ಹೊಸಪೇಟೆ: ವಿಶ್ವದ ಗಮನ ತನ್ನ ಸಳೆಯುತ್ತಿರುವ ವಿಶ್ವವಿಖ್ಯಾತ ಹಂಪಿಯಲ್ಲಿ ಮೂಲ ಸೌಲಭ್ಯಗಳ ಕೊರತೆ ಕಾಡುತ್ತಿದ್ದು, ಹಂಪಿಯಲ್ಲಿ ವಾಸ್ತವ್ಯ ಹೂಡಿ ಸ್ಮಾರಕಗಳ ಕಣ್ತುಂಬಿಕೊಳ್ಳಬೇಕು ಎಂಬ ದೇಶ-ವಿದೇಶಿ ಪ್ರವಾಸಿಗರು ಸೂಕ್ತ ವಸತಿ ಸೌಲಭ್ಯವಿಲ್ಲದೆ ಬೀದಿಯಲ್ಲಿ ಕಾಲ ಕಳೆಯುಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ದೇಶದ ಹಲವು ಕಡೆ ಪ್ರವಾಸ ಮುಗಿಸಿ ಹಂಪಿಯಲ್ಲಿ ಹೆಚ್ಚು ಕಾಲ ಉಳಿದು ಹಂಪಿ ಸುತ್ತಿ ಸ್ಮಾರಕಗಳನ್ನು ಕಣ್ತುಂಬಿಕೊಳ್ಳಲು ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ವಾಸ್ತವ್ಯಕ್ಕೆ ವಸತಿ ಸೌಕರ್ಯವಿಲ್ಲದೇ ಮೂಲ ಸೌಲಭ್ಯಗಳ ಕೊರತೆ ಕಾಡುತ್ತಿದೆ. ನಾಲ್ಕಾರು ದಿನಗಳ ಕಾಲ ಹಂಪಿಯಲ್ಲಿ ಉಳಿಯಬೇಕು ಎಂಬ ಪ್ರವಾಸಿಗರು ಅನಿವಾರ್ಯವಾಗಿ ತಮ್ಮ ಪ್ರವಾಸ ಮೊಟಕುಗೊಳಿಸಿ ಮರಳುವಂತಾಗಿದೆ.
ಹಂಪಿಗೆ ಪ್ರವಾಸ ಕೈಗೊಳ್ಳುವ ಮೊದಲು ಎರಡು-ಮೂರು ತಿಂಗಳ ಮುಂಚೆ ಹೊಸಪೇಟೆ ಹಾಗೂ ಕಮಲಾಪುರ ಸೇರಿದಂತೆ ಇತರೆ ಕಡೆಗಳಲ್ಲಿ ಆನ್‌ಲೈನ್ ಮೂಲಕ ಲಾಡ್ಜ್ಗಳ ಕೊಠಡಿಗಳನ್ನು ಕಾಯ್ದುರಿಸಬೇಕಿದೆ. ಆದರೆ, ಅಪ್ಪಿತಪ್ಪಿ ಪೂರ್ವ ಸಿದ್ಧತೆ ಇಲ್ಲದೇ ಹಂಪಿಗೆ ಬರುವ ಪ್ರವಾಸಿಗರಿಗೆ ಪರದಾಟ ತಪ್ಪಿದಲ್ಲ. ಸಾವಿರಾರು ಸಂಖ್ಯೆಯಲ್ಲಿ ಹಂಪಿಗೆ ಪ್ರವಾಸಕ್ಕೆ ಬರುವವರ ಪಾಡಂತು ಹೇಳತೀರದು. ಸೋಮವಾರ ಮಧ್ಯಪ್ರದೇಶದಿಂದ ಹಂಪಿಗೆ ಆಗಮಿಸಿರುವ ಪ್ರವಾಸಿಗರನ್ನು ಹಂಪಿ ಕ್ಷೇತ್ರದ ಆರಾಧ್ಯ ದೈವ ವಿರೂಪಾಕ್ಷನೇ ಕಾಪಾಡಬೇಕು ಎಂಬಂತಾಗಿದೆ ಅವರ ಸ್ಥಿತಿ.
