“ಪ್ಯಾನ್ ಇಂಡಿಯಾ(Pan india) ಅಂತಹ ಹೋದರೆ ದಾಡಿ-ಬಾಡಿ ಬೆಳೆಯಬಹುದೇ ಹೊರತು ಬೇರೇನೂ ಆಗುವುದಿಲ್ಲ. ಎಲ್ಲೇ ಹೋದರೂ ಅಂತಿಮವಾಗಿ ಕನ್ನಡಕ್ಕೇ ಬರಬೇಕು…’
– ಹೀಗೆ ಖಡಕ್ ಆಗಿ ಪ್ಯಾನ್ ಇಂಡಿಯಾ ಕ್ರೇಜ್ ಹೊಂದಿರುವ ಹೀರೋಗಳಿಗೆ ಕಿವಿಮಾತು ಹೇಳಿದವರು ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ(Hamsalekha). ಇತ್ತೀಚೆಗೆ “ಗೌರಿ’ ಚಿತ್ರದ ಹಾಡು ಬಿಡುಗಡೆಯಲ್ಲಿ ಅವರು ಮಾತನಾಡಿದರು.
“ಇವತ್ತು ಪ್ಯಾನ್ ಇಂಡಿಯಾ ಎಂಬ ಹುಚ್ಚು ಬಂದು ಕನ್ನಡದ ಸ್ಟಾರ್‌ಗಳಿಗೆ ಕನ್ನಡದ ಬೇರುಗಳು ಕಟ್ ಆಗಿದೆ. ಇವರೆಲ್ಲಾ ಭಾರತದಾದ್ಯಂತ ಖ್ಯಾತ ನಾಯಕರಾಗುತ್ತಾರೆ ಅನ್ನೋದು ಒಂದು ಭ್ರಮೆ. ದಕ್ಷಿಣದಲ್ಲಿ ಯಾರಾದರೂ ಸುಂದರ ನಾಯಕಿಯರಿದ್ದರೆ, ಹೋಗಿ ಉತ್ತರ ಭಾರತದಲ್ಲಿ 20 ವರ್ಷ ಬದುಕಬಹುದೇ ಹೊರತು, ರಜನಿಕಾಂತ್ ಆಗಲೀ, ಕಮಲ್ ಹಾಸನ್, ಮೋಹನ್ ಲಾಲ್, ಮಮ್ಮುಟ್ಟಿಯಾಗಲೀ ಮುಂಬೈನಲ್ಲಿ ಎರಡು ವರ್ಷ ಇರೋಕೆ ಆಗಲ್ಲ. ವಾಪಸ್ಸು ಬಂದುಬಿಡ್ತಾರೆ. ನಮ್ಮ ಹೀರೋಗಳು ಹನಿಮೂನ್ ತರಹ ಹೋಗಿ ಪ್ಯಾನ್ ಇಂಡಿಯಾ ಎಲ್ಲಾ ಸುತ್ತಾಡಿಕೊಂಡು ಬರಬಹುದು. ಅದೆಲ್ಲಿ ಸುತ್ತಿದರೂ ಕೊನೆಗೆ ಕನ್ನಡಕ್ಕೆ ಬರಲೇ ಬೇಕು’ ಎನ್ನುವ ಮೂಲಕ ಪ್ಯಾನ್ ಇಂಡಿಯಾ ಕ್ರೇಜ್ ಬಗ್ಗೆ ಮಾತನಾಡಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಅದರದ್ದೇ ಆದ ಒಂದು ಇತಿಹಾಸ, ಪರಂಪರೆ ಇದೆ ಎಂದಿರುವ ಹಂಸಲೇಖ, “ಎಷ್ಟೊಂದು ಪ್ರಾದೇಶಿಕ ಭಾಷೆಗಳಿವೆ, ಎಷ್ಟೊಂದು ಪ್ರಾದೇಶಿಕ ಚಿತ್ರರಂಗಗಳಿವೆ. ಅದರಲ್ಲಿ ಕೇಳ್ಳೋದಕ್ಕೆ ಬಹಳ ಅರ್ಥಗರ್ಭಿತವಾದ ಶೀರ್ಷಿಕೆ ಎಂದರೆ ಅದು ಸ್ಯಾಂಡಲ್‌ವುಡ್. ಅದನ್ನು ನಾವು ಅಚ್ಚ ಕನ್ನಡದಲ್ಲಿ ಚಂದನವನ ಅಂತ ಕರೆಯುತ್ತೇವೆ. ಸ್ಯಾಂಡಲ್‌ವುಡ್ ಅನ್ನುಬೇರೆ ಯಾವುದಾದರೂ ವುಡ್ ಜೊತೆಗೆ ಹೋಲಿಸುವುದಕ್ಕೆ ಸಾಧ್ಯವಾ? ಬಾಲಿವುಡ್, ಕಾಲಿವುಡ್ ಏನೇನೋ ಇದೆ. ಅದ್ಯಾವುದರ ಜೊತೆಗೆ ಹೋಲಿಕೆ ಮಾಡೋದಕ್ಕೆ ಸಾಧ್ಯವೇ ಇಲ್ಲ. ಏಕೆಂದರೆ, ಸ್ಯಾಂಡಲ್‌ವುಡ್ ಅಂದರೆ ಅದೊಂದು ಪರಿಮಳ. ಗಂಧದ ಪರಿಮಳ. ಅದಕ್ಕೆ ಗಂಧದ ಮರದ ಗುಣಗಳಿವೆ. ಗಂಧದ ಮರ ಸುತ್ತ ಬೇರೆ 20-30 ಗಿಡಗಳ ಸಸಿ ನೆಟ್ಟರೆ ಮಾತ್ರ ಅದು ಉಳಿಯುತ್ತದೆ. ಎಲ್ಲರೊಳಗೂ ಒಳಗೊಂಡು ಬೆಳೆಯುವುದೇ ಸ್ಯಾಂಡಲ್‌ವುಡ್. ಒಬ್ಬರೇ ಬೆಳೆಯುವುದಲ್ಲ. ಎಲ್ಲರ ಜೊತೆಗೆ ಬೆಳೆಯುವುದು ಮುಖ್ಯ. ಇದಕ್ಕೊಂದು ಪರಂಪರೆ ಇದೆ. ಭಾಷೆಯಿಂದಲೇ ಕನ್ನಡ ಚಿತ್ರರಂಗವನ್ನು ಬೆಳೆಸಿದ ದೊಡ್ಡ ಪರಂಪರೆ ಇದೆ. ಆ ಪರಂಪರೆಯಿಂದ ಬಂದು ಪ್ಯಾನ್ ಇಂಡಿಯಾ ಅಂತ ಹೋದರೆ ಸ್ವಲ್ಪ ವ್ಯಾಪಾರ ಜಾಸ್ತಿ ಆಗಬಹುದು, ಬಾಡಿ, ದಾಡಿ ಬೆಳೆಯಬಹುದು ಬೇರೇನೂ ಆಗುವುದಿಲ್ಲ. ಹಾಗಾಗಿ, ಮೊದಲು ಇಲ್ಲಿಗೆ ಚಿತ್ರ ಮಾಡಿ’ ಎನ್ನುವುದು ಹಂಸಲೇಖ ಕಿವಿಮಾತು.