Advertisement

ಹಂಪಿ ಉತ್ಸವ: ಆಕ್ರೋಶ ತಣಿಸುವ ಯತ್ನ

06:00 AM Dec 04, 2018 | |

ಬರ ಹಿನ್ನೆಲೆಯಲ್ಲಿ ಹಂಪಿ ಉತ್ಸವ ಆಚರಣೆ ರದ್ದುಪಡಿಸುವ ಸರ್ಕಾರದ ತೀರ್ಮಾನವು ಉತ್ತರ ಕರ್ನಾಟಕ ಭಾಗದ, ಅದರಲ್ಲೂ ಬಳ್ಳಾರಿಯ ಜನಪ್ರತಿನಿಧಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿ ಕೊನೆಗೆ ಒಂದು ದಿನದ ಮಟ್ಟಿಗಾದರೂ ಆಚರಿಸಲು ಸರ್ಕಾರ ಮುಂದಾಗಿದೆ. ಹಂಪಿ ಉತ್ಸವಕ್ಕಾಗಿ 60 ಲಕ್ಷ ರೂ. ಅನುದಾನದ ಪೈಕಿ 30 ಲಕ್ಷ ರೂ. ಬಿಡುಗಡೆಯಾದ ನಂತರ ಸರ್ಕಾರ ಉತ್ಸವ ರದ್ದು ಮಾಡುವ ತೀರ್ಮಾನ ಕೈಗೊಂಡಿದ್ದು ಸರಿಯಾದ ಕ್ರಮವೂ ಅಲ್ಲ.

Advertisement

ಹಂಪಿ ಉತ್ಸವ ರದ್ದು ಮಾಡುವ ತೀರ್ಮಾನದಿಂದ ಮುಂದೆ ನಡೆಯುವ ಇತರೆ ಉತ್ಸವಗಳ ಮೇಲೂ ಪರಿಣಾಮ ಬೀರಬಹುದು ಎಂಬ ಆತಂಕವೂ ಇದೆ. ಏಕೆಂದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಡಿಸೆಂಬರ್‌ 8 ರಿಂದ ಮೂರು ದಿನ ಕರಾವಳಿ ಉತ್ಸವ ಆಚರಿಸಲು ನಿರ್ಧರಿಸಲಾಗಿದೆ. ಜನವರಿಯಲ್ಲಿ ಕದಂಬ ಉತ್ಸವ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ, ಸಹಜವಾಗಿ ಹಂಪಿ ಉತ್ಸವ ರದ್ದಾದರೆ ಆ ಉತ್ಸವಗಳ ಮೇಲೂ ಕಾರ್ಮೋಡ ಆವರಿಸುತ್ತದೆ.

ರಾಜ್ಯದ 100 ತಾಲೂಕುಗಳಲ್ಲಿ ಬರ ಆವರಿಸಿರುವುದರಿಂದ ಹಂಪಿ ಉತ್ಸವ ರದ್ದುಪಡಿಸಲು ನಿರ್ಧರಿಸಲಾಯಿತು ಎಂದು ಸಮಜಾಯಿಷಿ ನೀಡಿದರೂ ಮೈಸೂರು ದಸರಾ ಆಚರಣೆಗೆ ಇಲ್ಲದ ಬರ, ಹಂಪಿ ಉತ್ಸವಕ್ಕೆ ಏಕೆ ಎಂದು ಉತ್ತರ ಕರ್ನಾಟಕ ಭಾಗದ ಜನಪ್ರತಿನಿಧಿಗಳು ಪ್ರಶ್ನಿಸುವಂತಾಯಿತು.

ಮುಂಚಿತವಾಗಿ ಹಣ ಬಿಡುಗಡೆ ಮಾಡಿ ಉತ್ಸವಕ್ಕೆ ದಿನಾಂಕ ನಿಗದಿ ಮಾಡಿದ ಮೇಲೆ ಬರಗಾಲದ ನೆಪ ಹೇಳಿ ಮುಂದೂಡಿರುವುದು ಉತ್ತರ ಕರ್ನಾಟಕ ಭಾಗದ ಕಲಾವಿದರು ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರ ಪ್ರತಿ ವರ್ಷ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವ ಪಡೆದಿರುವ ಹದಿನಾರು ಉತ್ಸವಗಳನ್ನು ಆಚರಿಸುತ್ತದೆ. ಅದಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ್ರತಿಯೊಂದು ಉತ್ಸವಕ್ಕೂ ಅನುದಾನವನ್ನು ಮೀಸಲಿಟ್ಟಿದ್ದು, ನಿಯಮದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಂತ ಹಂತವಾಗಿ ಹಣ ಬಿಡುಗಡೆ ಮಾಡುತ್ತದೆ. 

ರಾಜ್ಯ ಸರ್ಕಾರವೇ ಮೈಸೂರು ದಸರಾ , ಹಂಪಿ, ಕದಂಬ ಉತ್ಸವಗಳನ್ನು ರಾಜ್ಯ ಉತ್ಸವ ಎಂದು ಪರಿಗಣಿಸಿದೆ.  ರಾಜ್ಯ ಮಟ್ಟದ ಉತ್ಸವಕ್ಕೆ 60 ಲಕ್ಷ ರೂ. ಅನುದಾನ,  ಜಿಲ್ಲಾ ಮಟ್ಟದ ಉತ್ಸವಗಳಿಗೆ 30 ಲಕ್ಷ ರೂ. ಅನುದಾನ ನಿಗದಿಪಡಿಸಿದೆ. ಹಂಪಿ ಉತ್ಸವ ರದ್ದುಪಡಿಸುವುದಾದರೆ ಅನುದಾನ ಬಿಡುಗಡೆಗೆ ಮುಂಚೆ ಜಿಲ್ಲೆಯ ಜನಪ್ರತಿನಿಧಿಗಳ ಸಭೆ ಕರೆದು ವಾಸ್ತವಾಂಶ ತಿಳಿಸಿ ಅಭಿಪ್ರಾಯ-ಸಲಹೆ ಪಡೆದು ತೀರ್ಮಾನ ಕೈಗೊಳ್ಳಬಹುದಿತ್ತು. ಆಗ ಯಾವುದೇ ಆಕ್ರೋಶ ಅಥವಾ ವಿವಾದಕ್ಕೆ ಅವಕಾಶವೇ ಇರುತ್ತಿರಲಿಲ್ಲ. ಅನಗತ್ಯವಾಗಿ ಹಂಪಿ ಉತ್ಸವ ಸಂಬಂಧ ಸಮ್ಮಿಶ್ರ ಸರ್ಕಾರ ವಿವಾದ ಮೈ ಮೇಲೆ ಎಳೆದುಕೊಳ್ಳುವಂತಾಯಿತು.

Advertisement

ನಾಡಿನ ಕಲೆ ಸಂಸ್ಕೃತಿ ವೈಭವ ಸಾರುವ ವಿದೇಶಗಳಿಂದಲೂ ಪ್ರವಾಸಿಗರನ್ನು ಆಕರ್ಷಿಸುವ ಹಂಪಿ ಉತ್ಸವ 1995ರಿಂದಲೂ ನಡೆಯುತ್ತಿದೆ. ವಿಜಯನಗರ ಸಾಮ್ರಾಜ್ಯದ ಗತವೈಭವ ನೆನಪಿಸುವ ಹಂಪಿ ಉತ್ಸವ ಖ್ಯಾತಿ ಸಹ ಪಡೆದಿದೆ. ಜತೆಗೆ ನೂರಾರು ಕಲಾವಿದರಿಗೆ ಇದರಿಂದ  ಆರ್ಥಿಕವಾಗಿ ನೆರವೂ ದೊರೆತಂತಾಗುತ್ತದೆ. ಸಾವಿರಾರು ಕೋಟಿ ಮೊತ್ತದ ಯೋಜನೆಗಳಿಗೆ ಅನುಮತಿ ನೀಡುವ ಸರ್ಕಾರಕ್ಕೆ ಹಂಪಿ ಉತ್ಸವಕ್ಕೆ ನೀಡುವ 60 ಲಕ್ಷ ರೂ. ದೊಡ್ಡದಲ್ಲ. ಆದರೆ, ಸ್ಥಳೀಯ ಅಧಿಕಾರಿಗಳು ಬರ ನಿರ್ವಹಣೆಯಲ್ಲಿ ತೊಡಗಿರುವುದರಿಂದ ಉತ್ಸವದ ಬಗ್ಗೆ ಗಮನ ನೀಡಲು ಆಗುವುದಿಲ್ಲ ಎಂಬ ಕಾರಣಕ್ಕೆ ಉತ್ಸವವನ್ನೇ ರದ್ದು ಮಾಡುವುದು ಸರಿಯಲ್ಲ. 

 ಇತ್ತೀಚೆಗೆ ಬಳ್ಳಾರಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದ್ದಕ್ಕೆ ಕೋಟ್ಯಂತರ ರೂ. ವೆಚ್ಚ ಮಾಡಿ ಕೃತಜ್ಞತಾ ಸಮಾವೇಶ ನಡೆಸಿ ಇದೀಗ 60 ಲಕ್ಷ ರೂ. ವೆಚ್ಚದ ಹಂಪಿ ಉತ್ಸವಕ್ಕೆ ಬರಗಾಲ ನೆಪ ಒಡ್ಡುವುದು  ಎಷ್ಟು ಸರಿ ಎಂಬ ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಆದರೆ, ಹಂಪಿ ಉತ್ಸವ ರದ್ದುಪಡಿರುವ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಉತ್ಸವ ಆಚರಣೆ ಕುರಿತು ಮರು ಪರಿಶೀಲನೆ ನಡೆಸಲಾಗುವುದು. ಒಂದು ದಿನದ ಮಟ್ಟಿಗಾದರೂ ಉತ್ಸವ ಆಚರಣೆಗೆ ಅಧಿಕಾರಿಗಳ ಬಳಿ ಚರ್ಚಿಸಲಾಗುವುದು ಎಂದು ಹೇಳುವ ಮೂಲಕ ಆಕ್ರೋಶ ತಣಿಸುವ ಪ್ರಯತ್ನ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next