ಹೊಸಪೇಟೆ: ವೀಕೆಂಡ್ ಹಿನ್ನೆಲೆಯಲ್ಲಿ ಸಹಸ್ರಾರು ಸಂಖ್ಯೆಯ ಪ್ರವಾಸಿಗರು ವಿಶ್ವವಿಖ್ಯಾತ ಹಂಪಿಗೆ ಭಾನುವಾರ ಭೇಟಿ ನೀಡಿ ಪ್ರಸಿದ್ಧ ಸ್ಮಾರಕಗಳನ್ನು ಕಣ್ತುಂಬಿಕೊಂಡರು.
ನದಿಯಲ್ಲಿ ಮುಂದುವರೆದ ಪ್ರವಾಹ ಸ್ಥಿತಿಯ ನಡುವೆಯೂ ಹೆಚ್ಚಿನ ಸಂಖ್ಯೆಯಲ್ಲಿ ಹಂಪಿಗೆ ಆಗಮಿಸಿದ ದೇಶ-ವಿದೇಶಿ ಪ್ರವಾಸಿಗರು ವಿವಿಧ ಸ್ಮಾರಕಗಳನ್ನು ವೀಕ್ಷಿಸಿದರು.
ವಿರೂಪಾಕ್ಷೇಶ್ವರ ದೇಗುಲ, ಹೇಮಕೂಟ, ಸಾಸವೆಕಾಳು ಗಣಪತಿ, ಕಡಲೆಕಾಳು ಗಣಪತಿ, ಕೃಷ್ಣ ದೇವಾಲಯ, ಉಗ್ರನರಸಿಂಹ, ಬಡವಿಲಿಂಗ, ಉದ್ದಾನ ವೀರಭದ್ರ, ಭೂಮಿಮಟ್ಟದ ದೇವಾಲಯ, ಹಜಾರರಾಮ ದೇಗುಲ, ರಾಣಿಸ್ನಾನ ಗೃಹ, ಮಹಾನವಮಿ ದಿಬ್ಬ, ಕಮಲ ಮಹಲ್, ಗಜಶಾಲೆ ಹಾಗೂ ವಿಜಯವಿಠಲ ದೇವಾಲಯದ ಆವರಣದಲ್ಲಿ ಪ್ರವಾಸಿಗರು ಕಂಡು ಬಂದರು.
ನದಿಯ ಪ್ರವಾಹದ ಹಿನ್ನೆಲೆಯಲ್ಲಿ ಸ್ನಾನಘಟ್ಟ, ಪುರಂದರ ದಾಸರ ಮಂಟಪ ಪ್ರದೇಶದಲ್ಲಿ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರು ನದಿ ತೀರದ ಹತ್ತಿರ ಸುಳಿದಾಡುತ್ತಿಲ್ಲ. ದೂರದಿಂದಲೇ ಉಕ್ಕಿ ಹರಿಯುವ ನದಿಯನ್ನು ವೀಕ್ಷಿಸಿದರು.
ಟಿ.ಬಿ.ಡ್ಯಾಂಗೂ ಭೇಟಿ:
ಹಂಪಿಗೆ ಭೇಟಿ ನೀಡಿರುವ ಪ್ರವಾಸಿಗರು ಟಿ.ಬಿ.ಡ್ಯಾಂ ಕಡೆ ಮುಖ ಮಾಡುತ್ತಿದ್ದಾರೆ. ಜಲಾಶಯದ ಕೆಳಭಾಗದ ಉದ್ಯಾನವನದ ಸಂಗೀತ ಕಾರಂಜಿ, ಗುಂಡಾ ಹಿನ್ನೀರಿನ ಪ್ರದೇಶದಲ್ಲಿರುವ ಉದ್ಯಾನವನ, ಮುನಿರಾಬಾದ್ ಭಾಗದಲ್ಲಿರುವ ಪಂಪಾವನ ಮತ್ತು ಲೇಕ್‌ವ್ಯೂವ್ ಪ್ರದೇಶದಲ್ಲಿ ಪ್ರವಾಸಿಗರು ಸಾಗರೋಪಾದಿಯಲ್ಲಿ ಕಂಡು ಬಂದರು.