ಅಲ್ಲಿ ನಾನು ನೋಡಿದ್ದು ಬಣ್ಣದ ಚಿತ್ತಾರಗಳು. ಆದರೆ, ಅದು ಆರ್ಟ್ ಗ್ಯಾಲರಿಯಲ್ಲ. ಕೈಚೀಲಗಳ ಪ್ರದರ್ಶನ. ಕೈಚೀಲಗಳ ಮೇಲೆ ಕಲಾವಿದರ ಕೈಚಳಕ ಮೂಡಿರುವುದು ಮತ್ತಷ್ಟು ಆಶ್ಚರ್ಯ ತರಿಸಿತು. ತರುಣಿಯರ ಮನಸೂರೆಗೊಳಿಸುವಂತ ಸುಂದರ ಹ್ಯಾಂಡ್ ಪೇಂಟಿಂಗ್‌ಗಳು. ಸಾಮಾನ್ಯವಾಗಿ ಪೇಂಟಿಂಗ್‌ಗಳು ವಾಲ್ ಪೇಪರ್, ಫೋಟೋ ಫ್ರೇಮ್‌ಗಳಲ್ಲಿ ನೋಡುತ್ತೇವೆ. ಆದರೆ, ಈ ಹೊಸ ಪರಿಕಲ್ಪನೆ ಯಾರಿಂದ ಮೂಡಿರಬಹುದು ಎಂದು ವಿಚಾರಿಸಿದಾಗ ತಿಳಿದುಬಂದಿದ್ದು, ಬೆಂಗಳೂರಿನ ಯುವತಿ ವಿನ್ಯಾಸಗಾರ್ತಿ ಜಾಗೃತಿ ಗಿರಿಯಾರಿಂದ ಎಂದು.
ಕಲೆಯನ್ನು ಕೈಚೀಲಗಳ ಮೇಲೆ ಅರಳಿಸಿರುವ ವಿನ್ಯಾಸಗಾರ್ತಿ ಜಾಗೃತಿ ಗಿರಿಯಾ. ಮೂಲತಃ ಫ್ಯಾಷನ್ ಡಿಸೈನರ್. ಅದರಲ್ಲೂ ವಿಶೇಷವಾಗಿ ಬ್ಯಾಗ್ ಡಿಸೈನ್‌ನಲ್ಲಿ ಪರಿಣತೆ. ಜೊತೆಗೆ ಫೈನ್ ಆರ್ಟ್ ಆಸಕ್ತೆಯಾದ್ದರಿಂದ ‘ಲವ್ ಆರ್ಟ್ ಫ್ಯಾಷನ್’ ಕಂಪನಿ ಸ್ಥಾಪಿಸಿ ಗೆಲುವಿನ ನಗೆ ಬೀರಿದ್ದಾರೆ.
ಲವ್ ಆರ್ಟ್ ಫ್ಯಾಷನ್ ಕೈಚೀಲಗಳಲ್ಲಿ ಯಾವುದೇ ರೀತಿ ಕ್ರೌರ್ಯ ಪ್ರದರ್ಶನಗಳಿಲ್ಲ, ಚರ್ಮ ಬಳಕೆ ಇಲ್ಲವೇ ಇಲ್ಲ. ಅಪ್ಪಟ ಸಸ್ಯಾಹಾರಿ ಬ್ಯಾಗ್‌ಗಳು. ಕೇವಲ ಪ್ರಕೃತಿ, ಪ್ರಾಣಿ, ಪಕ್ಷಿಗಳು, ಪರಿಸರ, ಗಿಡ, ಮರ, ಹೂವು, ಪ್ರೀತಿ, ಪ್ರೇಮ ಹಾಗೂ ಪ್ರೇಕ್ಷಣೀಯ ಸ್ಥಳಗಳು ಎಲ್ಲವೂ ಹ್ಯಾಂಡ್ ಬ್ಯಾಗ್‌ಗಳ ಮೇಲೆ ಮೂಡಿಬಂದಿರುವುದು. ಗುಣಮಟ್ಟದ ಬಣ್ಣಗಳು, ಅಪ್ಪಟ ದೇಶೀಯ ವಸ್ತುಗಳು, ಕ್ಯಾನ್‌ವಾಸ್‌ಗಳು ಹಾಗೂ ಬಟ್ಟೆಗಳನ್ನು ಬಳಸಿದ್ದಲ್ಲದೆ ಸ್ಥಳೀಯ ಕಲಾವಿದರ, ಕರಕುಶಲಗಾರರ ಹಸ್ತಕ್ಷೇಪವೂ ಇದರಲ್ಲಿದೆ.
