Advertisement

ʼಕಾಲೇಜುಗಳಲ್ಲಿಯೂ ಕೈ ತೋಟ ಅಭಿಯಾನʼ

12:13 PM Aug 22, 2022 | Team Udayavani |

ಪಿವಿಎಸ್‌: ಆರೋಗ್ಯಯುತ ಸಮಾಜ ನಿರ್ಮಾಣ ಮಾಡುವ ನೆಲೆಯಲ್ಲಿ ಸಾವಯವ ಕೃಷಿಗೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ. ಉದಯವಾಣಿ ಪತ್ರಿಕೆ ಈ ನಿಟ್ಟಿನಲ್ಲಿ ಸಾವಯವ ಕೃಷಿಕ ಗ್ರಾಹಕ ಬಳಗದ ಜತೆಗೂಡಿ ನಗರದಲ್ಲಿ ಕೈಗೊಂಡ ಅಭಿಯಾನವನ್ನು ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಕಾಲೇಜುಗಳಲ್ಲಿಯೂ ಮುಂದುವರಿಸಲು ವಿವಿಯು ಕೈಜೋಡಿಸಲಿದೆ ಎಂದು ಮಂಗಳೂರು ವಿ.ವಿ. ಕುಲಪತಿ ಪ್ರೊ| ಪಿ.ಎಸ್‌.ಯಡಪಡಿತ್ತಾಯ ಹೇಳಿದರು.

Advertisement

ಉದಯವಾಣಿ ಹಾಗೂ ಸಾವಯವ ಕೃಷಿಕ ಗ್ರಾಹಕ ಬಳಗದ ವತಿಯಿಂದ ಲಕ್ಷ್ಮೀನಗರ ಅಪಾರ್ಟ್‌ಮೆಂಟ್‌ ಮಾಲಕರ ಸಂಘದ ಸಹಯೋಗದೊಂದಿಗೆ ಪಿವಿಎಸ್‌ ಬಳಿಯ ಲಕ್ಷ್ಮೀನಗರ ಅಪಾರ್ಟ್ ಮೆಂಟ್‌ನಲ್ಲಿ ರವಿವಾರ ಆಯೋಜಿಸಲಾದ “ಸಾವಯವ ಕೃಷಿ ಸ್ವಾವಲಂಬನೆಯ ಖುಷಿ’ ಸರಣಿಯ “ನಮ್ಮ ಕೈತೋಟ-ನಮ್ಮ ಆಹಾರ’ ಎರಡನೇ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಷಪೂರಿತ ಆಹಾರ ಸೇವಿಸುವ ಬದಲು ಮನೆಯಲ್ಲೇ ತರಕಾರಿ ಬೆಳೆದು ಅದನ್ನೇ ಸೇವಿಸಿದರೆ ಆರೋಗ್ಯಯುತ ಸಮಾಜ ನಿರ್ಮಿಸಲು ಸಾಧ್ಯ. ಎಲ್ಲ ಅಪಾರ್ಟ್‌ಮೆಂಟ್‌ನಲ್ಲಿಯೂ ಇದು ಮುಂದುವರಿಯಲಿ ಎಂದರು.

ವಿಷಮುಕ್ತ ಅಡುಗೆ ಮನೆಯಾಗಲಿ: ಮೇಯರ್‌

ಕಾರ್ಯಕ್ರಮ ಉದ್ಘಾಟಿಸಿ ಮಾತನಾ ಡಿದ ಮೇಯರ್‌ ಪ್ರೇಮಾನಂದ ಶೆಟ್ಟಿ ಅವರು ಸಾಮಾಜಿಕ ಜಾಗೃತಿಗೆ ವಿಶೇಷ ಆದ್ಯತೆ ನೀಡಿರುವ ಉದಯವಾಣಿ ಸಾವಯವ ಕೃಷಿ ಅಭಿಯಾನವನ್ನು ಇದೀಗ ಅಪಾರ್ಟ್‌ಮೆಂಟ್‌ ವ್ಯಾಪ್ತಿಯಲ್ಲಿಯೂ ಜಾರಿಗೊಳಿಸಿರುವುದು ಮಾದರಿ ಕಾರ್ಯ. ಪ್ರತೀ ಮನೆ ಮನೆಯಲ್ಲಿಯೂ ಇಂತಹ ಜಾಗೃತಿ ಮೂಡಿದರೆ ವಿಷಮುಕ್ತ ಅಡುಗೆ ಕೋಣೆ ಸಾಕಾರವಾಗಲಿದೆ ಎಂದರು.

