ಗುಳೇದಗುಡ್ಡ: ಪ್ರಾಚೀನ ಪರಂಪರೆ ಹೊಂದಿದ ನೇಕಾರಿಕೆ ವೃತ್ತಿಯೊಂದಿಗೆ ತನ್ನ ಸಂಸ್ಕೃತಿ ತಲೆಮಾರಿನಿಂದ ಪ್ರಸ್ತುತ ತಲೆಮಾರಿಗೆ ಬೆಳೆದುಕೊಂಡು ಬಂದಿದೆ. ಈಗ ಕೈ ಮಗ್ಗ ನೇಕಾರಿಕೆ ಅಳಿವಿನಂಚಿನಲ್ಲಿದೆ ಎಂದು ಪ್ರೊ| ಚಂದ್ರಶೇಖರ ಹೆಗಡೆ ಹೇಳಿದರು.
ಕುರುಹಿನಶೆಟ್ಟಿ ಮಂಗಲ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜರುಗಿದ ದಿ. ವೀರಪ್ಪ ಬನ್ನಿ ಅವರ “ನೇಕಾರರ ಬದುಕಿನ ಸಾಂಸ್ಕೃತಿಕ ನೆಲೆಗಳು’ ವಿಷಯ ಕುರಿತು ದತ್ತಿ ಉಪನ್ಯಾಸ ನೀಡಿದರು.
ಸಿಂಧೂ ನಾಗರಿಕತೆಯಲ್ಲಿಯೂ ಹತ್ತಿಯಿಂದ ಬಟ್ಟೆ ತಯಾರಿಸಿದ ಅವಶೇಷಗಳಿವೆ. ಆ ಕಾಲದಲ್ಲಿಯೇ ನೇಕಾರಿಕೆ ಉಗಮವಾದದ್ದು ಇತಿಹಾಸ. ರಾಜ್ಯದಲ್ಲಿ 66 ಲಕ್ಷ ನೇಕಾರರು ಗುಳೇದಗುಡ್ಡ, ಇಳಕಲ್ಲ, ರಬಕವಿ-ಬನಹಟ್ಟಿ, ಗುಡೂರ, ಮಹಾಲಿಂಗಪುರ, ಸೇರಿದಂತೆ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವುದು ಇಲ್ಲಿನ ನೇಕಾರಿಕೆ ಸಂಸ್ಕೃತಿ ಹಿರಿಮೆ ಹೇಳುತ್ತದೆ ಎಂದರು.
ದಿ. ಬಸವರಾಜ ಅಮರಣ್ಣ ಪಾಟೀಲರ ದತ್ತಿ ವಿಷಯ “ರಂಗಭೂಮಿಯ ವೈಭವ’ ಕುರಿತು ಎಚ್.ಟಿ. ರಂಗಾಪುರ ಮಾತನಾಡಿ, ಇಂದು ರಂಗಭೂಮಿಯಲ್ಲಿ ವೃತ್ತಿ ರಂಗಭೂಮಿ, ಹವ್ಯಾಸಿ ಮತ್ತು ಜಾನಪದ ರಂಗಭೂಮಿಯೆಂದು ಹಲವು ಪ್ರಕಾರಗಳಿದ್ದು, ಪ್ರೇಕ್ಷಕರ ಕೊರತೆ ಮತ್ತು ಹಣಕಾಸಿನ ಸಮಸ್ಯೆಯಿಂದ ನಾಟಕ ಕಂಪನಿಗಳು ಬಂದ್ ಆಗಿವೆ. ಕಲಾವಿದರ ಬದುಕು ಕೊರೊನಾ ಕಾಲಘಟ್ಟದಲ್ಲಿ ಬದುಕು ಅತಂತ್ರವಾಗಿದೆ ಎಂದರು.
ಹಿರಿಯ ಸಾಹಿತಿ ಮಲ್ಲಿಕಾರ್ಜುನ ಬನ್ನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದತ್ತಿ ಉಪನ್ಯಾಸ ಮಹತ್ವಪೂರ್ಣವಾಗಿದ್ದು ನೇಕಾರರ ಸಂಸ್ಕೃತಿ ಹಾಗೂ ರಂಗಭೂಮಿ ತಲ್ಲಣ ಚರ್ಚಿಸಲು ಉತ್ತಮ ವೇದಿಕೆಯಾಗಿದೆ ಎಂದರು. ಕುರುಹಿನಶೆಟ್ಟಿ ಯುವ ಕುಟುಂಬ ಹಾಗೂ ವಿವಿಧೋದ್ದೇಶಗಳ ಸಂಘದ ಉಪಾಧ್ಯಕ್ಷ ಸಂತೋಷ ನೇಮದಿ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಗುರುಸಿದ್ದೇಶ್ವರ ಬೃಹನ್ಮಠದ ಶ್ರೀ ಗುರುಬಸವ ದೇವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಪರಶುರಾಮ ಗಾಜಿಯವರು ತಮ್ಮ ತಂದೆಯವರ ಹೆಸರಲ್ಲಿ ದತ್ತಿ ನೀಡಲು ಒಪ್ಪಿಕೊಂಡಿದ್ದರಿಂದ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ| ಚಂದ್ರಶೇಖರ ಕಾಳನ್ನವರ, ಕೋಶಾಧ್ಯಕ್ಷ ಪ್ರೊ| ಸಿ.ಎಂ. ಜೋಶಿ, ರಂಗ ಕಲಾವಿದೆ ಪ್ರೇಮಾ ಗುಳೇದಗುಡ್ಡ(ಪಾಟೀಲ), ಬಾದಾಮಿ ತಾಲೂಕು ನಿಕಟಪೂರ್ವ ಅಧ್ಯಕ್ಷ ರವಿ ಕಂಗಳ, ಸಂಗಮೇಶ ಚಿಕ್ಕಾಡಿ, ತಾಲೂಕು ಕಸಾಪ ಅಧ್ಯಕ್ಷ ಡಾ| ಎಚ್. ಎಸ್. ಘಂಟಿ ಇತರರಿದ್ದರು