Advertisement

ಕಾಪು ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಶಾಸಕರೊಂದಿಗೆ ಕೈ ಜೋಡಣೆ: ಡಿಸಿ

09:54 PM Sep 05, 2019 | Team Udayavani |

ಕಾಪು: ಕ್ಷೇತ್ರದ ಸಮಗ್ರ ಅಭಿವೃದ್ಧಿ ಚಿಂತನೆಯೊಂದಿಗೆ ಯೋಜನಾ ಪಟ್ಟಿ ಸಹಿತವಾದ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿದ್ದು, ಅದಕ್ಕೆ ಪೂರಕವಾಗಿ ಜಿಲ್ಲಾಡಳಿತ ಸ್ಪಂದಿಸಲಿದೆ. ಪೂರ್ವ ಭಾವಿಯಾಗಿ ಶಾಸಕರು ಸೂಚಿಸಿದ ಪ್ರದೇಶಗಳಿಗೆ ತೆರಳಿ ಪರಿಶೀಲನ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಗದೀಶ್‌ ಹೇಳಿದರು.

Advertisement

ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧೆಡೆಗಳಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆ ಪೀಡಿತ ಪ್ರದೇಶಗಳಿಗೆ ಶಾಸಕ ಲಾಲಾಜಿ ಆರ್‌. ಮೆಂಡನ್‌ ಅವರ ಅಪೇಕ್ಷೆಯ ಮೇರೆಗೆ ಭೇಟಿ ನೀಡಿ, ಅಭಿವೃದ್ಧಿ ಕಾಮಗಾರಿ ಮತ್ತು ಸಮಸ್ಯೆಗಳನ್ನು ಪರಿಶೀಲನೆ ನಡೆಸಿ, ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ತಾಲೂಕಿನ ವಿವಿಧ ಪ್ರದೇಶಗಳಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಯಾವುದೆಲ್ಲಾ ಕೆಲಸಗಳನ್ನು ತುರ್ತಾಗಿ ನಡೆಸಬೇಕು, ಯಾವುದಕ್ಕೆ ಪ್ರಥಮ ಆದ್ಯತೆ ಕೊಡಬೇಕು ಎನ್ನುವುದರ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಸರಕಾರಕ್ಕೆ ವರದಿ ನೀಡಲಾಗುವುದು ಎಂದರು.

ತ್ಯಾಜ್ಯ ವಿಲೇವಾರಿಗೆ ಸೂಕ್ತ ಕ್ರಮ
ಕಾಪು ಪುರಸಭೆಯ ತ್ಯಾಜ್ಯ ವಿಲೇವಾರಿ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದ ಅವರು ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಮಾಡುವ ಬಗ್ಗೆ ಭರವಸೆ ನೀಡಿದರು. ಎಲ್ಲೂರಿನಲ್ಲಿ ಮೀಸಲಿಟ್ಟ ಪ್ರದೇಶದ ಬಗ್ಗೆಯೂ ಮಾಹಿತಿ ಪಡೆದ ಅವರು ಅಲ್ಲಿಗೆ ಭೇಟಿ ನೀಡಿ, ಅಲ್ಲಿನ ಸ್ಥಳೀಯಾಡಳಿತ ಸಂಸ್ಥೆ ಮತ್ತು ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸುವುದಾಗಿ ಅವರು ಭರವಸೆ ನೀಡಿದರು.

ಹೆದ್ದಾರಿ ಸಮಸ್ಯೆ ಬಗ್ಗೆ ವಿಶೇಷ ಸಭೆ ನಡೆಸಿ ಕ್ರಮ ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿಯಲ್ಲಿನ ಅಸ್ತವ್ಯಸ್ತತೆ, ಇದರಿಂದ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳು ಮತ್ತು ಸಮಸ್ಯೆಗಳ ಬಗ್ಗೆ ಹಲವಾರು ರೀತಿಯ ಮನವಿಗಳು ಮತ್ತು ದೂರುಗಳು ಸಾರ್ವಜನಿಕರಿಂದ ಕೇಳಿ ಬಂದಿವೆ. ಈಗಾಗಲೇ ಈ ಬಗ್ಗೆ ಜನಪ್ರತಿನಿಧಿಗಳು, ಸ್ಥಳೀಯರು ಮತ್ತು ಹೆದ್ದಾರಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ ಎಂದರು.

