ಬೆಂಗಳೂರು: ರಾಜಕೀಯ ಲಾಭಕ್ಕಾಗಿ ಒಂದು ಕುಟುಂಬ ಇಡಿಯ ರಾಜಕಾರಣವನ್ನೇ ನಿಯಂತ್ರಿಸುವ ಪ್ರಯತ್ನ ಮಾಡುತ್ತಿದೆ. ಒಂದೇ ಕುಟುಂಬ ಅಧಿಕಾರದಲ್ಲಿ ಇರಬೇಕೆಂಬ ಕಾರಣಕ್ಕಾಗಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಆರೋಪಿಸಿದರು.
ಪಕ್ಷದ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ನಾನು ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗಿದ್ದವನು. ನನ್ನನ್ನು ಬಿಜೆಪಿಯ ಬಿ ಟೀಮ್ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ನನಗೇ ಪ್ರಮಾಣಪತ್ರ ಕೊಟ್ಟಿದ್ದರು. ಯಡಿಯೂರಪ್ಪ ವಿರುದ್ಧ ಎರಡೇ ದಿನಕ್ಕೆ ಅವಿಶ್ವಾಸ ನಿರ್ಣಯ ತಂದರು. ಬಿ.ಎಂ. ಫಾರೂಕ್ ಅವರನ್ನು ರಾಜ್ಯಸಭೆ ಅಭ್ಯರ್ಥಿಯಾಗಿ ಕಣಕ್ಕಿಳಿಸಿದಾಗ 8 ಜನ ಸೇರಿಕೊಂಡು ಸೋಲಿಸಿದರು. ಅವರ ಹೈಕಮಾಂಡ್ ಕ್ರಮ ಜರಗಿಸಲಿಲ್ಲ. ಕಾಸಿಗಾಗಿ ರಾಜಕಾರಣ (ಪೇಯ್ಡ ಪಾಲಿಟಿಕ್ಸ್) ಮಾಡಿದವರ್ಯಾರು? ದೇಶದ ಜನರನ್ನು ಮೂರ್ಖರನ್ನಾಗಿ ಮಾಡುತ್ತೀರಾ? ಎಂದು ಪ್ರಶ್ನಿಸಿದರಲ್ಲದೆ, ನಾವು ಜಾತ್ಯತೀತ ಪ್ರಜಾಪ್ರಭುತ್ವವಾದಿಗಳು ಎಂದು ಪ್ರತಿಪಾದಿಸಿದರು.
ಪ್ರಾದೇಶಿಕ ಪಕ್ಷ ಉಳಿಸಲೇಬೇಕಿದೆ
ಮೊರಾರ್ಜಿ ದೇಸಾಯಿ ಅವರು ಪಕ್ಷವನ್ನು ನನ್ನ ಕೈಗೆ ಕೊಟ್ಟ ಅನಂತರ 40 ವರ್ಷ ಹೋರಾಡಿದ್ದೇನೆ. ನೋವಿದೆ. ಪ್ರಾದೇಶಿಕ ಪಕ್ಷವನ್ನು ಉಳಿಸಲೇಬೇಕಿದೆ. ಇದು ಅವಕಾಶವಾದಿ ರಾಜಕಾರಣ ಅಲ್ಲ. ಬಿಜೆಪಿ ಜತೆಗೆ ಬೇರೆ ಯಾವ ಪಕ್ಷಗಳೂ ಹೊಂದಾಣಿಕೆ ಮಾಡಿಕೊಂಡೇ ಇಲ್ಲವೇ? ಕೇರಳದ ಮುಖಂಡರಿಗೆ ಬೇಕಿದ್ದರೆ ಪಕ್ಷದ ಅಧ್ಯಕ್ಷ ಸ್ಥಾನವನ್ನೇ ಬಿಟ್ಟುಕೊಡುತ್ತೇನೆಂದು ನೇರವಾಗಿ ಹೇಳಿದರು. ಈ ಎಲ್ಲ ಕಾರಣದಿಂದಲೇ 10 ವರ್ಷದಲ್ಲಿ ಮೊದಲ ಬಾರಿಗೆ ನಾನೇ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಾತನಾಡಿದೆ. ಕದ್ದು ಮುಚ್ಚಿ ಮಾತನಾಡುವ ಆವಶ್ಯಕತೆ ಇಲ್ಲ. ಕರ್ನಾಟಕ ರಾಜಕಾರಣದ ಸ್ಥಿತಿ ಏನು ಎಂಬುದನ್ನು ಅವರೊಂದಿಗೆ ಮಾತನಾಡಿದ ಬಳಿಕವೇ ಕುಮಾರಸ್ವಾಮಿ ಅವರು ಮಾತು ಮುಂದವರಿಸಿದ್ದು, ಪಕ್ಷದ 19 ಶಾಸಕರು, ಮೇಲ್ಮನೆಯ 8 ಸದಸ್ಯರು, ಸೋತ ಅಭ್ಯರ್ಥಿಗಳು, ಕೋರ್ ಕಮಿಟಿ ಸದಸ್ಯರ ಅಭಿಪ್ರಾಯ ಪಡೆದು ಬಿಜೆಪಿ ಜತೆ ಸೇರಿದ್ದೇವೆ ಎಂದು ಪುನರುತ್ಛರಿಸಿದರು.