ಹೊಸಪೇಟೆ: ಐತಿಹಾಸಿಕ ಹಂಪಿಯ ಪುರಾತನ ವಿಷ್ಣುದೇಗುಲ ಮಂಟಪದ ಕಂಬ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇನ್ನೋರ್ವ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ
ಬಂಧಿತರ ಪೈಕಿ ಇಬ್ಬರು ಬೆಂಗಳೂರಿನ ಯುವಕರಾಗಿದ್ದು, ಇನ್ನೋರ್ವ ಹೈದರಾಬಾದ್ ಮೂಲದವನಾಗಿದ್ದಾನೆ. ಪೊಲೀಸರು ಬಂಧಿತರ ವಿವರಗಳನ್ನು ಗೌಪ್ಯವಾಗಿ ಇರಿಸಿದ್ದಾರೆ.
ಇನ್ನೋರ್ವ ಆರೋಪಿಗಾಗಿ ಪೊಲೀಸರು ಬಿಹಾರದಲ್ಲಿ ಶೋಧ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸ್ಮಾರಕಗಳಿಗೆ ಧಕ್ಕೆಯಾಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸುದ್ದಿಯಾದ ಬಳಿಕ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಆ ಬಳಿಕ ಪೊಲೀಸ್ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಸೆರೆಗಾಗಿ 3 ತಂಡಗಳನ್ನು ರಚಿಸಿದ್ದರು.
ಈ ಸಂಬಂಧ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಇಬ್ಬರು ಸಿಬ್ಬಂದಿಗೆ ನೋಟಿಸ್ ಜಾರಿಗೊಳಿಸಿತ್ತು. ಅಲ್ಲದೆ ವಿಷ್ಣು ದೇವಾಯಲದ ಬಳಿ ಇಬ್ಬರು ಕಾವಲುಗಾರರನ್ನು ನಿಯೋಜಿಸಿದೆ.