Advertisement
ಬಿಜೆಪಿ ಹಾಗೂ ಜೆಡಿಎಸ್‌ಗೆ ಪರ್ಯಾಯವಾಗಿ ಉದ್ದೇಶಿಸಲಾಗಿದ್ದ ಜನಾಶೀರ್ವಾದ ಯಾತ್ರೆ ತಾತ್ಕಾಲಿಕವಾಗಿ ಮುಂದೂಡಿ ವಿಧಾನಸಭಾ ಕ್ಷೇತ್ರಾವಾರು ಜಾತಿವಾರು ಪ್ರಭಾವ ಬೀರುವ ಅಂಶಗಳ ಬಗ್ಗೆ ತಳಮಟ್ಟದಲ್ಲಿ ಮಾಹಿತಿ ಸಂಗ್ರಹಣೆಗೆ ನಿರ್ಧರಿಸಿದೆ.
Related Articles
Advertisement
ಡಿಸೆಂಬರ್ 5 ರಿಂದ 7 ರ ವರೆಗೆ ನಡೆಯುವ ಪಕ್ಷದ ಮುಂಚೂಣಿ ಘಟಕಗಳ ಪದಾಧಿಕಾರಿಗಳ ಸಭೆಯಲ್ಲಿ ಎಲ್ಲ ಕ್ಷೇತ್ರಗಳ ಚಿತ್ರಣದ ಬಗ್ಗೆ ಅವರು ಸಂಗ್ರಹಿಸಿರುವ ಮಾಹಿತಿ ಹಾಗೂ ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿರುವ ಕೆಪಿಸಿಸಿ ಪದಾಧಿಕಾರಿಗಳು ಸಂಗ್ರಹಿಸಿರುವ ಮಾಹಿತಿಯನ್ನು ತಾಳೆ ಹಾಕಿಕೊಂಡು, ಯಾವ ಕ್ಷೇತ್ರದಲ್ಲಿ ಪಕ್ಷಕ್ಕೆ ಪೂರಕ ವಾತಾವರಣ ಇದೆ. ಯಾವ ಕ್ಷೇತ್ರದಲ್ಲಿ ವ್ಯತಿರಿಕ್ತ ವಾತಾವರಣ ಇದೆ ಎನ್ನುವುದನ್ನು ಮನದಟ್ಟು ಮಾಡಿಕೊಂಡು, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಪಕ್ಷದ ವತಿಯಿಂದ ವಿಧಾನಸಭಾ ಕ್ಷೇತ್ರವಾರು ಸಮಾವೇಶಗಳನ್ನು ಮಾಡಲು ನಿರ್ಧರಿಸಿದ್ದು, ಆರಂಭದಲ್ಲಿ 2013 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋತ ಕ್ಷೇತ್ರಗಳಲ್ಲಿ ಸಮಾವೇಶಗಳನ್ನು ಮಾಡಲು ನಿರ್ಧರಿಸಿದ್ದಾರೆ.
ಆ ಸಂದರ್ಭದಲ್ಲಿ ಜಾತಿವಾರು ಪ್ರಭಾವಿಗಳಾಗಿರುವ ನಾಯಕರನ್ನು ಆ ಕ್ಷೇತ್ರಗಳಿಗೆ ಕರೆದೊಯ್ದು ಹೊಣೆಗಾರಿಕೆ ನೀಡಿ ಅವರ ಸಮುದಾಯದ ಜನರನ್ನು ಸಂಘಟಿಸುವುದು ಹಾಗೂ ಅಲ್ಲಿ ಸ್ಥಳೀಯ ನಾಯಕರುಗಳ ನಡುವೆ ಇರುವ ಗೊಂದಲ, ಭಿನ್ನಾಭಿಪ್ರಾಯ ನಿವಾರಣೆ ಮಾಡುವ ಜವಾಬ್ದಾರಿ ವಹಿಸಲು ಕೆಪಿಸಿಸಿ ಮುಂದಾಗಿದೆ.
ಲಿಂಗಾಯತ ಸಮುದಾಯದ ಮತದಾರರು ಹೆಚ್ಚಿರುವ ಕ್ಷೇತ್ರಗಳಿಗೆ ಸಚಿವರಾದ ಎಂ.ಬಿ. ಪಾಟೀಲ್, ವಿನಯ ಕುಲಕರ್ಣಿ, ಎಚ್.ಕೆ. ಪಾಟೀಲ್, ಎಸ್.ಆರ್. ಪಾಟೀಲ್ ಅವರನ್ನು ಬಳಸಿಕೊಳ್ಳುವುದು. ಒಕ್ಕಲಿಗ ಸಮುದಾಯದ ಪ್ರಭಾವ ಇರುವ ಕ್ಷೇತ್ರಗಳಲ್ಲಿ ಡಿ.ಕೆ. ಶಿವಕುಮಾರ್, ಅಂಬರೀಶ್, ಎಂ. ಕೃಷ್ಣಪ್ಪ, ಕೃಷ್ಣ ಬೈರೇಗೌಡ ಅವರ ಮೂಲಕ ಸಮುದಾಯದ ಮತ ಒಗ್ಗೂಡಿಸುವುದು. ದಲಿತ ಮತದಾರರು ಹೆಚ್ಚಿರುವ ಕ್ಷೇತ್ರಗಳಲ್ಲಿ ಪರಮೇಶ್ವರ್, ಕೆ.ಎಚ್.ಮುನಿಯಪ್ಪ, ಎಚ್.ಆಂಜನೇಯ, ಡಾ. ಎಚ್.ಸಿ. ಮಹದೇವಪ್ಪ ಅವರನ್ನು ಬಳಸಿಕೊಳ್ಳುವುದು.ಕುರುಬ ಸಮುದಾಯ ಹೆಚ್ಚಿರುವ ಕಡೆಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಿರಂಗ ಸಭೆಗಳಲ್ಲಿ ಪಾಲ್ಗೊಂಡು, ಸಚಿವ ಎಚ್.ಎಂ ರೇವಣ್ಣ ಹಾಗೂ ಇತರ ಎರಡನೇ ಹಂತದ ಕುರುಬ ನಾಯಕರನ್ನು ಬಳಸಿಕೊಳ್ಳಲು ಪಕ್ಷ ಯೋಚಿಸಿದೆ. ನಾಯಕ ಸಮುದಾಯ ಹೆಚ್ಚಿರುವ ಕ್ಷೇತ್ರಗಳಲ್ಲಿ ಸತೀಶ್ ಜಾರಕಿಹೊಳಿ, ನೇಕಾರರು ಹೆಚ್ಚಿರುವ ಕ್ಷೇತ್ರಗಳಿಗೆ ಕೆಪಿಸಿಸಿ ಹಿಂದುಳಿದ ಘಟಕದ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ ಅವರನ್ನು ತಳ ಮಟ್ಟದ ಸಮುದಾಯಗಳ ಮತದಾರರನ್ನು ಒಗ್ಗೂಡಿಸುವ ಕೆಲಸಕ್ಕೆ ನಿಯೋಜಿಸಲು ಕಾಂಗ್ರೆಸ್ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ. ಸಮುದಾಯ ಲೆಕ್ಕಾಚಾರ
ಲಿಂಗಾಯತ
ಎಂ.ಬಿ. ಪಾಟೀಲ್, ವಿನಯ ಕುಲಕರ್ಣಿ, ಎಚ್.ಕೆ. ಪಾಟೀಲ್, ಎಸ್.ಆರ್. ಪಾಟೀಲ್, ಶಾಮನೂರು ಶಿವಶಂಕರಪ್ಪ
ಒಕ್ಕಲಿಗ
ಡಿ.ಕೆ. ಶಿವಕುಮಾರ್, ಅಂಬರೀಶ್, ಎಂ. ಕೃಷ್ಣಪ್ಪ, ಕೃಷ್ಣ ಬೈರೇಗೌಡ
ದಲಿತ
ಪರಮೇಶ್ವರ್, ಕೆ.ಎಚ್.ಮುನಿಯಪ್ಪ, ಎಚ್.ಆಂಜನೇಯ, ಡಾ. ಎಚ್.ಸಿ. ಮಹದೇವಪ್ಪ
ಕುರುಬ
ಸಿದ್ದರಾಮಯ್ಯ, ಎಚ್.ಎಂ.ರೇವಣ್ಣ
ನಾಯಕ
ಸತೀಶ್ ಜಾರಕಿಹೊಳಿ
ನೇಕಾರರು
ಉಮಾಶ್ರೀ, ಎಂ.ಡಿ.ಲಕ್ಷ್ಮೀನಾರಾಯಣ
ಮುಸ್ಲಿಂ
ಕೆ. ರೆಹಮಾನ್ ಖಾನ್, ರೋಷನ್ ಬೇಗ್, ಜಾಫರ್ ಷರೀಫ್, ನಸೀರ್ ಅಹ್ಮದ್, ಜಮೀರ್ ಅಹ್ಮದ್
ಕ್ರೈಸ್ತ
ಆಸ್ಕರ್ ಫರ್ನಾಂಡೀಸ್, ಕೆ.ಜೆ.ಜಾರ್ಜ್ – ಶಂಕರ ಪಾಗೋಜಿ