದಿಕೆಗೆ ಬಂದ ಕಮಲಮ್ಮ, ಮೊದಲು ಅಂಬರೀಶ್‌ಗೆ ಹಾರ ಹಾಕಿ ಆಶೀರ್ವಾದ ಪಡೆದು “ಮಂಡ್ಯದ ಹುಲಿ’ಗೆ ಜೈ, ಅಂಬರೀಶಣ್ಣಂಗೆ ಜೈ’ ಎಂದು ಘೋಷಣೆ ಕೂಗಿದರು. “ನನಗೆ ಜೈಕಾರ ಹಾಕಿದ್ದು ಸಾಕು, ಹೋಗಿ ಸಿಎಂಗೆ ಹಾರ ಹಾಕು’ ಎಂದಾಗ, ಮುಖ್ಯಮಂತ್ರಿ ಬಳಿ ತೆರಳಿ ಅವರಿಗೂ ಹಾರ ಹಾಕುವ ಮೂಲಕ ಮನದಾಸೆ ಈಡೇರಿಸಿಕೊಂಡರು.

ಜೆಡಿಎಸ್‌ನಿಂದ ಸ್ಪರ್ಧಿಸಲ್ಲ: ಚಲುವರಾಯಸ್ವಾಮಿ
ಮಂಡ್ಯ
: ಮುಂಬರುವ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಲ್ಲ. ಜೆಡಿಎಸ್‌ ವರಿಷ್ಠರು ತಮ್ಮನ್ನು ಈಗಾಗಲೇ ಅಮಾನತು ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ತಮ್ಮ ನಾಯಕರು ಎಂದು ಬಂಡಾಯ ಶಾಸಕ ಎನ್‌.ಚಲುವರಾಯಸ್ವಾಮಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ನಾಗಮಂಗಲ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ. ಬೇರೆ ಕಡೆ ಹೋಗಲ್ಲ. ಸಿದ್ದರಾಮಯ್ಯ ಅವರು ಉತ್ತಮ ಆಡಳಿತ ನೀಡುತ್ತಿದ್ದು, ಅವರು ಮತ್ತೂಮ್ಮೆ ಮುಖ್ಯಮಂತ್ರಿಯಾದರೆ ಈ ರಾಜ್ಯ ಸುಭೀಕ್ಷವಾಗಿರುತ್ತದೆ ಎಂದರು.

ಯಾರೂ ಕಾಂಗ್ರೆಸ್‌ ಬಿಡಲ್ಲ
ಮೈಸೂರು
: “ಮಾಜಿ ಸಂಸದ ಎಚ್‌.ವಿಶ್ವನಾಥ್‌ ಜೆಡಿಎಸ್‌ ಸೇರುವ ವಿಚಾರ ನನಗೆ ಗೊತ್ತಿಲ್ಲ. ಆದರೆ, ರಾಜ್ಯದ ಯಾವ ನಾಯಕರೂ ಕಾಂಗ್ರೆಸ್‌ ಬಿಟ್ಟು ಹೋಗುವುದಿಲ್ಲ’ ಎಂದು ಸಿದ್ದರಾಮಯ್ಯ ತಿಳಿಸಿದರು.

ದುಬೈ ಪ್ರವಾಸದಿಂದ ಬಂದ ನಂತರ ವಿಶ್ವನಾಥ್‌ ಜತೆ ಮಾತನಾಡುವುದಾಗಿ ಕುರುಬರ ಸಂಘದ ನಿಯೋಗಕ್ಕೆ ಭರವಸೆ ನೀಡಿದ್ದೀರಲ್ಲಾ ಎಂಬ ಪ್ರಶ್ನೆಗೆ, “ಯಾರು ಹೇಳಿದವರು? ನಾನು ಯಾರ ಜತೆಯೂ ಮಾತನಾಡಿಲ್ಲ’ ಎಂದರು.

ಸಿಎಂ ಸಭೆಗೆ ಹೋಗದಂತೆ ದಲಿತ ಮುಖಂಡರ ತಡೆ
ಕೆ.ಆರ್‌.ಪೇಟೆ
: ಮಂಡ್ಯ ಜಿಲ್ಲೆಯ ಬಸರಾಳು ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಸಿಎಂ ಸಿದ್ದರಾಮಯ್ಯ ಅವರ ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶಿಸಲು ಮುಂದಾಗಿದ್ದ ತಾಲೂಕು ದಲಿತ ಸಂಘಟನೆಯ ಮುಖಂಡರನ್ನು ಪಟ್ಟಣ ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದರು. ಸಿಎಂ ಸಭೆಯಲ್ಲಿ ದಸಂಸ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಬಹುದೆಂಬ ಮಾಹಿತಿ ಮೇರೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಈ ಕ್ರಮ ಕೈಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next