Advertisement

ಕಷ್ಟಕಾಲದಲ್ಲಿ ಕೈ ಹಿಡಿಯಿತು ಕಸೂತಿ ಕಲೆ

11:17 AM Dec 26, 2019 | mahesh |

ಹಾಸ್ಟೆಲ್‌ ಮಕ್ಕಳಿಗೆ ವಾರ್ಡನ್‌ ಅಂದ್ರೆ ಭಯ. ತುಂಬಾ ಸ್ಟ್ರಿಕ್ಟ್ ಇರ್ತಾರೆ. ಪ್ರೀತಿಯಿಂದ ಮಾತಾಡಿಸುವುದಿಲ್ಲ ಅಂತೆಲ್ಲಾ ವಾರ್ಡನ್‌ ಬಗ್ಗೆ ದೂರುಗಳಿರುತ್ತವೆ. ಆದರೆ, ಚಾಮನಾಳದ ಕಸ್ತೂರಬಾ ಬಾಲಕಿಯರ ವಸತಿ ಶಾಲೆಯ ಮಕ್ಕಳಿಗೆ ಮಾತ್ರ ತಮ್ಮ ವಾರ್ಡನ್‌ ಅಂದ್ರೆ ಅಚ್ಚುಮೆಚ್ಚು. ಯಾಕೆ ಗೊತ್ತಾ? ಅಲ್ಲಿ ವಾರ್ಡನ್‌ ಆಗಿ ಕೆಲಸ ಮಾಡ್ತಿರೋ ಶಾಹೀನ, ಬೇರೆ ವಾರ್ಡನ್‌ಗಳಿಗಿಂತ ಬಹಳ ಭಿನ್ನ.ಯಾದಗಿರಿ ಜಿಲ್ಲೆಯ ಶಹಾಪುರದ ನಿವಾಸಿ ಶಾಹೀನ ಸಿಖೀಲ್‌ಘರ್‌, ಬಡಕಟುಂಬದಿಂದ ಬಂದವರು.

Advertisement

ಬಿ.ಎಸ್ಸಿ. ಮುಗಿಸಿ ವಾರ್ಡ್‌ನ್‌ ಆಗಿ ಕೆಲಸಕ್ಕೆ ಸೇರಿದ ಶಾಹೀನರಿಗೆ, ಬಿಡುವಿನ ವೇಳೆಯನ್ನು ವ್ಯರ್ಥವಾಗಿ ಕಳೆಯುವುದು ಇಷ್ಟವಿರಲಿಲ್ಲ. ಆ ಸಮಯದಲ್ಲಿ ಏನಾದರೂ ಮಾಡಬೇಕೆಂದು ಯೋಚಿಸಿದ ಆಕೆ, ತನಗೆ ಗೊತ್ತಿರುವ ಕಸೂತಿ ಕಲೆಯನ್ನು ಹಾಸ್ಟೆಲ್‌ ಹುಡುಗಿಯರಿಗೂ ಕಲಿಸಲು ನಿರ್ಧರಿಸಿದಳು. ಇದಕ್ಕೆ ಶಾಲಾ ಮುಖ್ಯಸ್ಥೆ ಮತ್ತು ಶಿಕ್ಷಕಿಯರಿಂದಲೂ ನೆರವು ಸಿಕ್ಕಿತು.

ವಾರದಲ್ಲಿ 2 ದಿನ ತರಬೇತಿ
ಸದ್ಯ, ಪ್ರಾಥಮಿಕ ಶಾಲೆಯ 150 ಹಾಗೂ ಪ್ರೌಢಶಾಲೆಯ 50 ವಿದ್ಯಾರ್ಥಿನಿಯರು ಶಾಹೀನ ಅವರಿಂದ ಕಸೂತಿ ಕಲೆ ತರಬೇತಿ ಪಡೆಯುತ್ತಿದಾರೆ. ಶನಿವಾರ-ಭಾನುವಾರ ಹಾಗೂ ರಜೆ ದಿನಗಳಲ್ಲಿ ಸಿಗುವ ಬಿಡುವಿನ ವೇಳೆಯಲ್ಲಿ, ಎಲ್ಲರೂ ಆಕೆಯ ಸುತ್ತ ಕುಳಿತು, ಉತ್ಸಾಹದಿಂದ ಕಸೂತಿ ಹೆಣೆಯುತ್ತಾರೆ.