ಹೌದು, 20ಕ್ಕೂ ಬಸ್‌ಗಳಲ್ಲಿ ಹಂಪಿಗೆ ಬಂದಿಳಿದಿರುವ ಮಧ್ಯಪ್ರದೇಶ ಪ್ರವಾಸಿಗರು, ರಸ್ತೆ ಬದಿಯಲ್ಲಿ ಅಡುಗೆ ಮಾಡಿಕೊಂಡು ಊಟ ಮಾಡಿದ ದೃಶ್ಯ ಕಂಡು ಬಂದಿದೆ. ಬಸ್‌ಗಳ ಪಕ್ಕದಲ್ಲಿಯೇ ಒಲೆ ಹಚ್ಚಿ ಅಡುಗೆ ಮಾಡಿ ಊಟ ಮಾಡಿದ ಅವರು ಬೀದಿಯಲ್ಲಿ ನೃತ್ಯ ಮಾಡಿ ಸಂಭ್ರಮಿಸಿದರು. ಮಧ್ಯ ಪ್ರದೇಶದಿಂದ 45 ದಿನಗಳ ಕಾಲ ಪ್ರವಾಸದಲ್ಲಿರುವ ಅವರು, ಹಂಪಿ, ಆಂಜನಾದ್ರಿ ಬೆಟ್ಟ ಹಾಗೂ ದುರ್ಗಾ ಪರಮೇಶ್ವರಿ ದೇವಸ್ಥಾನ ದರ್ಶನಕ್ಕೆ ಆಗಮಿಸಿದ್ದಾರೆ. ಗಂಗಾವತಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಆಂಜನಾದ್ರಿ ಬೆಟ್ಟಕ್ಕೆ ತೆರಳುವ ಮೊದಲು ಹಂಪಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಆದರೆ, ಸಾವಿರಾರು ಸಂಖ್ಯೆಯಲ್ಲಿ ಬಂದಿರುವ ಇವರು ವಸತಿ ಸೌಲಭ್ಯವಿಲ್ಲದೇ ರಸ್ತೆಯಲ್ಲಿ ಉಳಿಯುಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪವಾಸಕ್ಕೆ ಬರುವ ಶಾಲಾ ಮಕ್ಕಳ ಸ್ಥಿತಿ ಹೇಳತೀರದು.
ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಪ್ರವಾಸಕ್ಕೆ ಬಂದಿದ್ದೇವೆ. ಛತ್ರ ಹಾಗೂ ಕಲ್ಯಾಣ ಮಂಟಪದಲ್ಲಿ ಉಳಿದುಕೊಳ್ಳಬಹುದು ಎಂದು ತಿಳಿದಿದ್ದೇವು. ಆದರೆ, ಇಲ್ಲಿ ನಮಗೆ ವಸತಿ ಸೌಲಭ್ಯವಿಲ್ಲ. ನಿನ್ನೆಯಿಂದ ಮಳೆ-ಗಾಳಿಯಲ್ಲೇ ಕಾಲ ಕಳೆದಿದ್ದೇವೆ. ನದಿ ತೀರದಲ್ಲಿ ಸ್ನಾನವಾದ ಬಳಿಕ ಬಟ್ಟೆ ಬದಲಿಸಿಕೊಳ್ಳುವ ವ್ಯವಸ್ಥೆ ಇಲ್ಲ. ಇನ್ನಷ್ಟು ಅಗತ್ಯ ಸೌಲಭ್ಯಗಳು ಇಲ್ಲದಿರುವುದೇ ಬೇಸರದ ಸಂಗತಿ.
•ಸಂತೋಷ್ ಸಿಂಗ್, ಪ್ರವಾಸಿಗ ಮದ್ಯಪ್ರದೇಶ.
ಹಂಪಿಗೆ ಬರುವ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಜೊತೆಗೆ ಶೈಕ್ಷಣಿಕ ಪ್ರವಾಸ ಕೈಗೊಳ್ಳುವ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಂಪಿ ಕಡೆ ಮುಖ ಮಾಡುತ್ತಿದ್ದಾರೆ. ಇವರಿಗೆ ಸಮರ್ಪಕ ವಸತಿ ಸೌಕರ್ಯವಿಲ್ಲದಾಗಿದೆ. ಇದಕ್ಕಾಗಿ ಪ್ರವಾಸೋದ್ಯಮ ಇಲಾಖೆಯ 10 ಕೋಟಿ ಅನುದಾನದಲ್ಲಿ ಹಂಪಿಯ ಎಂ.ಪಿ.ಪ್ರಕಾಶ ನಗರದ 50 ಸೆಂಟ್ಸ್ ಭೂಮಿಯಲ್ಲಿ 1 ಸಾವಿರ ಕೊಠಡಿ ನಿರ್ಮಿಸುವ ಯೋಜನೆ ಸಿದ್ಧಗೊಳುತ್ತಿದೆ. ಇದಕ್ಕಾಗಿ ಈಗಾಗಲೇ ಅಂದಾಜು ಪಟ್ಟಿ ಸಿದ್ಧವಾಗಿದೆ. ಸರ್ಕಾರಕ್ಕೆ ಕಳಹಿಸಿಕೊಡಲಾಗುವುದು.
•ಮೋತಿಲಾಲ್ ಲಮಾಣಿ, ಆಯುಕ್ತರು,ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಾಹಣಾ ಪ್ರಾಧಿಕಾರ.