Advertisement

ಹಂಪಿ ಆಗಲಿದೆ “ಐಕಾನಿಕ್‌ ಟೂರಿಸ್ಟ್‌ ಸ್ಪಾಟ್‌’

06:00 AM Feb 15, 2018 | |

ನವದೆಹಲಿ: ಕರ್ನಾಟಕ ಸಾಂಸ್ಕೃತಿಕ ಪರಂಪರೆಯ ಭಾಗವಾಗಿರುವ ಹಂಪೆಯನ್ನು ದೇಶದ ಮಹತ್ವದ ಸ್ಮಾರಕಗಳಲ್ಲೊಂದಾಗಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ.

Advertisement

ಈ ಸ್ಥಳವನ್ನು “ಐಕಾನಿಕ್‌ ಟೂರಿಸ್ಟ್‌ ಸ್ಪಾಟ್‌’ ಆಗಿ ಪರಿವರ್ತಿಸುವ ನಿಟ್ಟಿನಲ್ಲಿ ಫೆ.1ರಂದು ಮಂಡಿಸಲಾಗಿರುವ ಕೇಂದ್ರ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಇದಲ್ಲದೆ ದೇಶದ ಇತರ ಒಂಭತ್ತು ಐತಿಹಾಸಿಕ ಸ್ಥಳಗಳನ್ನು ಮಹತ್ವದ ಸ್ಮಾರಕಗಳನ್ನಾಗಿಸುವ ಬಗ್ಗೆ ಕ್ರಮಗಳನ್ನು ಘೋಷಣೆ ಮಾಡಲಾಗಿದೆ. ಯೋಜನೆ ಪ್ರಕಾರ ಐತಿಹಾಸಿಕ ಸ್ಥಳಗಳಲ್ಲಿ ಮೂಲ ಸೌಕರ್ಯ ಕಲ್ಪಿಸುವುದು ಹಾಗೂ ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಲಾಗುತ್ತದೆ.

ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ಹಂಪೆಯಲ್ಲಿ, 57 ಪ್ರಮುಖ ಸ್ಮಾರಕಗಳಿವೆ. ಹಂಪೆಗೆ ಹೊಂದಿಕೊಂಡಂತಿರುವ ನಾಲ್ಕು ಹಳ್ಳಿಗಳ ಸುಮಾರು 41.8 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಈ ಸ್ಮಾರಕಗಳು ಇವೆ. ಆದರೆ, ಇಲ್ಲಿನ ಮೂಲಭೂತ ಸೌಕರ್ಯಗಳು ತುಂಬಾ ಸೀಮಿತವಾಗಿದ್ದು, ಪ್ರವಾಸಿಗರು ತಮ್ಮ ನೈಸರ್ಗಿಕ ಕರೆಗಾಗಿ ಇದೇ ಸ್ಮಾರಕಗಳ ಹಿಂದಿನ ಪ್ರದೇಶಗಳನ್ನು ಉಪಯೋಗಿಸುತ್ತಿರುವುದು ಖೇದಕರ. ಇಂಥ ಬೆಳವಣಿಗೆಗಳಿಂದಾಗಿ ಹಂಪೆಯಂಥ ಪ್ರಮುಖ ಸ್ಥಳಗಳಿಗೆ ಕೆಟ್ಟ ಹೆಸರು ಬರುತ್ತದೆ. ಹಾಗಾಗಿ, ಈ ಪ್ರದೇಶಗಳನ್ನು ಮಹತ್ವದ ಸ್ಮಾರಕಗಳನ್ನಾಗಿಸಲು ನಿರ್ಧರಿಸಲಾಗಿದೆ ಎಂದು ಹಿರಿಯ ಅಧಿಕಾರಿ ನವದೆಹಲಿಯಲ್ಲಿ ತಿಳಿಸಿದ್ದಾರೆ.

ನೂರು ಪ್ರವಾಸಿ ತಾಣಗಳ ಅಭಿವೃದ್ಧಿ
ಆಯ್ದ 10 ಐತಿಹಾಸಿಕ ಸ್ಥಳಗಳನ್ನು ಮಹತ್ವದ ಸ್ಮಾರಕಗಳನ್ನಾಗಿಸುವುದರ ಜತೆಗೆ, ಭಾರತೀಯ ಪ್ರಾಚ್ಯ ವಸ್ತು ಸಂರಕ್ಷಣಾ ಇಲಾಖೆ (ಎಎಸ್‌ಐ) ವತಿಯಿಂದ 100 ನೂರು ಪ್ರವಾಸಿ ತಾಣಗಳನ್ನು ಆದರ್ಶ ಸ್ಮಾರಕಗಳೆಂಬ ಸ್ಥಾನಮಾನಕ್ಕೇರಿಸಲೂ ನಿರ್ಧರಿಸಲಾಗಿದೆ. ಆದರ್ಶ ಸ್ಮಾರಕಗಳಡಿ ಆಯ್ಕೆಯಾಗುವ ಪ್ರವಾಸಿ ತಾಣಗಳಲ್ಲಿ, ಉತ್ತಮ ದರ್ಜೆಯ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಗಳನ್ನು ಕೈಗೊಳ್ಳಲಾಗುತ್ತದೆ. ಇದರ ಜತೆಗೆ, ಉತ್ತಮ ರಸ್ತೆಗಳು, ಅಂಗವಿಕಲರಿಗಾಗಿ ವಿಶೇಷ ಹಾದಿಗಳು, ಸ್ಥಳಗಳಲ್ಲಿ ಆಸನ ವ್ಯವಸ್ಥೆ, ಕಸದ ತೊಟ್ಟಿ, ವಾಹನ ನಿಲುಗಡೆ ಸೌಕರ್ಯ, ಟಿಕೆಟ್‌ ಕೌಂಟರ್‌ಗಳು ಮುಂತಾದ ಸೌಲಭ್ಯಗಳನ್ನು ನೀಡಲಾಗುತ್ತದೆ.

ಅಂಕಿ-ಅಂಶ:
57 – ಹಂಪೆಯಲ್ಲಿರುವ ಪ್ರಮುಖ ಸ್ಮಾರಕಗಳು
41.8 ಚ.ಕಿ.ಮೀ. – ಸ್ಮಾರಕಗಳು ಹರಡಿರುವ ಪ್ರದೇಶದ ವ್ಯಾಪ್ತಿ
4 – ಹಂಪೆಯ ಸ್ಮಾರಕಗಳನ್ನು ಒಳಗೊಂಡಿರುವ ಹಳ್ಳಿಗಳ ಸಂಖ್ಯೆ

Advertisement
Advertisement

Udayavani is now on Telegram. Click here to join our channel and stay updated with the latest news.

Next