Advertisement

ಸ್ವಾತಂತ್ರ್ಯ ಹೋರಾಟಗಾರ ವಿಟ್ಠಲ್ ಕಿಣಿ ಅವರನ್ನು ಸಮ್ಮಾನಿಸಲಾಯಿತು. ಕೆಐಓಸಿಎಲ್‌ ಸೀನಿಯರ್‌ ಮ್ಯಾನೇಜರ್‌ ಮುರುಗೇಶ್‌, ಎಂಸಿಎಫ್‌ನ ಪಿಆರ್‌ಒ ಅವಿನಂದ್‌, ರೋಟರಿ ಮಾಜಿ ಜಿಲ್ಲಾ ಗವರ್ನರ್‌ ಡಾ| ದೇವದಾಸ್‌ ರೈ, ಜಿಲ್ಲಾ ಕ್ಯಾಟರಿಂಗ್‌ ಮಾಲಕರ ಸಂಘದ ಅಧ್ಯಕ್ಷ ರಾಜ್‌ಗೋಪಾಲ್‌ ರೈ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್‌ ನಾಯಕ್‌ ಇಂದಾಜೆ, ಪ್ರಮುಖರಾದ ಪ್ರದೀಪ್‌ ಕುಲಾಲ್‌, ಅಚ್ಯುತ ಐಲ ಉಪಸ್ಥಿತರಿದ್ದರು. ‌

ಲಕ್ಷ್ಮೀನಗರ ಅಪಾರ್ಟ್‌ ಮೆಂಟ್‌ ಮಾಲಕರ ಸಂಘದ ಅಧ್ಯಕ್ಷ ದಾಮೋದರ ಕಾಮತ್‌ ಸ್ವಾಗತಿಸಿ, ಕಾರ್ಯದರ್ಶಿ ಶರತ್‌ ಕುಮಾರ್‌ ವಂದಿಸಿದರು. ಸಾವಯವ ಕೃಷಿಕ ಗ್ರಾಹಕ ಬಳಗದ ರತ್ನಾಕರ್‌ ಪ್ರಸ್ತಾವಿಸಿದರು. ಭಾಸ್ಕರ ರೈ ಕಟ್ಟ ನಿರೂಪಿಸಿದರು.

ಸಾವಯವ ಕೃಷಿಗೆ ಆಸಕಿ ಬೆಳೆಸಿ

ಸಂಪನ್ಮೂಲ ವ್ಯಕ್ತಿಗಳಾದ ಹರಿಕೃಷ್ಣ ಕಾಮತ್‌ ಅವರು ಮಾತನಾಡಿ “ಮಾರುಕಟ್ಟೆಯಲ್ಲಿ ರಾಸಾಯನಿಕ ಬೆರೆಸಿದ ತರಕಾರಿಗಳೇ ಲಭಿಸುತ್ತಿದೆ. ಯಾಕೆಂದರೆ ತರಕಾರಿ ಬೀಜ ಹಾಳಾಗದಂತೆ ಕೋಟಿಂಗ್‌ ಮಾಡಿ ಕೆಮಿಕಲ್‌ ಸಿಂಪಡಣೆ ಮಾಡುವಲ್ಲಿಂದ ಆರಂಭವಾಗಿ ಗಿಡದ ಬೆಳವಣಿಗೆ ಸಮಯದಲ್ಲಿ ವಿವಿಧ ಹಂತಗಳಲ್ಲಿ ರಾಸಾಯನಿಕ ಬಳಕೆಯೇ ಅಧಿಕವಾಗಿ, ಅದನ್ನು ಸೇವಿಸುವವರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಹೀಗಾಗಿ ಸಾವಯವ ಕೃಷಿಯತ್ತ ಹೆಚ್ಚು ಆಸಕ್ತಿ ಬೆಳೆಸಿದರೆ ಆರೋಗ್ಯ ಕಾಪಾಡಲು ಸಾಧ್ಯ ಎಂದರು.

ದಾಕ್ಷಾಯಿಣಿ ವಿಶ್ವೇಶ್ವರ ಅವರು ಮಾತನಾಡಿ, ತರಕಾರಿ, ಹಣ್ಣನ್ನು ಮನೆಯ ಆವರಣ, ಬಾಲ್ಕನಿ, ತಾರಸಿಯಲ್ಲಿ ಬೆಳೆಯುವ ಮಾದರಿಯಲ್ಲಿ ಹೂ, ಔಷಧೀಯ ಗಿಡಗಳನ್ನು ಬೆಳೆಯಬೇಕಿದೆ. ಈ ಮೂಲಕ ಒತ್ತಡದ ಜೀವನ ಶೈಲಿಯಿಂದ ‌ ಅನೇಕ ಮಾನಸಿಕ, ದೈಹಿಕ ಕಾಯಿಲೆಗಳಿಂದ ದೂರವಿರಬಹುದು. ವಿವಿಧ ಜಾತಿಯ ಹೂವಿನ, ಅಲಂಕಾರಿಕ, ಔಷಧ, ತರಕಾರಿ, ಹಣ್ಣಿನ ಗಿಡಗಳನ್ನು ಬೆಳೆದು ಮನೆಯ ಅಂದ ಹೆಚ್ಚಿಸಿ, ಶುದ್ಧ ಗಾಳಿ ಸೇವನೆ ಮಾಡಬಹುದು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next