Advertisement

ಹಂಪಿ ಉತ್ಸವ: ಇನ್ನೂ ಮುಗಿಯದ ಗೊಂದಲ

06:00 AM Dec 03, 2018 | |

ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಶ್ವವಿಖ್ಯಾತ ಹಂಪಿ ಉತ್ಸವವನ್ನು ರದ್ದುಗೊಳಿಸಲು ಮುಂದಾಗಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಹಲವು ಸಂಘ ಸಂಸ್ಥೆಗಳು, ಕಲಾವಿದರು ಹಂಪಿ ಉತ್ಸವ ಆಚರಣೆಗೆ ಆಗ್ರಹಿಸುತ್ತಿರುವ ನಡುವೆಯೇ, ಹಂಪಿ ಉತ್ಸವ ಆಚರಣೆ ಸಂಬಂಧ  ಈಗಾಗಲೇ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಅವರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ಸಂಸದ ವಿ.ಎಸ್‌.ಉಗ್ರಪ್ಪ ಹೇಳುವ ಮೂಲಕ ಉತ್ಸವ ನಡೆಯುವ ಸಾಧ್ಯತೆಯ ಸುಳಿವು ನೀಡಿದ್ದಾರೆ.

Advertisement

ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ: ಉಗ್ರಪ್ಪ
ಬಳ್ಳಾರಿ
: ವಿಶ್ವವಿಖ್ಯಾತ ಹಂಪಿ ಉತ್ಸವ ಆಚರಣೆಗೆ ಸಂಬಂಧಿಸಿದಂತೆ ಈಗಾಗಲೇ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಅವರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಸಂಬಂಧಪಟ್ಟ ಇಲಾಖೆಗಳು ದಿನಾಂಕ ನಿಗದಿ ಸೇರಿ ಮುಂದಿನ ಕ್ರಮ ಕೈಗೊಳ್ಳಲಿವೆ ಎಂದು ಸಂಸದ ವಿ.ಎಸ್‌.ಉಗ್ರಪ್ಪ ಸ್ಪಷ್ಟಪಡಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಂಪಿ ಉತ್ಸವ ಆಚರಿಸುವಂತೆ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್‌ ಮತ್ತು ಹಿರಿಯ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ನೇತೃತ್ವದಲ್ಲಿ ಕಲಾವಿದರಾದ ರಮೇಶ್‌ಗೌಡ ಪಾಟೀಲ್‌, ವೀಣಾ ಆದೋನಿ ಸೇರಿ ಹಲವರು ಮನವಿ ಮಾಡಿದ್ದಾರೆ. ಹಂಪಿ ಉತ್ಸವ ಈ ಭಾಗದ ಸ್ವಾಭಿಮಾನದ ಸಂಕೇತ. ಬೇರೆ ಉತ್ಸವಗಳ ಆಚರಣೆಗೆ ಇಲ್ಲದ ಬರ ಪರಿಸ್ಥಿತಿ, ಹಂಪಿ ಉತ್ಸವ ಆಚರಣೆಗೇಕೆ ಎಂಬ ಪ್ರಶ್ನೆ ಜಿಲ್ಲೆಯ ಜನರು, ಕಲಾವಿದರದ್ದಾಗಿದೆ. ಹೀಗಾಗಿ ಸಿಎಂ ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌, ಜಿಲ್ಲಾಧಿಕಾರಿ ಡಾ.ರಾಮ್‌ ಪ್ರಸಾತ್‌ ಮನೋಹರ್‌ ಅವರೊಂದಿಗೆ ಹಂಪಿ ಉತ್ಸವ ಆಚರಿಸುವಂತೆ ಒತ್ತಾಯಿಸಿದ್ದೇನೆ. ಅವರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದರು.

ಹಂಪಿ ಉತ್ಸವಕ್ಕೆ ಹಣದ ಕೊರತೆ ಇದ್ದರೆ ಭಿûಾಟನೆ ಮಾಡಿ ಸರ್ಕಾರಕ್ಕೆ ಕೊಡುತ್ತೇವೆ ಎಂಬ ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಉಗ್ರಪ್ಪ, 2013ರಲ್ಲಿ ಬಿಜೆಪಿ ಅಧಿಕಾರಾವಧಿಯಲ್ಲಿ ಒಮ್ಮೆ ಹಂಪಿ ಉತ್ಸವ ರದ್ದಾಗಿತ್ತು. ಅದಕ್ಕೆ ಉತ್ತರ ಕೊಡಿ ಎಂದು ಟಾಂಗ್‌ ನೀಡಿದರು.

