ಹಾನಗಲ್ಲ: ಮಹಾತ್ಮ ಗಾಂಧೀಜಿಯವರನ್ನು ಜಗತ್ತು ಪ್ರೀತಿಸುತ್ತಿದೆ. ಭಾರತೀಯರೂ ಗೌರವಿಸುವ ಮೂಲಕ ಗಾಂಧಿಧೀಜಿಯವರ ಆದರ್ಶಗಳ ಪಾಲನೆಗೆ ಮುಂದಾಗುವ ಅವಶ್ಯಕತೆ ಇದೆ ಎಂದು ಕಲಾವಿದ ರವಿ ಲಕ್ಷ್ಮೇಶ್ವರ ಹೇಳಿದರು.
ಇಲ್ಲಿಯ ಸರಕಾರಿ ಪಪೂ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ರಂಗಾಯನ ಧಾರವಾಡ ಅವರ ಸಹಯೋಗದಲ್ಲಿ ಶೇಷಗಿರಿಯ ಕಲಾತಂಡ ಅಭಿನಯಿಸಿದ ‘ಗಾಂಧಿ -150’ ಒಂದು ರಂಗಪಯಣ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಡೀ ವಿಶ್ವವೇ ಗಾಂಧಿ ಜಯಂತಿಯನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸುತ್ತಿರುವ ಹೊತ್ತಿನಲ್ಲಿ ಅವರ ಮಾನವತಾವಾದವನ್ನು ಅನುಸರಿಸುವ ನಿಟ್ಟಿನಲ್ಲಿ ಮುಂದಾಗಬೇಕಾಗಿದೆ. ಗಾಂಧಿ ಹುಟ್ಟಿ ನೂರೈವತ್ತು ವರ್ಷಗಳು ಸಂದಿವೆ. ಅವರ ಕನಸುಗಳು ನನಸಾಗಲು ಇನ್ನೂ ಹೆಣಗಾಡಬೇಕಾಗಿದೆ. ಸ್ವತಂತ್ರ ಭಾರತದ ಕನಸು ಕಂಡು ನನಸಾಗಿಸಿ ಬದುಕನ್ನು ದುರಂತದ ಮೂಲಕ ಕಳದುಕೊಂಡು ಮಹಾತ್ಮ ಗಾಂಧಿಧೀಜಿಯವರು ನಾಡು ಕಂಡ ಅವಿಸ್ಮರಣೀಯ ಮಹಾತ್ಮ ಎಂದರು.
ಪತ್ರಕರ್ತ ಮಾರುತಿ ಪೇಟಕರ ಮಾತನಾಡಿ, ಶಾಲೆಗಳಲ್ಲಿ ಕೇವಲ ಪಠ್ಯಕ್ಕೆ ಜೋತು ಬೀಳದೆ ಸಾಂಸ್ಕೃತಿಕ ಮನಸ್ಸನ್ನು ಅರಳಿಸಿಕೊಳ್ಳುವ ಕೆಲಸ ಆಗಬೇಕಾಗಿದೆ. ಕಲೆ, ಸಾಹಿತ್ಯ ಸಾಂಸ್ಕೃತಿಕ ಕಾರ್ಯಗಳ ಮೂಲಕ ವಿದ್ಯಾರ್ಥಿಗಳ ಮನಸ್ಸನ್ನು ಅರಳಿಸಿ ಅಧ್ಯಯನಕ್ಕೆ ಸಿದ್ಧಗೊಳಿಸಿದರೆ, ಇನ್ನಷ್ಟು ಉತ್ತಮ ಜ್ಞಾನ ಸಂಪಾದನೆಗೆ ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆಗೆ ಒತ್ತು ನೀಡಬೇಕು. ನಮ್ಮೊಳಗೆ ಸಾಂಸ್ಕೃತಿಕ ಸಿರಿಯನ್ನು ಹುರುದುಂಬಿಸಿಕೊಳ್ಳಬೇಕು ಎಂದ ಅವರು, ವಿದ್ಯೆ ಕೇವಲ ಪುಸ್ತಕವಲ್ಲ, ಈ ಜಗದಲ್ಲಿ ಕಲಿಕೆಗೆ ಮನಸ್ಸನ್ನು ತೆರೆದುಕೊಳ್ಳುವುದನ್ನು ಕಲಿಸಬೇಕು. ಇಲ್ಲಿ ಎಲ್ಲವೂ ಇದೆ. ಯಾವುದನ್ನು ಸ್ವೀಕರಿಸಬೇಕು ಎಂಬ ವಿವೇಕ ಬೇಕು ಎಂದರು.
ಪತ್ರಕರ್ತ ಮಲ್ಲಿಕಾರ್ಜುನ ಸುಣಗಾರ ಮಾತನಾಡಿ, ನಾಟಕಗಳು ನಮ್ಮ ಮನಸ್ಸಿನ ವಿಕಾರಗಳಿಗೆ ಕತ್ತರಿ ಪ್ರಯೋಗ ಮಾಡಿ ಸಕಾರಾತ್ಮಕ ಚಿಂತನೆಗೆ ದಾರಿ ಮಾಡುತ್ತವೆ. ನಮ್ಮ ಭಾವಲೋಕವನ್ನು ಜಾಗೃತಗೊಳಿಸುವ ನಾಟಕಗಳು ಹೆಚ್ಚು ಹೆಚ್ಚು ಪ್ರದರ್ಶನವಾಗುವಂತಾಗಬೇಕು ಎಂದರು.
ಸಾಹಿತಿ ಪ್ರಾಚಾರ್ಯ ಮಾರುತಿ ಶಿಡ್ಲಾಪೂರ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಎಚ್. ಎಸ್. ಬಾರ್ಕಿ, ಸಿ.ಎಸ್. ಹಾವೇರಿ, ಎಸ್.ಎಸ್. ನಿಸ್ಸೀಮಗೌಡರ, ಸುಮಂಗಲಾ ನಾಯನೇಗಿಲ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದ ಪ್ರಭು ಗುರಪ್ಪನವರ, ತಂಡದ ವ್ಯವಸ್ಥಾಪಕರಾದ ರಂಜಿತಾ ಜಾಧವ, ಮಧ್ವರಾಜ್ ಮಾತನಾಡಿದರು. ಎಂ.ಮಂಜು, ಸುಭಾಶ, ನಿತೀನ್, ಮಂಜು ಕಠಾರಿ, ಸ್ವರೂಪ, ನಾಗರಾಜ ಕಾಸಂಬಿ, ಅಕ್ಷತಾ, ರೂಪಾ, ಮಹಾಂತೇಶ, ಯಲ್ಲಪ್ಪ, ಲಕ್ಷ್ಮಣ, ಸಣ್ಣಪ್ಪ, ಮಂಜುನಾಥ, ರೇಣುಕಾ ಸುಮನ್ ವಿವಿಧ ಪಾತ್ರಗಳಲ್ಲಿ ಅಭಿನಯಿಸಿದರು. ಶೋಧನ್ ಬಸ್ರೂರು, ಶಾಂತ ಉದ್ಯಾವರ ಅವರ ಸಹ ನಿರ್ದೇಶನದಲ್ಲಿ ನಾಟಕ ಪ್ರದರ್ಶನಗೊಂಡಿತು.