Advertisement
ರಾಜ್ಯ ಸರಕಾರ 8 ಕೋಟಿ ಹಾಗೂ ಇತರರಿಂದ 3 ಕೋಟಿ ಅನುದಾನ ಪಡೆದು ಒಟ್ಟು 11 ಕೋಟಿ ರೂ. ವೆಚ್ಚದಲ್ಲಿ ಉತ್ಸವವನ್ನು ಸಂಘಟಿಸಲಾಗಿತ್ತು. ಒಟ್ಟೂ 11 ವೇದಿಕೆಗಳಲ್ಲಿ 400ಕ್ಕೂ ಹೆಚ್ಚು ಕಾರ್ಯಕ್ರಮಗಳು ನಡೆದವು. ಎದುರು ಬಸವಣ್ಣ ವೇದಿಕೆ ಹಾಗೂ ಸಮೀಪದ ವಿರುಪಾಕ್ಷೇಶ್ವರ ದೇವಸ್ಥಾನ ವೇದಿಕೆ, ಹಜಾರರಾಮ ದೇವಾಲಯ ವೇದಿಕೆ ಹೊರತುಪಡಿಸಿದರೆ ಉಳಿದೆಡೆ ನಿರೀಕ್ಷಿಸಿದಷ್ಟು ಜನರಿರಲಿಲ್ಲ. ಮುಖ್ಯ ವೇದಿಕೆಯಲ್ಲಿ ಪ್ರತಿದಿನ ರಾತ್ರಿ ನಡೆದ ಕನ್ನಡ ರಸಮಂಜರಿಯಲ್ಲಿ ಜನಜಂಗುಳಿ ಹೆಚ್ಚಿತ್ತು. ಮೂರು ದಿನ ಬೆಂಗಳೂರಿನ ಟಿಪ್ಪು ಹಾಗೂ ತಂಡ, ಗುರುಕಿರಣ ಮತ್ತು ತಂಡ ಹಾಗೂ ಮನೋಮೂರ್ತಿ ಹಾಗೂ ಸಂಗಡಿಗರು, ಗಾಯತ್ರಿ ಪೀಠ ಮೈದಾನದಲ್ಲಿ ನಡೆದ ಕುನಾಲ್ ಗಾಂಜಾವಾಲಾ ರಸಮಂಜರಿ ಮೂಲಕ ಸಿನೆ ರಸಿಕರನ್ನು ರಂಜಿಸಿದರು.
Related Articles
Advertisement
ಹಂಪಿ ಉತ್ಸವ ಯಶಸ್ವಿ ಗೊಂಡಿದೆ: ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಲಕ್ಷಾಂತರ ಜನರನ್ನು ಸೆಳೆಯುವಲ್ಲಿ ಸಫಲಗೊಂಡಿದೆ. ಸ್ಥಳೀಯರೊಂದಿಗೆ ಹೊರ ರಾಜ್ಯದ, ಹೊರ ದೇಶದ ಕಲಾವಿದರಿಗೂ ಅವಕಾಶ ನೀಡಲಾಗಿದೆ. ಹಲವು ಕಲೆಗಳಿಗೂ ಆದ್ಯತೆ ನೀಡಲಾಗಿದೆ. ಸಣ್ಣ-ಪುಟ್ಟ ಗೊಂದಲಗಳಾಗಿದ್ದರೆ ಅವುಗಳನ್ನು ಬಗೆಹರಿಸಲಾಗುವುದು. ದೊಡ್ಡ ಪ್ರಮಾಣದಲ್ಲಿ ಉತ್ಸವ ಮಾಡುವಾಗ ಕೆಲ ಸಮಸ್ಯೆಗಳಾಗುವುದು ಸಹಜ.ಸಂತೋಷ ಲಾಡ್, ಉಸ್ತುವಾರಿ ಸಚಿವ. ದರ್ಶನ ಪಡೆಯದ ಸಿದ್ದರಾಮಯ್ಯ
ವಿಜಯನಗರದ ಕ್ಷೇತ್ರ ದೇವರಾದ ವಿರುಪಾಕ್ಷೇಶ್ವರ ಸನ್ನಿಧಿಗೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆಂಬ ನಂಬಿಕೆಯಿಂದಲೋ ಏನೋ ಸಿಎಂ ಸಿದ್ದರಾಮಯ್ಯ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪೆಡಯಲಿಲ್ಲ. ಉತ್ಸವಕ್ಕೆ ಚಾಲನೆ ನೀಡಿದ ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ, ನಾನು ಹಿಂದೆ ಹಲವು ಬಾರಿ ವಿರುಪಾಕ್ಷನ ದರ್ಶನ ಪಡೆದಿದ್ದೇನೆ ಎಂದರಾದರೂ ಈ ಬಾರಿ ಯಾಕೆ ದರ್ಶನ ಪಡೆಯಲಿಲ್ಲ ಎಂಬುದನ್ನು ಸ್ಪಷ್ಟಪಡಿಸಲಿಲ. ಸಕಲರಿಗೂ ಧನ್ಯವಾದ: ಲಾಡ್ ಹಂಪಿ(ಗಾಯತ್ರಿ ಪೀಠ ವೇದಿಕೆ): ಹಂಪಿ ಉತ್ಸವ ಯಶಸ್ವಿಯಾಗಿ ಸಂಪನ್ನವಾಗಿದ್ದು, ಮುಂದಿನ ವರ್ಷ ಇನ್ನೂ ವಿಜೃಂಭಣೆಯಿಂದ ಆಚರಣೆ ಮಾಡಲಾಗುವುದು ಎಂದು ಬಳ್ಳಾರಿ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು. ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಎಲ್ಲ ಪಕ್ಷಗಳ ಶಾಸಕರು, ಜಿಲ್ಲಾಡಳಿತ, ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಹಕಾರದಿಂದಾಗಿ ಅದ್ಧೂರಿ ಹಂಪಿ ಉತ್ಸವ ಯಶಸ್ವಿಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರ ಸಹಕಾರವನ್ನು ಮರೆಯುವಂತಿಲ್ಲ. ಈ ಬಾರಿ ಉತ್ಸವದಲ್ಲಿ 5 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡಿರುವುದು ಸಂತಸ ತಂದಿದೆ ಎಂದರು. ವಿದೇಶಿಯರ ಪಾಲಿಗೂ ದಕ್ಕಿದ ಹಂಪಿ ವೈಭವ
ಹಂಪಿ: ಐತಿಹಾಸಿಕ ಹಂಪಿ ವೈಭವವನ್ನು ಕಂಡು ಮನ ತಣಿಸಿಕೊಂಡ ವಿದೇಶಿಯರು ಉತ್ಸವದಲ್ಲಿ ಜಮಾಯಿಸಿದ್ದ ಜನಜಾತ್ರೆ ನೋಡಿ ಹುಬ್ಬೇರಿಸಿದರು. ಹಂಪಿ ಉತ್ಸವದ ವೀಕ್ಷಣೆಗೆ ಆಗಮಿಸಿದ್ದ ಸಾರ್ವಜನಿಕರು ಹಾಗೂ ಪ್ರವಾಸಿಗರು ಉತ್ಸವದ ಮೂರು ದಿನಗಳ ಕಾಲವೂ ಅಲ್ಲಲ್ಲಿ ಸುತ್ತುತ್ತ ಶಿಲ್ಪಕಲೆಯ ಸಿರಿಯನ್ನು ಕಣ್ತುಂಬಿಕೊಂಡರು. ವಿರೂಪಾಕ್ಷೇಶ್ವರ ದೇವಸ್ಥಾನ, ಮಹಾನವಮಿ ದಿಬ್ಬ, ಕಮಲ್ ಮಹಲ್, ಕಡಲೆ ಕಾಳು ಗಣಪ, ಸಾಸಿವೆ ಕಾಳು ಗಣಪ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಮೂರು ದಿನಗಳ ಕಾಲ ಜನದಟ್ಟಣೆಯೇ ಕಂಡು ಬಂದಿತು. ಜನತೆ ಸ್ಮಾರಕಗಳ ಮುಂದೆ ನಿಂತು ಛಾಯಾಚಿತ್ರ ತೆಗೆಸಿಕೊಳ್ಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸ್ಥಳೀಯ ಹಾಗೂ ರಾಜ್ಯದ ನಾನಾ ಮೂಲೆಗಳಿಂದ ಜನರು ಕುಟುಂಬ ಪರಿವಾರ ಸಮೇತ ಆಗಮಿಸಿ ನಾನಾ ಸ್ಥಳಗಳಿಗೆ ಭೇಟಿ ನೀಡುತ್ತ ಶಿಲಾ ಕಲಾ ಐಸಿರಿಯನ್ನು ತದೇಕ ಚಿತ್ತದಿಂದ ಸವಿಯುತ್ತಿರುವುದು ಕಂಡು ಬಂದಿತು. ಕೆಲವೆಡೆಗಳಲ್ಲಿದ್ದ ಸಣ್ಣ ಹೋಟೆಲ್‌ಗಳಲ್ಲಿ ಜನರು ಮಿರ್ಚಿ, ಬಜಿ, ಚಹಾ ಸೇವನೆ ಮಾಡುತ್ತ ವಿರಮಿಸುತ್ತಿದ್ದರು. ಅಲ್ಲಲ್ಲಿ ಸುತ್ತುತ್ತಿದ್ದ ಕೆಲ ವಿದೇಶಿ ಮಹಿಳೆಯರು ದೇಶಿ ಸೀರೆಗಳನ್ನು ಧರಿಸಿ ಗಮನ ಸೆಳೆದರು. ಸಂಜೆ ಮೋಡ ಕೆಂಪೇರುತ್ತಿದ್ದಂತೆ ಇಡೀ ಹಂಪಿ ತಾಣವೇ ಬಗೆಬಗೆಯ ವಿದ್ಯುದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿದ್ದುದನ್ನು ಜನತೆ ಬಂಡೆಗಲ್ಲುಗಳ ಮೇಲೆ ನಿಂತು ನೋಡುತ್ತ, ಮೊಬೈಲ್ ಕ್ಯಾಮೆರಾಗಳಲ್ಲಿ ದೃಶ್ಯವನ್ನು ಸೆರೆ ಹಿಡಿಯುತ್ತಿದ್ದ ನೋಟ ಸಾಮಾನ್ಯವಾಗಿತ್ತು. ಭಿನ್ನ, ವಿಭಿನ್ನ ಬೆಳಕಿನ ಕಿರಣಗಳಿಂದ ಹಂಪಿ ಸುತ್ತಲಿನ ದೊಡ್ಡ ದೊಡ್ಡ ಬಂಡೆಗಳು ಎದ್ದು ಕಾಣುತ್ತಿದ್ದವು. ಹಿಂದಿನ ಹಂಪಿಯ ಗತವೈಭವವು ಮೂರು ದಿನಗಳ ಕಾಲ ನಡೆದ ಹಂಪಿ ಉತ್ಸವದಲ್ಲಿ ಜನೋತ್ಸಾಹದೊಂದಿಗೆ ಮತ್ತೆ ಮರುಕಳಿಸಿದಂತೆ ಗೋಚರಿಸಿತು. ಕಣ್ಣಿದ್ದವರು ಕನಕಗಿರಿ ನೋಡಬೇಕು.. ಕಾಲಿದ್ದವರು ಹಂಪಿ ನೋಡಬೇಕು ಎನ್ನುವ ನಾಣ್ಣುಡಿಯಂತೆ ವಿಶಾಲ ಹಂಪಿಯನ್ನು ಸುತ್ತುತ್ತಲೇ ಜನರು ಕಾಲು ಸೋಲುವಷ್ಟು ನಡೆದರೂ ಉತ್ಸವದ ಸಂದರ್ಭದಲ್ಲಿ ಅವರ ಮೊಗದಲ್ಲಿದ್ದ ಉತ್ಸಾಹ ಕುಂದಲಿಲ್ಲ. ವರುಣನ ಸಿಂಚನ: ಈಚೆಗಷ್ಟೇ ವಿರಾಮ ನೀಡಿರುವ ಮಳೆರಾಯ ಹಂಪಿ ಉತ್ಸವದ ಸದ್ದಿಗೆ ಧರೆಗೆ ಇಳಿದು ಬಂದಂತೆ ರವಿವಾರ ನಸುಕಿನ ವೇಳೆ ಸಿಂಚನಗೈದ. ಮತ್ತೇ ದೊಡ್ಡ ಮಳೆ ಬಂತೆನೋ ಎನ್ನುವ ಆತಂಕ ಕ್ಷಣಕಾಲ ಆವರಿಸಿತ್ತು. ಜನೋತ್ಸಾಹಕ್ಕೆ ಭಂಗ ತರುವುದು ಬೇಡ ಎಂದು ತೀರ್ಮಾನಿಸಿದಂತೆ ಮರೆಯಾದ.