Advertisement

ಸುಜ್ಲಾನ್‌ ಕಂಪೆನಿಗೆ 600 ಎಕರೆ ಜಮೀನು ನೀಡಲಾಗಿದೆ. ಅದರಲ್ಲಿ 400 ಎಕರೆ ಸರಕಾರಿ ಭೂಮಿ, 200 ಎಕರೆ ಖಾಸಗಿ ಜಮೀನು ಇದೆ. ಅವರಿಗೆ ಅಗತ್ಯವಿರದ ಭೂಮಿಯನ್ನು ಮಾರಾಟ ಮಾಡುವ ಹುನ್ನಾರವನ್ನೂ ನಡೆಸುತ್ತಿದ್ದಾರೆ. ಈ ಕಾರಣದಿಂದಾಗಿ ಅವರಿಂದ 100 ಎಕರೆ ಜಮೀನನ್ನು ವಾಪಸು ಪಡೆದುಕೊಂಡು ಕ್ರೀಡಾಂಗಣ ನಿರ್ಮಾಣ, ತ್ಯಾಜ್ಯ ಸಂಸ್ಕರಣ ಘಟಕ, ಘನ ತ್ಯಾಜ್ಯ ವಿಲೇವಾರಿ ಘಟಕ, ವಸತಿ ಬಡಾವಣೆ ನಿರ್ಮಾಣ ಸಹಿತ ವಿವಿಧ ಯೋಜನೆಗಳನ್ನು ನಡೆಸಲು ಬಳಸಿಕೊಳ್ಳಬಹುದು. ಈ ಬಗ್ಗೆಯೂ ಯೋಚಿಸುವಂತೆ ಶಾಸಕ ಲಾಲಾಜಿ ಆರ್‌. ಮೆಂಡನ್‌ ಅವರು ಜಿಲ್ಲಾಧಿಕಾರಿಯವರಲ್ಲಿ ಮನವಿ ಮಾಡಿದರು.ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌, ಜಿ.ಪಂ. ಸದಸ್ಯೆ ಶಿಲ್ಪಾ ಜಿ. ಸುವರ್ಣ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ತಹಶೀಲ್ದಾರ್‌ ಮಹಮ್ಮದ್‌ ಇಸಾಕ್‌, ಪುರಸಬಾ ಮುಖ್ಯಾಧಿಕಾರಿ ರಾಯಪ್ಪ, ಕಂದಾಯ ನಿರೀಕ್ಷಕ ರವಿಶಂಕರ್‌ ಕೆ., ಪುರಸಭಾ ಸದಸ್ಯ ಅನಿಲ್‌ ಕುಮಾರ್‌, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುರೇಶ್‌ ಶೆಟ್ಟಿ ಗುರ್ಮೆ, ಕ್ಷೇತ್ರಾಧ್ಯಕ್ಷ ಪ್ರಕಾಶ್‌ ಶೆಟ್ಟಿ ಪಾದೆಬೆಟ್ಟು, ಗಂಗಾಧರ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

ಎಲ್ಲೆಲ್ಲಿ ಭೇಟಿ
ಕಟಪಾಡಿ ಹೆದ್ದಾರಿ ಜಂಕ್ಷನ್‌ ಸಮಸ್ಯೆ ಬಗ್ಗೆ, ಕಾಪು ಘನ ತ್ಯಾಜ್ಯ ವಿಲೇವಾರಿ ಘಟಕ, ಕಾಪು ಬೀಚ್‌, ಪಡುಬಿದ್ರಿ ಕೈಗಾರಿಕಾ ಪ್ರದೇಶ, ಪಡುಬಿದ್ರಿ ಪೇಟೆಯ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ, ಹೆಜಮಾಡಿ ಬಂದರು ಸ್ಥಳ ಪರಿಶೀಲನೆ ಹಾಗೂ ಪಡುಬಿದ್ರಿ ಘನ ತ್ಯಾಜ ನಿರ್ವಹಣಾ ಘಟಕ ನಿರ್ವಹಣೆ ಬಗ್ಗೆ ಪರಿಶೀಲನೆ ನಡೆಸಿದರು. ಬಳಿಕ ಕಾಪು ಪುರಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನ ಸಭೆ ನಡೆಸಿ, ಜನಪ್ರತಿನಿಧಿಗಳಿಂದ ಸಮಸ್ಯೆಗಳ ಅಹವಾಲು ಸ್ವೀಕರಿಸಿದರು.

ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ
ಹೆಜಮಾಡಿ ಬಂದರು ಅಭಿವೃದ್ಧಿಗೆ ಸರಕಾರ ಅನುದಾನ ಬಿಡುಗಡೆ ಮಾಡಿದ್ದು, ಅಲ್ಲಿ ಶೀಘ್ರ ಕಾಮಗಾರಿ ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ. ಕಾಪು ತಾಲೂಕಿ ನಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಗೆ ಪೂರಕವಾದ ಹಲವಾರು ಪ್ರದೇಶಗಳಿದ್ದು, ಆ ಪ್ರದೇಶಗಳನ್ನು ಅಭಿವೃದ್ಧಿಪಡಿಸಿ ಪ್ರವಾಸೋದ್ಯಮ ಕ್ಷೇತ್ರಗಳನ್ನಾಗಿ ಪರಿವರ್ತಿಸಲು ಯೋಜನೆ ರೂಪಿಸಲಾಗುವುದು. ಈ ಬಗ್ಗೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next