ಎಂಬ್ರಾಯ್ಡ್ ರಿಗೆ ಒತ್ತು
ಇತ್ತೀಚಿನ ದಿನಗಳಲ್ಲಿ ಎಂಬ್ರಾಯ್ಡ್ ರಿ ಕೆಲಸಕ್ಕೆ ಎಲ್ಲಿಲ್ಲದ ಬೇಡಿಕೆ ಇದೆ. ಸೀರೆ, ಬ್ಲೌಸ್‌ಗೆ ಎಂಬ್ರಾಯxರಿ ಹಾಕಿಸುವುದು ಈಗಿನ ಟ್ರೆಂಡ್‌. ಅದನ್ನು ಕಲಿತರೆ ಸ್ವಂತ ಸಂಪಾದನೆಗೆ ಮೋಸವಿಲ್ಲ. ಹೀಗಾಗಿ, ವಿದ್ಯಾರ್ಥಿನಿಯರಿಗೆ ಪ್ರತಿದಿನ ಶಾಲಾ ಅವಧಿಯ ನಂತರ ಸಂಜೆ 40 ನಿಮಿಷ ಬಟ್ಟೆ ಹೊಲಿಗೆ ಮತ್ತು ಎಂಬ್ರಾಯxರಿ ಕೆಲಸ ಕಲಿಸುತ್ತಾರೆ ಶಾಹೀನ.

ರೇಷ್ಮೆದಾರ, ಉಲನ್‌ ದಾರ, ಪ್ಲಾಸ್ಟಿಕ್‌ ವೈರ್‌, ಬಾಗಿಲು ಪರದೆ, ಟೇಬಲ್‌ ಕ್ಲಾಥ್‌, ಮಕ್ಕಳ ಹೊದಿಕೆ ಶಾಲು, ಗರಂ ಟೋಪಿ, ಚಿತ್ತಾರದ ಕ್ಯಾಪ್‌, ಬೊಂಬೆ, ಬಾಸ್ಕೆಟ್‌ ಬ್ಯಾಗ್‌, ಕರವಸ್ತ್ರ, ಹಡಗು, ನಾವಿ, ತೆಪ್ಪ, ಕಿವಿ ಓಲೆ, ಹೇರ್‌ಬ್ಯಾಂಡ್‌, ಮುತ್ತಿನ ಮರ, ಮುತ್ತಿನ ಸರ, ಮುತ್ತಿನ ಬಳೆ, ತೊಟ್ಟಿಲು, ಬುತ್ತಿ ಡಬ್ಬಿಯ ಹೊದಿಕೆ ಮೇಣದ ಬತ್ತಿ ತಯಾರಿಕೆ, ಹರಿದ ಸೀರೆಗಳಿಂದ ಮ್ಯಾಟ್‌ ತಯಾರಿಸುವುದು, ಆಟದ ಸಾಮಾನುಗಳು, ಫ್ಲವರ್‌ ಪಾಟ್‌, ಪಕ್ಷಿಗಳ ಪ್ರತಿಕೃತಿ… ಹೀಗೆ, ಶಾಹೀನಾ ಹೇಳಿಕೊಡುವ ಕಸೂತಿ ಪಾಠದ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಹೀಗೆ ತಯಾರಿಸಿದ ವಸ್ತುಗಳನ್ನು, ಹತ್ತಿರದ ವ್ಯಾಪಾರಸ್ಥರಿಗೆ ಮಾರಾಟ ಮಾಡುತ್ತಾರೆ.

Advertisement

ಉಪಜೀವನಕ್ಕೆ ಸಹಕಾರಿ
ಮಕ್ಕಳನ್ನು ಹಾಸ್ಟೆಲ್‌ಗೆ ದಾಖಲಿಸುವಾಗಲೇ ಪಾಲಕರಿಗೆ, ಕಸೂತಿ ತರಬೇತಿಗೆ ಬೇಕಾಗುವ ಸಾಮಗ್ರಿಗಳನ್ನು ಒದಗಿಸುವಂತೆ ತಿಳಿಸಲಾಗುತ್ತದೆ. ವಿದ್ಯಾರ್ಥಿನಿಯರು, ತಾವು ತಯಾರಿಸುವ ಚಿತ್ತಾಕರ್ಷಕ ವಸ್ತುಗಳನ್ನು ಮನೆಗೂ ಕೊಂಡೊಯ್ಯಬಹುದು. ವಸತಿ ನಿಲಯದಲ್ಲಿದ್ದು ವಿದ್ಯಾಭ್ಯಾಸ ಮುಗಿಸಿದ ಅದೆಷ್ಟೋ ವಿದ್ಯಾರ್ಥಿನಿಯರು, ಕರಕುಶಲ ಕಲೆಯಿಂದ ಬದುಕು ಕಟ್ಟಿಕೊಂಡಿದ್ದಾರೆ. ವಿದ್ಯಾಭ್ಯಾಸದ ನಂತರ ಮದುವೆಯಾಗಿ ಬೇರೆ ಪಟ್ಟಣಗಳಿಗೆ ಹೋಗಿರುವ ಹುಡುಗಿಯರು, ಕರಕುಶಲ ವಸ್ತುಗಳನ್ನು ತಯಾರಿಸಿ, ಮಾರಾಟ ಮಾಡಿ ಉಪಜೀವನಕ್ಕೆ ದಾರಿ ಕಂಡುಕೊಂಡಿದ್ದಾರೆ.

“ವಿದ್ಯಾರ್ಥಿ ಜೀವನದಲ್ಲಿ ಕಲಿತಕೊಂಡ ಕರಕುಶಲ ಕಲೆ ಕುಟುಂಬದ ಕೈ ಹಿಡಿದಿದೆ. ವಿವಿಧ ನಮೂನೆಯ ಆಕೃತಿಗಳನ್ನು ಮಾರಾಟ ಮಾಡಿ ಸಂಸಾರ ಸಾಗಿಸುತ್ತಿದ್ದೇವೆ. ಕರಕುಶಲ ಕಸೂತಿ ಕೆಲಸ ನಮ್ಮ ಜೀವನಕ್ಕೆ ಆಧಾರವಾಗಿದೆ’
-ಮಲ್ಲಮ್ಮ ಪಟೇಲ್‌, ಹಾಸ್ಟೆಲ್‌ನ ಹಳೆ ವಿದ್ಯಾರ್ಥಿನಿ

“ವಾರ್ಡ್‌ನ್‌ ಕಲಿಸಿಕೊಟ್ಟ ಕರಕುಶಲ ಕಲೆ ನಮ್ಮ ಬದುಕಿಗೆ ಆಶ್ರಯವಾಗಿದೆ. ಈ ಕಲೆಯಿಂದ ಆರ್ಥಿಕವಾಗಿ ಸದೃಢವಾಗಿರಲು ಸಾಧ್ಯವಾಗಿದೆ. ಶಾಹೀನ ಮೇಡಂ ಅವರನ್ನು ನಾನು ಪ್ರತಿನಿತ್ಯವೂ ಸ್ಮರಿಸುತ್ತೇನೆ’
-ಶ್ರೀದೇವಿ, ಹಳೆ ವಿದ್ಯಾರ್ಥಿನಿ

ಸಿದ್ದಯ್ಯ ಪಾಟೀಲ

Advertisement

Udayavani is now on Telegram. Click here to join our channel and stay updated with the latest news.

Next