ಹನಮಸಾಗರ: ಜಿಲ್ಲೆಯೇ ಅತಿ ದೊಡ್ಡ ಗ್ರಾಮ ಪಂಚಾಯತ್ ಎಂಬ ಹಣೆಪಟ್ಟಿ ಹೊಂದಿರುವ ಹನುಮಸಾಗರ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಅಧಿಕಾರಿ ಇಲ್ಲದೇ ಆಡಳಿತ ಯಂತ್ರ ಸ್ಥಗಿತಗೊಂಡಾಗಿದ್ದು, ಸಾರ್ವಜನಿಕರು ಅಗತ್ಯ ಕೆಲಸಗಳಿಗಾಗಿ ಪರದಾಡುವಂತಾಗಿದೆ. ಗ್ರಾಪಂನಲ್ಲಿ ಪಿಡಿಒ ಇಲ್ಲದ ಕಾರಣ ಸಾರ್ವಜನಿಕರು ಮನೆ ಉತಾರ, ಕಟ್ಟಡ ಪರವಾನಗಿ, ಜಿಪಿಎಸ್ ಇತ್ಯಾದಿ ಕೆಲಸ ಕಾರ್ಯಗಳಿಗೆ ನಿತ್ಯ 5-6 ಬಾರಿ ಅಲೆದಾಡುವಂತಾಗಿದೆ. ದೈನಂದಿನ ಕೆಲಸ ಕಾರ್ಯಗಳನ್ನು ಬಿಟ್ಟು ಸಾರ್ವಜನಿಕರು ಗ್ರಾಪಂಗೆ ಎಡತಾಕುತ್ತಿದ್ದಾರೆ. ಈ ಬಗ್ಗೆ ಕೇಳಿದರೆ ಪಿಡಿಒ ಇಲ್ಲ, ಬಂದ ಮೇಲೆ ಬನ್ನಿ ಎಂದು ಗ್ರಾಪಂ ಸಿಬ್ಬಂದಿಯಿಂದ ಸಿದ್ಧ ಉತ್ತರ ಸಿಗುತ್ತದೆ.
ಒಂದು ವಾರದ ಹಿಂದೆ ಪಿಡಿಒ ದೇವೇಂದ್ರ ಕಮತರ ಅವರ ಬದಲಾಗಿ ನಿಂಗಪ್ಪ ಮೂಲಿಮನಿ ಎನ್ನುವವರು ಅಧಿಕಾರ ವಹಿಸಿಕೊಂಡಿದ್ದರು. ಅಧಿಕಾರ ವಹಿಸಿಕೊಂಡ ಬಳಿಕ ಅವರು ಮರಳಿ ಪಂಚಾಯತ್ ಕಡೆ ತಲೆಯನ್ನೇ ಹಾಕಿಲ್ಲ. ಪಂಚಾಯತಿಯಲ್ಲಿ ಹೇಳುವವರು, ಕೇಳುವವರು ಇಲ್ಲದಂತಾಗಿದೆ. ಈ ಹಿಂದೆಯೂ ಪಿಡಿಒ ಅವರನ್ನು ವರ್ಗಾವಣೆ ಮಾಡಿ, ಮಹಿಳಾ ಪಿಡಿಒ ಒಬ್ಬರಿಗೆ ಅಧಿಕಾರ ವಹಿಸಿಕೊಳ್ಳಲು ತಿಳಿಸಿದ್ದರು. ಆಗಲೂ ಅವರು ಒಂದು ದಿನ ಅಧಿಕಾರ ವಹಿಸಿಕೊಂಡು ನಂತರ ಬರಲೇ ಇಲ್ಲ. ದಿಢೀರನೇ ಈ ಮೊದಲಿನ ಪಿಡಿಒ ಅವರು ವರ್ಗಾವಣೆಯಾಗಿದ್ದಾರೆ.
ಅವರ ಸ್ಥಾನಕ್ಕೆ ನಿಂಗಪ್ಪ ಮೂಲಿಮನಿ ಅವರು ಅಧಿಕಾರ ವಹಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಪ್ರಭಾರ ಅಧಿಕಾರ ವಹಿಸಿಕೊಂಡಿರುವ ಜಹಗೀರ ಗುಡದೂರ ಗ್ರಾಪಂ ಪಿಡಿಒ ನಿಂಗಪ್ಪ ಮೂಲಿಮನಿ ಮಾತನಾಡಿ, ಮೇಲಾಧಿಕಾರಿಗಳ ಆದೇಶದ ಮೇರೆಗೆ ಅಧಿಕಾರವಹಿಸಿಕೊಂಡಿದ್ದೆ. ಆದರೆ ತಾತ್ಕಾಲಿಕವಾಗಿ ಬೇಡ ಎಂದು ತಿಳಿಸಿದ್ದರಿಂದ ಪುನಃ ಪಂಚಾಯಿತಿಗೆ ತೆರಳಿಲ್ಲ ಎಂದು ಹೇಳಿದರು.
ಅಧಿಕಾರಿಗಳ ಈ ನಡೆ ಸಾರ್ವಜನಿಕರಲ್ಲಿ ಅನುಮಾನ ಮೂಡಿಸುತ್ತಿದೆ. ಹನುಮಸಾಗರ ಗ್ರಾಮ ಪಂಚಾಯಿತಿಗೆ ಅಭಿವೃದ್ಧಿ ಅಧಿಕಾರಿಯನ್ನು ಕೂಡಲೇ ನಿಯೋಜಿಸಿ ಅವರಿಗೆ ಸಂಪೂರ್ಣ ಅಧಿಕಾರ ಹಸ್ತಾಂತರಿಸುವ ಮೂಲಕ ಕುಂಠಿತಗೊಂಡಿರುವ ಗ್ರಾಪಂ ಕಾರ್ಯಗಳಿಗೆ ವೇಗ ನೀಡಬೇಕು. ಇಲ್ಲವಾದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.
ಪ್ರಸ್ತುತ ಪಿಡಿಒ ದೇವೆಂದ್ರ ಕಮತರ ವೈದ್ಯಕೀಯ ರಜೆ ಮೇಲೆ ತೆರಳಿದ್ದು, ಬಂದ ಬಳಿಕ ಅವರು ಮುಂದುವರಿಯುತ್ತಾರೆ. ಪಿಡಿಒ ನಿಂಗಪ್ಪ ಮೂಲಿಮನಿ ಅವರು ಅದೇ ಪಂಚಾಯಿತಿಯಲ್ಲಿ ಅಮಾನತು ಆಗಿದ್ದರಿಂದ ಅಲ್ಲಿ ಪುನಃ ನೇಮಿಸಲು ಬರುವುದಿಲ್ಲ. ಆದ್ದರಿಂದ ತಾತ್ಕಾಲಿತವಾಗಿ ಪ್ರಭಾರಿಯಾಗಿ ಚಳಗೇರಾ ಪಿಡಿಒ ಬಸವರಾಜ ಸಂಕನಾಳ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ. ಸೋಮವಾರ ಅವರು ಅಧಿಕಾರ ಸ್ವೀಕರಿಸುವರು
. –ತಿಮ್ಮಪ್ಪ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ, ಕುಷ್ಟಗಿ
-ವಸಂತ ಶಿನ್ನೂರು