Advertisement

ಲೋಕಸಭೆಗೂ ಕೈ-ದಳ ಮೈತಿ‹ ಮುಂದುವರಿಕೆ

06:10 AM Oct 21, 2018 | Team Udayavani |

ಬೆಂಗಳೂರು:ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಹಾಗೂ ಆ ನಂತರ ರಾಷ್ಟ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಗಳು ಆಗಲಿವೆ ಕಾದು ನೋಡಿ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹೇಳಿದ್ದಾರೆ.

Advertisement

ಸಿದ್ದರಾಮಯ್ಯ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ರಾಜ್ಯಗಳಲ್ಲಿ ಬಿಎಸ್‌ಪಿ ಹಾಗೂ ಕಾಂಗ್ರೆಸ್‌ ನಡುವೆ ಮೈತ್ರಿ ಆಗಿಲ್ಲ ಎಂದ ಮಾತ್ರಕ್ಕೆ ಮಹಾಘಟ್‌ಬಂಧನ್‌ ಉದ್ದೇಶ ವಿಫ‌ಲವಾಯಿತು ಎಂದಲ್ಲ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಮಹಾಘಟ್‌ ಬಂಧನ್‌ ಪೀಸ್‌ ಪೀಸ್‌ ಆಗಿದೆ ಎಂದು ಹೇಳಿದ್ದಾರೆ. ಆದರೆ, ಅವರು ಅಂದುಕೊಂಡ ರೀತಿ ರಾಷ್ಟ್ರೀಯ ರಾಜಕಾರಣ ಇಲ್ಲ. ಚುನಾವಣೆಗೆ ಮುನ್ನ ಹಾಗೂ ನಂತರ ಕೆಲವು ಬೆಳವಣಿಗೆಗಳು ನಡೆಯಲಿವೆ ಎಂದು ಹೇಳಿದರು.

ಬಿಎಸ್‌ಪಿ ಜೆಡಿಎಸ್‌ ಜತೆ ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿತ್ತು. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ ಶಕ್ತಿಯುತವಾಗಿದೆ. ಅಲ್ಲಿ ಬಿಜೆಪಿ ಎದುರಿಸಲು ಶಕ್ತವಾಗಿದೆ. ಬಿಎಸ್‌ಪಿ ಜತೆ ಮೈತ್ರಿ ಆಗಿಲ್ಲ ಎಂದ ಮಾತ್ರಕ್ಕೆ ಮುಂದೆಯೂ ಆಗುವುದೇ ಇಲ್ಲ ಎಂದು ಊಹಿಸಿಕೊಳ್ಳುವುದು ಸರಿಯಲ್ಲ ಎಂದು ತಿಳಿಸಿದರು.

ಬಿಜೆಪಿ ವಿರುದ್ಧ ಕಾಂಗ್ರೆಸ್‌ ನೇತೃತ್ವದಲ್ಲಿ ಎಲ್ಲ ಸಮಾನ ಮನಸ್ಕ ಪಕ್ಷಗಳು ಒಗ್ಗೂಡಿ ಲೋಕಸಭೆ ಚುನಾವಣೆ ಎದುರಿಸುತ್ತೇವೆ. ರಾಜ್ಯದಲ್ಲಿ  ಈಗಿನಂತೆಯೇ ಮೈತ್ರಿ ಮುಂದುವರಿಯಲಿದೆ. ಯಾರಿಗೆ ಎಷ್ಟು ಸೀಟು ಎಂಬ ಬಗ್ಗೆ ನಾನು ತಲೆಕಡಿಸಿಕೊಳ್ಳುವುದಿಲ್ಲ. ಒಂದು ಸೀಟು ಹೆಚ್ಚು ಕಡಿಮೆ ಆಗಬಹುದು. ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.

Advertisement

ನಾವಿಲ್ಲಿ ವೈಯಕ್ತಿಕ ಆಸೆ ಸ್ವಾರ್ಥಕ್ಕಾಗಿ ಬಂದು ಕುಳಿತಿಲ್ಲ. ದೇಶ ಉಳಿಸುವ ನಿಟ್ಟಿನಲ್ಲಿ ಒಟ್ಟಾಗಿದ್ದೇವೆ. ದೇಶದಲ್ಲಿ ಜಾತ್ಯತೀತ ಶಕ್ತಿಗಳು ಒಂದಾದಾಗ ಬಿಜೆಪಿ ಸೋಲು ಅನುಭವಿಸಿದೆ. ಅದಕ್ಕೆ ಉತ್ತರ ಪ್ರದೇಶ, ಬಿಹಾರದ ಉಪ ಚುನಾವಣೆ ಸಾಕ್ಷಿ ಎಂದು ತಿಳಿಸಿದರು.

