ಗಾಜಾ: ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ದ ಮುಂದುವರಿದಿದೆ. ತಾನು ಒತ್ತೆಯಾಳುಗಳಾಗಿ ಇರಿಸಿದ್ದ ನೂರಾರು ಜನರ ಪೈಕಿ ಇಬ್ಬರು ವೃದ್ಧ ಇಸ್ರೇಲಿ ಮಹಿಳೆಯರನ್ನು ಹಮಾಸ್ ಉಗ್ರರು ಬಿಡುಗಡೆ ಮಾಡಿದ್ದಾರೆ. ಮಾನವೀಯ ಕಾರಣಗಳಿಗಾಗಿ ಸೋಮವಾರ ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ಅವರನ್ನು ಬಿಡುಗಡೆ ಮಾಡಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ನುರಿಟ್ ಕೂಪರ್ ಮತ್ತು ಯೋಚೆವೆಡ್ ಲಿಫ್ಶಿಟ್ಜ್ ಅವರನ್ನು ಇಸ್ರೇಲಿ ಸೇನೆಗೆ ಹಸ್ತಾಂತರಿಸಲಾಗಿದೆ ಮತ್ತು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಇಸ್ರೇಲಿ ಸರ್ಕಾರ ದೃಢಪಡಿಸಿದೆ. ಅವರನ್ನು ಗಾಜಾ ಗಡಿಯ ಸಮೀಪವಿರುವ ಕಿಬ್ಬುಟ್ಜ್‌ನಿಂದ ಅಪಹರಿಸಲಾಗಿತ್ತು.
ಇದನ್ನೂ ಓದಿ:World Cup; ಇತರ ಪಂದ್ಯಗಳಿಗಾಗಿ ಎದುರು ನೋಡುತ್ತಿದ್ದೇವೆ…: ಹಶ್ಮತುಲ್ಲಾ ವಿಶ್ವಾಸದ ನುಡಿ
ಹಮಾಸ್ ದಾಳಿಯ ಬಳಿಕ ಇಸ್ರೇಲ್ ನ ಆತ್ಮರಕ್ಷಣೆಯ ಹಕ್ಕನ್ನು ಅಮೆರಿಕ ಸಾರ್ವಜನಿಕವಾಗಿ ಬೆಂಬಲಿಸಿದೆ, ಆದರೆ ಗಾಜಾದ ನೆಲದ ಆಕ್ರಮಣದಿಂದ ದೂರವಿರಲು ಖಾಸಗಿಯಾಗಿ ಒತ್ತಾಯಿಸಿದೆ. ಗಾಜಾದಲ್ಲಿ ಇಸ್ರೇಲಿ ವೈಮಾನಿಕ ದಾಳಿಗಳು ನೂರಾರು ಜನರನ್ನು ಕೊಂದಿವೆ. ನಾಗರಿಕರನ್ನು ವಿಷಮ ಪರಿಸ್ಥಿತಿಯಲ್ಲಿ ಸಿಲುಕಿಸಿದೆ ಎಂದು ರಾಯಿಟರ್ಸ್ ತನ್ನ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ಹಮಾಸ್ ಭಯೋತ್ಪಾದಕರಿರುವ ಸುರಂಗ, ಲುಕ್‌ಔಟ್ ಪೋಸ್ಟ್‌ಗಳು ಮತ್ತು ಕ್ಷಿಪಣಿ ಲಾಂಚರ್ ಗಳು ಸೇರಿದಂತೆ 320 ಕ್ಕೂ ಹೆಚ್ಚು ತಾಣಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಸೋಮವಾರ ವೈಮಾನಿಕ ದಾಳಿ ಮುಂದುವರೆಸಿದೆ. ಕಳೆದ 24 ಗಂಟೆಗಳ ಬಾಂಬ್ ದಾಳಿಯಲ್ಲಿ 436 ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ.