Advertisement

ಹಣಕುಣಿ-ಕುಡಂಬಲ್‌ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ: ಜನರಲ್ಲಿ ಹೆಚ್ಚಿದ ಆತಂಕ

01:29 PM Oct 13, 2021 | Team Udayavani |

ಹುಮನಾಬಾದ: ತಾಲೂಕಿನ ಹಣಕುಣಿ ಗ್ರಾಮದಲ್ಲಿ ಮಂಗಳವಾರ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಅಲ್ಲದೆ ಸಂಜೆ ಹೊತ್ತಿಗೆ ಕೂಡಂಬಲ್‌ ಗ್ರಾಮದ ಹೊರ ಪ್ರದೇಶದಲ್ಲಿ ಪ್ರತ್ಯಕ್ಷವಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

Advertisement

ಹಣಕುಣಿ ಗ್ರಾಮದ ಹುಸೇನ್‌ ಸಾಬ್‌ ಎಂಬ ರೈತನ ಹೊಲದಲ್ಲಿನ ಎಮ್ಮೆ, ಕರು ಹಾಗೂ ನಾಯಿಯ ಭೇಟಿಯಾಡಿದ್ದು, ಮೃತಪಟ್ಟ ಜಾನುವಾರುಗಳ ಸುತ್ತಲ್ಲಿನ ಪ್ರದೇಶದಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆನಡೆಸಿದ್ದಾರೆ.

ಹೆಜ್ಜೆಗುರುತಿನ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಅರಣ್ಯ ಸಿಬ್ಬಂದಿಗಳು ಚಿರತೆ ಹಾಗೂ ಚಿರತೆ ಮರಿ ಇರುವ ಬಗ್ಗೆ ಖಚಿತ ಪಡಿಸಿಕೊಂಡಿದ್ದಾರೆ. ಸಿಬ್ಬಂದಿ ಖುದ್ದು ನೋಡಿರುವುದಾಗಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂಓದಿ:  ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಗುಡಿಸಲು ಮನೆ‌ಸುಟ್ಟು ಭಸ್ಮ

ಘಟನಾ ಸ್ಥಳಕ್ಕೆ ಅರಣ್ಯ ಅಧಿಕಾರಿ ಬಸವರಾಜ ಡಾಂಗೆ ಭೇಟಿ ನೀಡಿ ಚಿರತೆ ಚಲನವಲನ ಕುರಿತು ಮಾಹಿತಿ ಪಡೆದರು. ಚಿರತೆ ಬಂಧಿಸುವ ಕುರಿತು ಸಿಬ್ಬಂದಿ ಜೊತೆಗೆ ಸುಧೀಘ ಚರ್ಚೆ ನಡೆಸಿದರು. ಹಣಕುಣಿ ಗ್ರಾಮದ ಹೊರವಲಯದ ಹೊಲದಲ್ಲಿ ಚಿರತೆ ಜೊತೆಗೆ ಮರಿ ಚಿರತೆ ಇರುವುದು ಖಚಿತವಾಗಿದೆ. ಇದೀಗ ಅತ್ಯಾಧುನಿಕ ಕ್ಯಾಮೆರಾ ಅಳವಡಿಸುವ ಸಿದ್ಧತೆ ನಡೆಸಲಾಗುತ್ತಿದೆ. ಚಿರತೆ ಭೇಟೆಯಾಡಿದ ಪ್ರಾಣಿಯ ಮಾಂಸ ತಿನ್ನಲು ಮತ್ತೆ ಬರುವ ಸಾಧ್ಯತೆಗಳು ಹೆಚ್ಚಿದ್ದು, ಕ್ಯಾಮೆರಾಗಳ ಮೂಲಕ ಚಲನವಲನ ಕುರಿತು ನಿಗಾ ವಹಿಸಲಾಗುತ್ತದೆ. ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಬೋನ್‌ ಬಂದ ಕೂಡಲೇ ಕಾರ್ಯಾಚರಣೆ ನಡೆಸಿ ಚಿರತೆ ಬಂಧನ ಮಾಡುವುದಾಗಿ ತಿಳಿಸಿದ್ದಾರೆ.

Advertisement

ಚಿರತೆ ಬಂಧನಕ್ಕೆ ಗ್ರಾಮಸ್ಥರು ಕೂಡ ಸಹಕರಿಸಬೇಕು. ಯಾವುದೇ ಕಾರಣಕ್ಕೆ ಘಟನಾ ಸ್ಥಳದ ಕಡೆಗೆ ಬರದಂತೆ ಎಚ್ಚರಿಕೆ ವಹಿಸಬೇಕು. ರಾತ್ರಿ ಸಮಯದಲ್ಲಿ ಯಾರು ಸುತ್ತಾಡಬಾರದು ಎಂದು ಮನವಿ ಮಾಡಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಚಿಟಗುಪ್ಪ ಪೊಲೀಸ್‌ ಠಾಣೆ ಪಿಎಸ್‌ಐ ಮಹೇಂದ್ರ ಗ್ರಾಮಸ್ಥರ ಜೊತೆಗೆ ಮಾತನಾಡಿ, ಜಾಗೃತೆ ವಹಿಸುವಂತೆ ತಿಳಿಸಿದರು. ಅಲ್ಲದೆ ಗ್ರಾಪಂ ಅಧಿಕಾರಿಗಳನ್ನು ಮಾತನಾಡಿಸಿ, ಹಣಕುಣಿ ಹಾಗೂ ಸಿಂಧನಕೇರಾ ಗ್ರಾಮದಲ್ಲಿ ಡಂಗೂರ ಸಾರಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಅನಾವಶ್ಯಕವಾಗಿ ಜನರು ರಾತ್ರಿ ಸುತ್ತಾಡದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ಸಂಜೆ ಸುಮಾರು 5:30 ಗಂಟೆಗೆ ಚಿಟಗುಪ್ಪ ತಾಲೂಕಿನ ಕೂಡಂಬಲ್‌ ಗ್ರಾಮದ ಭುಯಾರ್‌ ರಸ್ತೆಯ ಗುಡ್ಡಗಾಡು ಪ್ರದೇಶದಲ್ಲಿ ಚಿರತೆಯೊಂದು ಕಂಡು ಬಂದಿದೆ ಎಂದು ಅಂಬರೀಶ ದೇಶಪಾಂಡೆ ಸೇರಿದಂತೆ ಇತರೆ ಅಲ್ಲಿನ ಕೆಲವರು ಅರಣ್ಯ ಹಾಗೂ ಪೊಲೀಸ್‌ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇದು ಅರಣ್ಯ ಅಧಿಕಾರಿಗಳನ್ನು ಗೊಂದಲಕ್ಕೀಡು ಮಾಡಿದೆ. ಅಲ್ಲಿಗೂ ಅಧಿಕಾರಿಗಳ ತಂಡ ಕಳುಹಿಸಿ ಪರಿಶೀಲನೆ ನಡೆಸುವುದಾಗಿ ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next