Advertisement

ಪಪೆಟ್‌ ನಾಟಕದಿಂದ ಪ್ಲಾಸ್ಟಿಕ್‌ ಬಳಕೆ ಜಾಗೃತಿ

06:21 PM Jan 09, 2020 | Naveen |

ಹಾನಗಲ್ಲ: ಮಾನವ ತನಗಾಗಿ ಸೃಷ್ಟಿಸಿದ ಪ್ಲಾಸ್ಟಿಕ್‌ ಮನುಕುಲಕ್ಕೆ ಮುಳುವಾಗಿ, ಜೀವರಾಶಿಗಳ ಪಾಲಿನ ಪ್ರಳಯಾಂತಕವಾಗಿರುವ ಸಂಗತಿಯನ್ನು ಮೈಸೂರಿನ ವೀರು ಥಿಯೇಟರ್‌ ಪಪೆಟ್‌ ನಾಟಕ ಪ್ರದರ್ಶಿಸುವ ಮೂಲಕ ಅದ್ಭುತ ಅರಿವು ಮೂಡಿಸಿತು.

Advertisement

ಹಾನಗಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶ್ರವಣ ಹೆಗ್ಗೋಡು ಅವರ ರಚನೆ ಹಾಗೂ ನಿರ್ದೇಶನದ, ಮಹೇಶ ಕಲ್ಲತ್ತಿ ಅವರ ಬೆಳಕಿನ ನಿರ್ವಹಣೆಯಲ್ಲಿ “ದಿ ಪಪೆಟ್‌ ಶೋ ಪ್ಲಾಸ್ಟಿಸಿಟಿ’ ಅತ್ಯಂತ ಗಂಭೀರವಾಗಿ ಸಹೃದಯರ ಮನದಲ್ಲಿ ಕಲಾತ್ಮಕವಾಗಿ ತುಂಬಿಕೊಂಡಿರುವುದು ಮಾತ್ರವಲ್ಲ, ಯಾರೇ ಎಷ್ಟೇ ಭಾಷಣ ಮಾಡಿದರೂ ಅರಿವಿಗೆ ಬರಲಾರದ ಪ್ಲಾಸ್ಟಿಕ್‌ ಅನಾಹುತದ ಬಗೆಗೆ ಇದು ಜಾಗೃತಿ ಮೂಡಿಸಿತು.

ನಮ್ಮ ಜನಪದೀಯ ಜೀವನದಲ್ಲಿ ಕಟ್ಟಿಗೆ, ಬಿದಿರು, ಲೋಹ ಸೇರಿದಂತೆ ಪ್ರಾಕೃತಿಕ ವಸ್ತುಗಳನ್ನು ಬಳಸಿಯೇ ಜೀವನದ ಶೈಲಿಯನ್ನು ಸುಗಮ ಮಾಡಿಕೊಂಡ ಈ ಮಾನವ ಈಗ ತಾನೇ ನಿರ್ಮಿಸಿದ ಪ್ಲಾಸ್ಟಿಕ್‌ಗೆ ಪ್ರಾಣ ನೀಡುತ್ತಿದ್ದಾನೆ. ಫ್ಯಾಕ್ಟರಿಗಳು ತುಂಬಿ ತಂದ ಪ್ಲಾಸ್ಟಿಕ್‌ ಕೇವಲ ಮನುಷ್ಯನಿಗೆ ಮಾತ್ರವಲ್ಲ ಜೀವ ಜಲಚರಗಳ ಪಾಲಿಗೂ ಮಾರಕವಾಗಿದ್ದು. ಮನುಷ್ಯ ಪ್ಲಾಸ್ಟಿಕ್‌ ಅಪಾಯ ತಿಳಿದೂ ಬಳಸುವ ಅರಿವಿನ ಮೂಢನಾಗಿದ್ದಾನೆ. ಭೂಮಿ ,ಕಾಡು, ಜಲ, ಆಕಾಶ ಎಲ್ಲವನ್ನೂ ಕಲ್ಮಶಗೊಳಿಸುವುದು ಮಾತ್ರವಲ್ಲ ಅಪಾಯದ ತುತ್ತತುದಿಗೆ ತಂದುಕೊಂಡೂ ಎಚ್ಚರಗೊಳ್ಳದ ಜಾಣ ಕುರುಡುತನ ಇಡೀ ಜಗದ ಸಮಸ್ಯೆಯಾಗಿರುವುದನ್ನು ಮನ ಮುಟ್ಟಿಸಿ, ಜಾಗೃತಿ ಮೂಡಿಸಿ ಜಾಗರೂಕರಾಗಲು ಎಚ್ಚರಿಸಿದ ನಾಟಕ “ದಿ ಪಪೆಟ್‌ ಶೋ ಪ್ಲಾಸ್ಟಿಸಿಟಿ’ ಅದ್ಭುತವಾಗಿತ್ತು. ಕೇವಲ 45 ನಿಮಿಷಗಳ ಅವಧಿಯಲ್ಲಿ ಮಾತುಗಳಿಲ್ಲದೆ ಕೇವಲ ಸಂಗೀತದ ಮಿಶ್ರಣದಲ್ಲಿ ಕಲಾವಿದರ ಕೈಗೊಂಬೆಗಳನ್ನೇ ಪಾತ್ರಧಾರಿಗಳನ್ನಾಗಿ ಆಡಿಸಿದ ಆಟ ಅತ್ಯದ್ಭುತ್‌, ನಾವಿನ್ಯತೆಯಿಂದ ಕೂಡಿತ್ತು.

