ಹೊಸಪೇಟೆ: ಬರದ ನೆಪಒಡ್ಡಿ ಹಂಪಿ ಉತ್ಸವ ಆಚರಣೆಗೆ ಹಿಂದೇಟು ಹಾಕುತ್ತಿರುವ ರಾಜ್ಯ ಸರ್ಕಾರ, ಜ.30ರೊಳಗೆ ಉತ್ಸವ ದಿನಾಂಕ ನಿಗದಿಗೊಳಿಸಿ, ಅಗತ್ಯ ಅನುದಾನ ನೀಡಬೇಕು ಎಂದು ಆಗ್ರಹಿಸಿ, ವಿವಿಧ ಮಠಾಧೀಶರ ನೇತೃತ್ವದಲ್ಲಿ ನೂರಾರು ಕಲಾವಿದರು ಭಾನುವಾರ ನಗರದ ರೋಟರಿ ವೃತ್ತದಿಂದ ಹಂಪಿಯವರೆಗೆ ಪಾದಯಾತ್ರೆ ನಡೆಸಿದರು.
ಕೊಟ್ಟೂರು ಚಾನಕುಂಟೆ ಮಠದ ಸಿದ್ದಲಿಂಗ ಶ್ರೀ, ಮರಿಯಮ್ಮನಹಳ್ಳಿ ಗುರುಪಾದದೇವರ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ನಂದಿಪುರ ಮಠದ ಮಹೇಶ್ವರ ಸ್ವಾಮೀಜಿ ಹಾಗೂ ವಿವಿಧ ಮಠಾಧೀಶ್ವರರ ನೇತೃತ್ವದಲ್ಲಿ ಹಂಪಿವರೆಗೆ ಪಾದಯತ್ರೆ ನಡೆಸಿದ ಕಲಾವಿದರು, ಮೈಸೂರು ದಸರಾದಂತೆ ಹಂಪಿ ಉತ್ಸವವನ್ನೂ ಅದ್ಧೂರಿಯಾಗಿ ಆಚರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಲಾವಿದರ ಆಕ್ರೋಶ: ವಿಶ್ವ ಪರಂಪರಾ ಪಟ್ಟಿಯಲ್ಲಿರುವ ಹಂಪಿಯನ್ನು ಪ್ರವಾಸಿಗರು ಹಾಡಿ ಹೊಗಳುತ್ತಿದ್ದಾರೆ. ವಿಶ್ವದಲ್ಲಿಯೇ ಎರಡನೇ ಪ್ರವಾಸಿ ತಾಣವೆಂದು ಹೆಸರುವಾಸಿಯಾಗಿದೆ. ಆದರೆ ಇಂಥ ಐತಿಹಾಸಿಕ ತಾಣದಲ್ಲಿ ಹಂಪಿ ಉತ್ಸವ ನಡೆಸಲು ಮಾತ್ರ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಇದಕ್ಕೆ ಆಕ್ರೋಶಗೊಂಡ ಸಾಹಿತಿಗಳು, ಕಲಾವಿದರು ಬೀದಿಗಿಳಿದು ಹೋರಾಟಕ್ಕಿಳಿದರು. ಹಗಲು ವೇಷಗಾರರು ಬಣ್ಣ ಹಚ್ಚಿ ರಸ್ತೆಯಲ್ಲಿಯೇ ಪ್ರದರ್ಶನ ಮಾಡುತ್ತ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪಾದಯಾತ್ರೆ ನಂತರ ಹಂಪಿಯಲ್ಲಿ ತತ್ವಪದಗಳ ಹಾಡು ಹಾಡುತ್ತ, ನಾಟಕ ಪ್ರದರ್ಶನ ಮಾಡಿದರು.
ಡಾ| ಕೆ.ನಾಗರತ್ನಮ್ಮ, ಎಸ್.ಎಸ್. ಚಂದ್ರಶೇಖರ್, ರಾಜು ಕುಲಕರ್ಣಿ, ಶಿವಾನಂದ, ಆನಂದ ಪುರೋಹಿತ್, ಅಂಜಲಿ ಬೆಳಗಲ್, ಮಂಜಮ್ಮ ಜೋಗತಿ, ಸಾಲಿ ಸಿದ್ಧಯ್ಯ ಸ್ವಾಮಿ ಸೇರಿದಂತೆ ಜಿಲ್ಲೆಯ ಕಲಾವಿದರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
ಬಸವರಾಜ್ ಸ್ವಾಮಿ, ಕರವೇ ಸಂಘಟನೆ ಜಿಲ್ಲಾಧ್ಯಕ್ಷ
ಲೋಕಲ್ ಹಾಗೂ ಲೋಕಸಭೆ ಎಲೆಕ್ಷನ್ ಮೂಡಿನಲ್ಲಿರುವ ಸಮ್ಮಿಶ್ರ ಸರ್ಕಾರಕ್ಕೆ ಹಂಪಿ ಉತ್ಸವ ಮಾಡುವ ಯೋಚನೆಯಿದ್ದಂತಿಲ್ಲ. ಹಂಪಿ ಉತ್ಸವ ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತಿರುವ ಡಿ.ಕೆ ಶಿವಕುಮಾರ್ ಹೇಳುತ್ತಿದ್ದಾರೆ ವಿನಃ ದಿನಾಂಕ ಘೋಷಣೆ ಮಾಡುತ್ತಿಲ್ಲ. ಚುನಾವಣೆ ದಿನಾಂಕ ಘೋಷಣೆಗಾಗಿ ಸರ್ಕಾರ ಕಾಯುತ್ತಿದ್ದಂತೆ ಕಾಣುತ್ತಿದೆ. ನಿಜಕ್ಕೂ ಎಲ್ಲರ ಒತ್ತಾಸೆಯಿಂದ ಈ ವರುಷ ಹಂಪಿ ಉತ್ಸವ ನಡೆಯುತ್ತಾ ಎನ್ನೋದನ್ನು ಕಾದುನೋಡಬೇಕು.