Advertisement

ಹಂಪಿ ವಿಶ್ವದ 2ನೇ ಅತ್ಯುತ್ತಮ ಪ್ರೇಕ್ಷಣೀಯ ಸ್ಥಳ

12:30 AM Jan 12, 2019 | |

ಬಳ್ಳಾರಿ: ವಿಶ್ವದ 52 ಅತ್ಯುತ್ತಮ ಪ್ರೇಕ್ಷಣೀಯ ಸ್ಥಳಗಳಲ್ಲಿ ಐತಿಹಾಸಿಕ ಹಂಪಿ ಎರಡನೇ ಸ್ಥಾನ ಪಡೆದಿದೆ. ಈಗಾಗಲೇ ಯುನೆಸ್ಕೋ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಹಂಪಿ ಇದೀಗ ನ್ಯೂಯಾರ್ಕ್‌ ಟೈಮ್ಸ್‌ ಸಿದ್ಧಪಡಿಸಿದ ವಿಶ್ವದ ಅತ್ಯುತ್ತಮ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ.

Advertisement

ಅಮೆರಿಕಾದ ನ್ಯೂಯಾರ್ಕ್‌ ಟೈಮ್ಸ್‌ ಸಂಸ್ಥೆ ಪ್ರತಿವರ್ಷ ವಿಶ್ವದ ಅತ್ಯುತ್ತಮ ಪ್ರೇಕ್ಷಣೀಯ ಸ್ಥಳಗಳನ್ನು ಗುರುತಿಸಿ ಪಟ್ಟಿ ಬಿಡುಗಡೆ ಮಾಡುತ್ತಿದ್ದು, ಈ ವರ್ಷ ಒಟ್ಟು  52 ಪ್ರೇಕ್ಷಣೀಯ ಸ್ಥಳದ ಪಟ್ಟಿ ಸಿದ್ಧಪಡಿಸಿದೆ. ಅದರಲ್ಲಿ ಅಮೆರಿಕಾದ ಫ್ಯೂಟೊರಿಕೊ ಐ ಲ್ಯಾಂಡ್‌ಗೆ ಮೊದಲ ಸ್ಥಾನ ಲಭಿಸಿದ್ದು, ಹಂಪಿಗೆ 2ನೇ ಸ್ಥಾನ ಪಡೆದು ರಾಜ್ಯದ ಹಿರಿಮೆ ಹೆಚ್ಚಿಸಿದೆ. ಈಗಾಗಲೇ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳಲ್ಲಿ ಹಂಪಿಯನ್ನು ಸೇರಿಸಿದ್ದು ಹಂಪಿಯ ಐತಿಹಾಸಿಕ, ಶಿಲ್ಪಕಲಾ ವೈಭವಕ್ಕೆ ಸಾಕ್ಷಿಯಾಗಿದೆ.

ತುಂಗಭದ್ರಾ ನದಿ ತಟದಲ್ಲಿರುವ ಹಂಪಿ ಕೇವಲ ಪ್ರವಾಸಿತಾಣವಷ್ಟೇ ಅಲ್ಲ, ಪುರಾತತ್ವ ಶಾಸ್ತ್ರ ಹಾಗೂ ಭೌಗೋಳಿಕ ಶಾಸ್ತ್ರ ಅಧ್ಯಯನಕ್ಕೂ ಪ್ರಶಸ್ತವಾಗಿದೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ತನ್ನ ವರದಿಯಲ್ಲಿ ಉಲ್ಲೇಖೀಸಿದೆ. ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ, ಸುಮಾರು 26 ಕಿ.ಮೀ ವ್ಯಾಪಿಸಿರುವ ಹಂಪಿಯ ಸೊಬಗನ್ನು  ವೀಕ್ಷಿಸಲು ಪ್ರತಿವರ್ಷ ದೇಶ -ವಿದೇಶಗಳ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಇದರಲ್ಲಿ ಸುಮಾರು 36 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ವಿದೇಶಿಯರು ಎಂಬುದು ಗಮನಾರ್ಹ. ಇದಲ್ಲದೆ ಹಂಪಿ ಸಮೀಪದ ಕಮಲಾಪುರ ಹಾಗೂ ಕೊಪ್ಪಳ ಜಿಲ್ಲೆಯ ಆನೆಗುಂದಿ ಸಂಸ್ಥಾನದ ಬಳಿ ಇರುವ ಮಿನಿ ಯುರೋಪ್‌ ಎಂದು ಹೆಸರು ಪಡೆದ ವಿರೂಪಾಪುರ ಗಡ್ಡೆ ಬಗ್ಗೆಯೂ ವರದಿಯಲ್ಲಿ ಉಲ್ಲೇಖೀಸಲಾಗಿದೆ.

ಐತಿಹಾಸಿಕ ಹಿನ್ನೆಲೆಯುಳ್ಳ ಹಂಪಿಯು ಬೆಟ್ಟಗುಡ್ಡಗಳ ನಡುವೆ ಇದೆ. ಪ್ರಕೃತಿ ಸೌಂದರ್ಯದ ನಡುವೆ ಕಲ್ಲುಬಂಡೆಗಳಲ್ಲಿ ಶಿಲ್ಪಕಲೆ ಅರಳಿವೆ. ಸಾವಿರಾರು ಸ್ಮಾರಕಗಳು, ಹಲವಾರು ಹಿಂದೂ ದೇವಾಲಯಗಳು ಇವೆ. ಕಲ್ಲುಬಂಡೆಗಳಿಂದ ಕೂಡಿರುವ ಬೆಟ್ಟಗುಡ್ಡಗಳು ಪ್ರವಾಸಿಗಳನ್ನು ಆಕರ್ಷಿಸುತ್ತವೆ. ಇಲ್ಲಿನ ಬೆಟ್ಟಗುಡ್ಡಗಳಲ್ಲಿ ಆಯೋಜಿಸಲಾಗುವ ರಾಕ್‌ ಕ್ಲೈಂಬಿಂಗ್‌ (ಸಾಹಸ ಕ್ರೀಡೆ) ಪ್ರವಾಸಿಗರ ಮನ ಸೆಳೆದಿದ್ದು, ಇವೆಲ್ಲ ವಿಶ್ವದ ಅತ್ಯುತ್ತಮ ಪ್ರೇಕ್ಷಣೀಯ ಸ್ಥಳಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಕಾರಣಗಳಾಗಿವೆ.

ದಕ್ಷಿಣ ಏಷಿಯಾದ ಏಕೈಕ ಸ್ಥಳ
ನ್ಯೂಯಾರ್ಕ್‌ ಟೈಮ್ಸ್‌ ಗುರುತಿಸಿರುವ ಪ್ರೇಕ್ಷಣೀಯ ಸ್ಥಳಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಹಂಪಿ, ಈಗಾಗಲೇ ದಕ್ಷಿಣ ಏಷ್ಯಾದ ಏಕೈಕ ಅತ್ಯುತ್ತಮ ಪ್ರೇಕ್ಷಣೀಯ ಸ್ಥಳ ಎಂದು ಗುರುತಿಸಲ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಪ್ರತಿವರ್ಷ ಪಶ್ಚಿಮ ಮತ್ತು ಪೌರಾತ್ಯ ರಾಷ್ಟ್ರಗಳಿಂದ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ, ಕಲ್ಲುಗಳಲ್ಲಿ ಅರಳಿರುವ ಶಿಲ್ಪಕಲಾ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದರ ಜತೆಗೆ ವಿಶಿಷ್ಟ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next