ಪ್ರಥಮ ಬಾರಿಗೆ 2014ರಲ್ಲಿ ಧರಿಸಬಹುದಾದ ಕಲೆಯ ಪರಿಕಲ್ಪನೆಯಲ್ಲಿ ಕ್ಯಾನ್‌ವಾಸ್ ಪೇಂಟಿಂಗ್ ಅನ್ನು ಲವ್ ಆರ್ಟ್ ಫ್ಯಾಷನ್ ಆಗಿ ಬದಲಾಯಿಸಿ ಕಲಾ ಆರಾಧಕರಿಗೆ ಹಾಗೂ ಪರಿಸರ ಪ್ರೇಮಿ ಗ್ರಾಹಕರಿಗೆ ಅನುಕೂಲ ಮಾಡಿಕೊಡಲಾಗಿದೆ. ಕೈಚೀಲಗಳ ಮೇಲೆ ಅರಳಿರುವ ವರ್ಣರಂಜಿತ ಚಿತ್ತಾರಗಳು ಹಾಗೂ ಕುಸುರಿ ಕಲೆಯೂ ಆಕರ್ಷಣೀಯವಾಗಿದ್ದು ಎಲ್ಲ ವರ್ಗದ ಮಹಿಳೆಯರ ಮನಸೆಳೆಯುವಲ್ಲಿ ಯಶಸ್ವಿಯಾಗಿವೆ. ಬ್ಯಾಗ್‌ಗಳನ್ನು ಜೊತೆಯಲ್ಲಿ ಕೊಂಡೊಯ್ಯುವುದರಿಂದ ಒಂದು ರೀತಿಯಲ್ಲಿ ಮಹಿಳೆಯರ ಘನತೆ ಹೆಚ್ಚಿಸುವುದಲ್ಲದೆ, ಕಲೆಯನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಫ್ಯಾಷನ್ ಲೋಕದಲ್ಲಿ ಸೃಜನಾತ್ಮಕ ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲವಾದರೂ ಎರಡೂವರೆ ಸಾವಿರದಿಂದ ಆರು ಸಾವಿರದವರೆ ಇದಕ್ಕೆ ಬೆಲೆ ನಿಗದಿಪಡಿಸಲಾಗಿದೆ.
ಅಥೆನ್ಸ್ ನಗರ ಸ್ಫೂರ್ತಿ: ಕೈಚೀಲಗಳ ಮೇಲೆ ಕಲೆ ಅರಳಿಸಲು ನನಗೆ ಸ್ಫೂರ್ತಿ ನೀಡಿದ ಡಿಸೈನ್‌ಗಳು ಗೀÅಸ್ ದೇಶದ ಅಥೆನ್ಸ್‌ನ ಪುರಾತನ ನಗರದ ಕೊಬ್ಬಲ್ ಸ್ಟೋನ್ ಸ್ಟ್ರೀಟ್ಸ್ ಮುಂತಾದವು. ಅಲ್ಲದೆ, ಆ ನಗರದ ಸಂಸ್ಕೃತಿ, ಪ್ಲಾಕ, ಸಂಗೀತ ಎಲ್ಲವೂ ಕೂಡ ನನ್ನನ್ನು ರೋಮಾಂಚನಗೊಳಿಸಿದೆ. ಟೆೆಂಪಲ್ ಆಫ್ ಪೊಸೈಡನ್, ದಿ ಪೊಸೈಡನ್ ಟೊಟೆ, ಬೊಗನ್‌ವಿಲ್ಲೆ ಮರ, ದಿ ಬೊಗನ್‌ವಿಲ್ಲೆ ಅಬ್‌ಸ್ಟ್ರಾಕ್ಟ್ ಆರ್ಟ್ ಟೊಟೆ, ಈವಿಲ್ ಹೈ ಪ್ರೊಟೆಕ್ಷನ್ ಚಾರ್ಮ್ ಮತ್ತು ಟ್ವಿನ್ ಬ್ರಾಂಚಸ್ ಆಫ್ ಆಲಿವ್ ಮರ. ಪ್ರವಾಸಕ್ಕೆ ಬಳಸುವ ಬ್ಯಾಗ್ ಕಲೆಕ್ಷನ್‌ಗಳಲ್ಲಿ ಮೆಸಿಡೊನಿಯಾದ ಬಿಯರ್‌ಸನ್ ಮಿಕ್ಸ್, ಬ್ಲೂ ಕೋಸ್ಟಲೈನ್, ಕ್ರಿಸ್³ ವೈಟ್ ಆರ್ಕಿಟೆಕ್ಚರ್ ಮತ್ತು ಎವರ್‌ಲಾಸ್ಟಿಂಗ್ ಸನ್‌ಶೈನ್ ಎಲ್ಲ ಬ್ಯಾಗ್‌ಗಳನ್ನು ಬೆಂಗಳೂರಲ್ಲೇ ತಯಾರಿಸಲಾಗುತ್ತಿದೆ. ಇದುವರೆಗೆ ಸುಮಾರು 25 ವಿಶಿಷ್ಟ ಡಿಸೈನ್ ಬ್ಯಾಗ್‌ಗಳನ್ನು ಲವ್ ಆರ್ಟ್ ಫ್ಯಾಷನ್ ಹೆಸರಿನಲ್ಲಿ ಹೊರತಂದಿದ್ದೇನೆ. ಪ್ರತಿಯೊಂದು ಕೈಚೀಲಕ್ಕೂ ಒಂದೊಂದು ಕಥೆಯಿದೆ. ಪ್ರಸ್ತುತ ಎಲ್ಲ ಬ್ಯಾಗ್‌ಗಳು www.zapyle.com ಮೂಲಕ ದೊರೆಯುತ್ತಿವೆ ಎಂದಿದ್ದಾರೆ ಜಾಗೃತಿ ಗಿರಿಯಾ.
– ಗೋಪಾಲ್ ತಿಮ್ಮಯ್ಯ