Advertisement

ನೇಹಾ ಹತ್ಯೆ ತನಿಖೆಯನ್ನು ಸಿಬಿಐಗೆ ವಹಿಸಿ: ಜೆ.ಪಿ.ನಡ್ಡಾ

11:08 PM Apr 21, 2024 | Team Udayavani |

ಹುಬ್ಬಳ್ಳಿ: ನೇಹಾ ಹಿರೇಮಠ ಹತ್ಯೆ ಪ್ರಕರಣದ ಕುರಿತು ರಾಜ್ಯ ಸರಕಾರದ ತನಿಖೆ ಬಗ್ಗೆ ಕುಟುಂಬದವರಿಗೆ ವಿಶ್ವಾಸ ಇಲ್ಲ. ರಾಜ್ಯ ಪೊಲೀಸರು ಅಸಮರ್ಥರಾಗಿದ್ದಾರೆ. ಹೀಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಬಿಜೆಪಿ ಇದಕ್ಕೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.

Advertisement

ರವಿವಾರ ನೇಹಾ ಹಿರೇಮಠ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಹೃದಯವಿದ್ರಾವಕ ಘಟನೆಯಾಗಿದ್ದು, ಪಕ್ಷ ಇದನ್ನು ಉಗ್ರವಾಗಿ ಖಂಡಿಸುತ್ತದೆ. ರಾಜ್ಯ ಸರಕಾರ ಹಾಗೂ ಇಲ್ಲಿನ ಪೊಲೀಸರ ತನಿಖೆ ಮೇಲೆ ವಿಶ್ವಾಸವಿಲ್ಲ. ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ನೇಹಾ ಅವರ ತಂದೆ ನನ್ನ ಬಳಿ ಮನವಿ ಮಾಡಿದ್ದಾರೆ. ಹೀಗಾಗಿ ಪ್ರಕರಣ ಸಿಬಿಐಗೆ ವಹಿಸುವುದು ಅಗತ್ಯ ಎಂದು ಆಗ್ರಹಿಸಿದರು.

ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ| ಜಿ. ಪರಮೇಶ್ವರ ಪ್ರಕರಣದ ತನಿಖೆ ದಾರಿ ತಪ್ಪಿಸುವ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ತನಿಖೆ ಹಾದಿ ತಪ್ಪುವ ಹಾಗೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆ. ಕಾಂಗ್ರೆಸ್‌ ಪಕ್ಷ ಒಂದು ಸಮಾಜದ ತುಷ್ಟೀಕರಣ ಮಾಡುತ್ತಿದೆ. ಇದನ್ನು ಕರ್ನಾಟಕದ ಜನತೆ ಕ್ಷಮಿಸುವುದಿಲ್ಲ. ಜನರು ನ್ಯಾಯದ ನಿರೀಕ್ಷೆಯಲ್ಲಿದ್ದಾರೆ ಎಂದರು.

ಮಹಿಳಾ ಆಯೋಗದ ಅಧ್ಯಕ್ಷೆ ಭೇಟಿ
ಹುಬ್ಬಳ್ಳಿ: ನೇಹಾಳ ಸಾವನ್ನು ಯಾರೂ ರಾಜ ಕೀಯ ಸ್ವಾರ್ಥಕ್ಕೆ ಬಳಸಿಕೊಳ್ಳಬೇಡಿ. ಕೊಲೆಗಡುಕನಿಗೆ ಗಲ್ಲು ಶಿಕ್ಷೆ ಆಗಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ| ನಾಗಲಕ್ಷ್ಮೀ ಚೌಧರಿ ಆಗ್ರಹಿಸಿದರು. ನೇಹಾಳ ನಿವಾಸಕ್ಕೆ ಭೇಟಿ ನೀಡಿ ಆಕೆಯ ಹೆತ್ತವರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಲು ತ್ವರಿತ ನ್ಯಾಯಾಲಯಕ್ಕೆ ಒಪ್ಪಿಸಬೇಕು. ನೇಹಾಳ ಹೆತ್ತವರು ತುಂಬಾ ದುಃಖದಲ್ಲಿದ್ದಾರೆ. ತಮ್ಮ ಲಾಭಕ್ಕೆ ಯಾರೂ ಆಕೆಗೆ ಅಪಮಾನ ಮಾಡಬೇಡಿ ಎಂದು ಮನವಿ ಮಾಡಿದರು.

ತನಿಖಾ ತಂಡ ಭೇಟಿ: ಮಾಹಿತಿ ಸಂಗ್ರಹ
ಹುಬ್ಬಳ್ಳಿ: ನೇಹಾ ಹಿರೇಮಠ ಕೊಲೆ ಪ್ರಕರಣದಲ್ಲಿ ಅವರ ಹೆತ್ತವರು ಕೆಲವರ ವಿರುದ್ಧ ಆಪಾದನೆ ಮಾಡಿದ ಹಿನ್ನೆಲೆಯಲ್ಲಿ ಎಸಿಪಿ ಶಿವಪ್ರಕಾಶ ನಾಯ್ಕ ನೇತೃತ್ವದ ತನಿಖಾ ತಂಡ ರವಿವಾರ ನಿರಂಜನ ಹಿರೇಮಠ ಅವರ ನಿವಾಸಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿತು.

Advertisement

ತನಿಖಾಧಿಕಾರಿಗಳು ನೇಹಾ ತಂದೆ ನಿರಂಜನ ಜತೆ ಸುಮಾರು ಒಂದು ಗಂಟೆ ಕಾಲ ಪ್ರತ್ಯೇಕವಾಗಿ ಚರ್ಚಿಸಿ ತನಿಖೆಗೆ ಪೂರಕವಾದ ಮಾಹಿತಿಗಳನ್ನು ಪಡೆದುಕೊಂಡರು. ಸಾಮಾಜಿಕ ಜಾಲತಾಣಗಳ ಮೂಲಕ ಮಗಳು ಹಾಗೂ ತಮ್ಮ ಮನೆತನದ ಗೌರವಕ್ಕೆ ಧಕ್ಕೆ ತರುವ ಕೆಲಸ ಆಗುತ್ತಿದೆ. ಅಂತಹ ಖಾತೆಗಳ ಬಗ್ಗೆ ಮಾಹಿತಿ ಪಡೆದು ಅವುಗಳನ್ನು ಸ್ಥಗಿತಗೊಳಿಸಬೇಕು. ಅಲ್ಲದೆ, ಪೋಸ್ಟ್‌ ಮಾಡುತ್ತಿರುವವರ ವಿರುದ್ಧ ಹಾಗೂ ಹಂತಕನಿಗೆ ಸಹಾಯ ಮಾಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿರಂಜನ್‌ ಆಗ್ರಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next