Advertisement

ಭರಮಣ್ಣ ನಾಯಕನ ಹಿಂದೆ ಹಂಸಲೇಖ

10:09 AM Jan 07, 2020 | Suhan S |

ಕನ್ನಡದಲ್ಲಿ ವರ್ಷಕ್ಕೆ ನೂರಾರು ಚಿತ್ರಗಳು ಬಿಡುಗಡೆಯಾಗುತ್ತವೆ. ಆ ಪೈಕಿ ಕಮರ್ಷಿಯಲ್‌, ಕಲಾತ್ಮಕ, ಪ್ರಯೋಗಾತ್ಮಕ ಸಿನಿಮಾಗಳ ಸಂಖ್ಯೆಯೇ ಹೆಚ್ಚು. ಆಗಾಗ ಪೌರಾಣಿಕ, ಐತಿಹಾಸಿಕ ಚಿತ್ರಗಳೂ ಕೂಡ ಇಣುಕಿ ನೋಡುತ್ತವೆ. ಹಾಗೆ ನೋಡಿದರೆ, ಕನ್ನಡ ನಾಡಿನ ಇತಿಹಾಸ ದೊಡ್ಡದೇ ಇದೆ. ಇಲ್ಲಿನ ಇತಿಹಾಸಗಳು ಬಹುತೇಕ ಜನರಿಗೆ ಅಪರಿಚಿತವಾಗಿಯೇ ಉಳಿದಿವೆ. ಅಂತಹ ಇತಿಹಾಸದ ಪರಿಚಯವಾಗಬೇಕಿದ್ದು, ಅಂಥದ್ದೊಂದು ಇತಿಹಾಸವುಳ್ಳ ಚಿತ್ರದುರ್ಗದ ರಾಜ ಬಿಚ್ಚುಗತ್ತಿ ಭರಮಣ್ಣ ನಾಯಕ ಅವರ ಕುರಿತ ಐತಿಹಾಸಿಕ ಚಿತ್ರ “ಬಿಚ್ಚುಗತ್ತಿ’ ತಯಾರಾಗಿದೆ. ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ. ಅಷ್ಟಕ್ಕೂ ಈ ಐತಿಹಾಸಿಕ ಚಿತ್ರ ಸೆಟ್ಟೇರಲು ಕಾರಣ ಬೇರಾರೂ ಅಲ್ಲ, ಅದು ಸಂಗೀತ ನಿರ್ದೇಶಕ ಹಂಸಲೇಖ ಅಂದರೆ ನಂಬಲೇಬೇಕು.

Advertisement

ಹೌದು, ಚಿತ್ರದುರ್ಗದ ಓಂ ಸಾಯಿ ಕೃಷ್ಣ ಪ್ರೊಡಕ್ಷನ್ಸ್‌ ಈ “ಬಿಚ್ಚುಗತ್ತಿ’ ಚಿತ್ರವನ್ನು ನಿರ್ಮಿಸಿದೆ. ಒಂದೊಳ್ಳೆಯ ಸಿನಿಮಾ ನಿರ್ಮಾಣ ಮಾಡಬೇಕು, ಅದು ನೆನಪಲ್ಲಿ ಉಳಿಯುವಂತಾಗಬೇಕು ಎಂಬ ಆಸೆ ಹೊತ್ತ ನಿರ್ಮಾಣ ಸಂಸ್ಥೆ, ಹಂಸಲೇಖ ಅವರ ಬಳಿ ಚರ್ಚಿಸಿದಾಗ, ಚಿತ್ರದುರ್ಗ ಜಿಲ್ಲೆ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಹಾಗಾಗಿ ಒಂದೊಳ್ಳೆಯ ಐತಿಹಾಸಿಕ ಸಿನಿಮಾ ಮಾಡುವ ಕುರಿತು ಸೂಚಿಸಿದ್ದಾರೆ.

ಚಿತ್ರದುರ್ಗದ ಪಾಳೆಯಗಾರರು ಹಾಗೂ ಅವರ ಪರಾಕ್ರಮ, ಶೌರ್ಯ ಕುರಿತು ಮಾತನಾಡಿದ ಹಂಸಲೇಖ ಅವರು, ದುರ್ಗದ ಕೋಟೆ ಮತ್ತು ಅದರ ಇತಿಹಾಸದ ಬಗ್ಗೆ ಅಪಾರ ವಿಷಯಗಳಿವೆ. ಡಾ.ಬಿ.ಎಲ್‌ವೇಣು ಅವರು ಬರೆದಿರುವ “ರಾಜ ಬಿಚ್ಚುಗತ್ತಿ ಭರಮಣ್ಣ ನಾಯಕ’ ಕಾದಂಬರಿಯನ್ನು ಕೈಗೆತ್ತಿಕೊಂಡ ಹಂಸಲೇಖ ಅವರು ಇದನ್ನು ಚಿತ್ರವನ್ನಾಗಿಸಿ ರೂಪಿಸಬಹುದು ಎಂಬ ಸಲಹೆ ಮೇರೆಗೆ, ಓಂ ಸಾಯಿ ಕೃಷ್ಣ ಪ್ರೊಡಕ್ಷನ್ಸ್‌ “ಬಿಚ್ಚುಗತ್ತಿ’ ಹೆಸರಿನಲ್ಲಿ ಸಿನಿಮಾ ಮಾಡಿದೆ. ಈ ಚಿತ್ರದಲ್ಲಿ ರಾಜವರ್ಧನ್‌ ಪ್ರಮುಖ ಆಕರ್ಷಣೆ. ಹರಿಪ್ರಿಯಾ ಕೂಡ ನಟಿಸಿದ್ದಾರೆ.

ಅಷ್ಟೇ ಅಲ್ಲ, “ಬಾಹುಬಲಿ’ ಖ್ಯಾತಿಯ ಪ್ರಭಾಕರ್‌ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಐತಿಹಾಸಿಕ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ತುಂಬಿಕೊಂಡಿದೆ. ಕಳೆದ 2019 ಜನವರಿಯಲ್ಲಿ ಸೆಟ್ಟೇರಿದ್ದ “ಬಿಚ್ಚುಗತ್ತಿ’ ಈಗಾಗಲೇ ಚಿತ್ರೀಕರಣ ಮುಗಿಸಿದ್ದು, ಬಿಡುಗಡೆ ತಯಾರಿಯಲ್ಲಿದೆ. ಚಿತ್ರಕ್ಕೆ ಹರಿ ಸಂತೋಷ್‌ ನಿರ್ದೇಶಕರಾಗಿದ್ದು, ಹಂಸಲೇಖ ಅವರ ಸಂಗೀತವಿದೆ. ಗುರುಪ್ರಶಾಂತ್‌ ರೈ ಛಾಯಾಗ್ರಹಣವಿದೆ. ಕೆ.ಎಂ. ಪ್ರಕಾಶ್‌ ಸಂಕಲನ ಮಾಡಿದ್ದಾರೆ. ಸದ್ಯದಲ್ಲೇ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲು ಚಿತ್ರತಂಡ ತಯಾರು ಮಾಡಿಕೊಳ್ಳುತ್ತಿದೆ. ಟೀಸರ್‌ ಕೂಡ ರೆಡಿಯಾಗಿದ್ದು, ಅದೂ ಕೂಡ ಪ್ರೇಕ್ಷಕರ ಮುಂದೆ ಬರಲು ಅಣಿಯಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next