ಮುಂದಿನ ಪ್ರಧಾನಿ ಕುರಿತು ಪ್ರಶ್ನಿಸಿದಾಗ, ಹಿಂದೆಯೂ ನಾನು ಸಿದ್ದರಾಮಯ್ಯ ಜತೆಗೂಡಿ ಪ್ರಚಾರ ಮಾಡಿದಾಗ  ಯಾರು ಪ್ರಧಾನಿ ಎಂದಾಗ ಭಾರತಾಂಬೆ ಬಂಜೆಯಲ್ಲ. ಕೋಟ್ಯಂತರ ಸುಪುತ್ರರು ಇದ್ದಾರೆ, ಯಾರೋ ಒಬ್ಬರು ಆಗುತ್ತಾರೆ ಎಂದು ಹೇಳಿದ್ದೆ. ಈಗಲೂ ಅಷ್ಟೇ ಎಂದು ಹೇಳಿದರು. ರಾಹುಲ್‌ಗಾಂಧಿ ಅವರು ನಿಮ್ಮ ಪ್ರಧಾನಿ ಅಭ್ಯರ್ಥಿಯೇ ಎಂದಾಗ, ಕಾದು ನೋಡಿ ಎಂದಷ್ಟೇ ತಿಳಿಸಿದರು.

ಒಡಕು ತರುವ ಕೆಲಸ ಮಾಡ್ಬೇಡಿ ಪ್ಲೀಸ್‌..
“ಹಿಂದಿನದೆಲ್ಲಾ ಮುಗಿದ ಅಧ್ಯಾಯ. ನೀವು ಹಳೆಯದನ್ನು ನೆನಪಿಸಿ ನಮ್ಮ ಮನಸ್ಸುಗಳಲ್ಲಿ ಒಡಕು ತರುವ ಕೆಲಸ ಮಾಡಬೇಡಿ ಪ್ಲೀಸ್‌’.ಹೀಗೆ ಹೇಳಿದ್ದು ಮಾಜಿ ಪ್ರಧಾನಿ ದೇವೇಗೌಡ. ಈ ಹಿಂದೆ ಪರಸ್ಪರ ಟೀಕೆ ಮಾಡಿಕೊಂಡ ನೀವು ಒಟ್ಟಾದರೆ ತಳಮಟ್ಟದಲ್ಲಿ ಎರಡೂ ಪಕ್ಷದ ಕಾರ್ಯಕರ್ತರು ಒಟ್ಟಾಗುತ್ತಾರಾ ಎಂಬ ಪ್ರಶ್ನೆಗೆ ಗೌಡರು ನೀಡಿದ ಉತ್ತರ ಇದಾಗಿತ್ತು. ಲಿಂಗಾಯತ ಪ್ರತ್ಯೇಕ ಧರ್ಮ ಶಿಫಾರಸು ಈ ಉಪ ಚುನಾವಣೆಯಲ್ಲಿ ಪ್ರಮುಖ ವಿಚಾರವೇ ಎಂದಾಗ, “”ನಾವು ಉಪ ಚುನಾವಣೆಯಲ್ಲಿ ಒಟ್ಟಾಗಿ ಹೋರಾಟ ಮಾಡುವ ತೀರ್ಮಾನ ಪ್ರಕಟಿಸಲು ಬಂದಿದ್ದೇವೆ. ಬೇರೆ ವಿಚಾರ ಇಲ್ಲಿ ಅನಗತ್ಯ” ಎಂದು ಸಿಡುಕಿದರು.

ಕಾಂಗ್ರೆಸ್‌-ಜೆಡಿಎಸ್‌ ಜತೆಗೂಡಿ ಹೋರಾಟ ಮಾಡುವುದರಿಂದ ಬಿಜೆಪಿ ಬಲವರ್ಧನೆಯಾಗುವುದಿಲ್ಲವೇ? ಜೆಡಿಎಸ್‌- ಕಾಂಗ್ರೆಸ್‌ ತನ್ನ ಐಡೆಂಟಿಟಿ ಕಳೆದುಕೊಳ್ಳುವುದಿಲ್ಲವೇ ಎಂಬ ಪ್ರಶ್ನೆಗಳಿಗೆ, ಕೊಂಚ ಸಿಟ್ಟಾಗಿಯೇ ಉತ್ತರಿಸಿದ ದೇವೇಗೌಡರು, “”ನೀವು ಸಮಾಧಾನದಿಂದ ಇರಬೇಕು. ನಾವೇನೂ ಅಧಿಕಾರ ದಾಹಕ್ಕಾಗಿ ಇಲ್ಲಿ ಬಂದು ಕುಳಿತಿಲ್ಲ. ನಾವಿಬ್ಬರೂ ಒಟ್ಟಾಗುವುದು ನಿಮಗೆ ಇಷ್ಟವಿಲ್ಲವೇ? ಹಿಂದೆ ಮಾಧ್ಯಮಗಳಲ್ಲಿ ಏನೆಲ್ಲಾ ಆಗಿದೆ, ನನ್ನ ಮತ್ತು ರಾಮಕೃಷ್ಣ ಹೆಗಡೆ ನಡುವೆ ಏನೆಲ್ಲಾ ನಡೆದಿದೆ ಎಂದು ಬರೆದರು. ಅವೆಲ್ಲವೂ ಗೊತ್ತಿದೆ, ಸುಮ್ಮನಿರಿ ಎಂದರು. ಎರಡೂ ಪಕ್ಷದ ಕಾರ್ಯಕರ್ತರಲ್ಲಿ ಬೇಸರ ಇರಬಹುದು. ಅವರ ಮನವೊಲಿಸುತ್ತೇವೆ, ಒಟ್ಟಿಗೆ ಕರೆದೊಯ್ಯುತ್ತೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next