ನಾನೇನು ಸರ್ಕಾರದಲ್ಲಿ ಇದ್ದೇನಾ ಎಂದ ಮಾಜಿ ಸಿಎಂ
ಬಾಗಲಕೋಟೆ:
“ರಾಜ್ಯದ 100ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರವಿದೆ. ಹೀಗಾಗಿ ಹಂಪಿ ಉತ್ಸವ ನಡೆಸುವುದನ್ನು ಕೈಬಿಡಲು ನಿರ್ಧರಿಸಿರಬಹುದು. ನಾನೇನು ಸರ್ಕಾರದಲ್ಲಿ ಇದ್ದೇನಾ? ನನಗೆ ಉತ್ಸವ ನಡೆಸದಿರುವ ಕುರಿತು ಗೊತ್ತಿಲ್ಲ’ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು. ಬಾದಾಮಿ ತಾಲೂಕು ನೀಲಗುಂದ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 100ಕ್ಕೂ ಹೆಚ್ಚು ತಾಲೂಕುಗಳನ್ನು ಬರ ಪೀಡಿತ ಎಂದು ಸರ್ಕಾರವೇ ಘೋಷಿಸಿದೆ. ಬರ ಇರುವ ಹಿನ್ನೆಲೆಯಲ್ಲಿ ಹಂಪಿ ಉತ್ಸವ ಬೇಡವೆಂದು ತೀರ್ಮಾನ ಕೈಗೊಂಡಿರಬಹುದು. ನನ್ನ ಸರ್ಕಾರ ಇದ್ದಾಗಲೂ ಒಂದು ವರ್ಷ ಬರ ಇತ್ತು. ಒಂದು ವರ್ಷ ಉತ್ಸವ ನಡೆಸಿರಲಿಲ್ಲ. ಬಾದಾಮಿಯಲ್ಲಿ ಚಾಲುಕ್ಯ ಉತ್ಸವ ನಡೆಸುವ ಬಗ್ಗೆ ಸದ್ಯಕ್ಕೆ ನನಗೆ ಗೊತ್ತಿಲ್ಲ. ನಾನೇನು ಸರ್ಕಾರದಲ್ಲಿ ಇಲ್ಲ ಎಂದರು.

Advertisement

ಕುಂಟು ನೆಪ ಹೇಳದೆ ಹಂಪಿ ಉತ್ಸವ ಆಚರಿಸಿ: ಸಿಎಂಗೆ ಪತ್ರ
ಬೆಂಗಳೂರು
: ಬರಗಾಲದ ಕುಂಟು ನೆಪ ಹೇಳಿ ಐತಿಹಾಸಿಕ ಹಂಪಿ ಉತ್ಸವ ರದ್ದು ಮಾಡುವ ಬದಲು ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ರಾಜ್ಯ ಸರ್ಕಾರ ಹಂಪಿ ಉತ್ಸವ ಆಚರಿಸಬೇಕು ಎಂದು ಕರ್ನಾಟಕ ನವ ನಿರ್ಮಾಣ ಸೇನೆಯ ಅಧ್ಯಕ್ಷ ಭೀಮಾಶಂಕರ ಪಾಟೀಲ್‌ ಒತ್ತಾಯಿಸಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.

ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿ ಉತ್ಸವ ಆಚರಣೆ ಮುಂದೂಡಲು ರಾಜ್ಯ ಸರ್ಕಾರ ಬರಗಾಲದ ನೆಪ ಒಡ್ಡಿರುವುದು ಖಂಡನೀಯ. ಉತ್ತರ ಕರ್ನಾಟಕ ಭಾಗದಲ್ಲಿ ರಾಜ್ಯ ಸರ್ಕಾರ ಆಚರಿಸುವ ಉತ್ಸವಗಳಲ್ಲಿ ಹಂಪಿ ಉತ್ಸವ ಅತಿ ದೊಡ್ಡ ಉತ್ಸವವಾಗಿದ್ದು, ಇದರಲ್ಲಿ ರಾಜಕೀಯ ಬೆರೆಸದೆ, ತಾರತಮ್ಯ ನೀತಿ ಅನುಸರಿಸದೇ ಸರ್ಕಾರ ಆಚರಣೆ ಮಾಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ದಸರಾ ಆಚರಣೆ ಮಾಡಿದ ರಾಜ್ಯ ಸರ್ಕಾರ ಈಗ ಹಂಪಿ ಉತ್ಸವಕ್ಕೆ ಅನುದಾನ ನೀಡಲು ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ರಾಜ್ಯದಲ್ಲಿ ಬರದ ಸ್ಥಿತಿಯಿದೆ ಎಂಬುದು ಸತ್ಯ. ಸರಳವಾಗಿ ಹಂಪಿ ಉತ್ಸವ ಆಚರಣೆ ಮಾಡಬೇಕೇ ಹೊರತು ಉತ್ಸವ ರದ್ದುಪಡಿಸುವುದು ಸಮಂಜಸವಲ್ಲ.
– ಜಗದೀಶ ಶೆಟ್ಟರ್‌, ಮಾಜಿ ಮುಖ್ಯಮಂತ್ರಿ

ಬರಗಾಲದ ನೆಪವೊಡ್ಡಿ ಹಂಪಿ ಉತ್ಸವ ರದ್ದು ಮಾಡಲು ಹೊರಟಿರುವ ರಾಜ್ಯ ಸರಕಾರ ಉತ್ಸವದಲ್ಲೂ ಕೆಟ್ಟ ರಾಜ ಕಾರಣ ಮಾಡುತ್ತಿದೆ.
– ಶೋಭಾ ಕರಂದ್ಲಾಜೆ, ಸಂಸದೆ

Advertisement

Udayavani is now on Telegram. Click here to join our channel and stay updated with the latest news.

Next