ನಿರ್ದೇಶಕ ಹಾಗೂ ಈ ಪಪೆಟ್‌ ರಚನೆ ಮಾಡಿದ ಶ್ರವಣ ಹೆಗ್ಗೋಡು ಇವರು ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ಪದವೀಧರರಾಗಿ, ನ್ಯಾಶನಲ್‌ ಸ್ಕೂಲ್‌ ಆಫ್‌ ಡ್ರಾಮಾ ಸೌತ್‌ ಚಾಪ್ಟರ್‌ನಲ್ಲಿ ಡಿಸೈನಿಂಗ್‌ ತರಬೇತಿ ಪಡೆದವರು. 2013ರಲ್ಲಿ ಪಪೆಟ್‌ ಥಿಯೇಟರ್‌ನತ್ತ ಆಸಕ್ತರಾಗಿ ದೆಹಲಿಯ ಅನುರೂಪ್‌ರಾಯ್‌ ಅವರಲ್ಲಿ 5 ವರ್ಷಗಳ ಕಾಲ ತರಬೇತಿ ಪಡೆದು, ಟರ್ಕಿ, ಚೀನಾ ಮುಂತಾದ ದೇಶಗಳಲ್ಲಿ ಪಪೆಟ್‌ ಪ್ರದರ್ಶನಗಳನ್ನು ಮಾಡಿದ್ದಾರೆ. ಶ್ರವಣ ಅವರು ಜಪಾನಿನ ಸಾಂಪ್ರದಾಯಿಕ ಗೊಂಬೆಯಾಟ ಬುನ್ರಾಖು ಮಾದರಿಯನ್ನು ಅನುಸರಿಸುತ್ತಿರುವವರು.

ಪಪೆಟ್‌ ಪ್ರದರ್ಶನದಲ್ಲಿ ಪ್ರಭಾವಯುತ ಕಲಾ ಪ್ರದರ್ಶನಕ್ಕೆ ಹೆಸರಾಗಿರುವ ಶ್ರವಣ ಅವರ ಪ್ರಯತ್ನ ಫಲಪ್ರದವಾಗಿದೆ. ಬೆಳಗಾವಿಯ ವೀರು ಅಣ್ಣೀಗೇರಿ, ಮೈಸೂರಿನ ಶ್ರೇಯಸ್‌ ಪಿ. ಹಾಗೂ ಎಂ. ಸಂತೋಷ, ಗುಬ್ಬಿಯ ಬಸವರಾಜ, ತುಮಕೂರಿನ ನೂತನ್‌ ಹಾಗೂ ಶ್ರೀನಿವಾಸ್‌, ಮಹೇಶ್‌ ನಾಯ್ಕ ಈ ಕಲಾವಿದರು ಅಭಿವ್ಯಕ್ತಪಡಿಸಿದ ಪಪೆಟ್‌ ಪ್ರದರ್ಶನ ಸಹೃದಯರ ಮನಸೂರೆಗೊಂಡಿದ್ದು ಮಾತ್ರವಲ್ಲ ಪ್ಲಾಸ್ಟಿಕ್‌ ಜಾಗೃತಿಗೆ ಕಾರಣವಾಯಿತು. ಸಾಹಿತಿ ಪ್ರೊ| ಮಾರುತಿ ಶಿಡ್ಲಾಪೂರ ಹಾಗೂ ಕಾಲೇಜಿನ ಸಿಬ್ಬಂದಿ ಕಲಾವಿದರನ್ನು ಅಭಿನಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next