ದೇರ್ ಅಲ್ ಬಲಾಹ್: ಹಲವು ವಿಘ್ನಗಳು, ಆತಂಕಗಳು, ಗೊಂದಲಗಳ ನಡುವೆಯೇ; ಪ್ಯಾಲೆಸ್ತೀನಿನ ಹಮಾಸ್ ಉಗ್ರರು 17 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ 13 ಇಸ್ರೇಲಿಗಳು, ನಾಲ್ವರು ಥಾಯ್ಲೆಂಡ್ ಪ್ರಜೆಗಳು ಸೇರಿದ್ದಾರೆ. ಇನ್ನೊಂದು ಕಡೆ ಇಸ್ರೇಲ್ ತನ್ನ ವಶದಲ್ಲಿದ್ದ 39 ಮಂದಿ ಪ್ಯಾಲೆಸ್ತೀನಿಯನ್ನರು ಕಳುಹಿಸಿಕೊಟ್ಟಿದೆ. ಅಲ್ಲಿಗೆ ಎರಡನೇ ಹಂತದ ಬಿಡುಗಡೆ ಮುಗಿದಿದೆ. ಈಗಾಗಲೇ 3ನೇ ಹಂತದ ಬಿಡುಗಡೆ ಪಟ್ಟಿ ಸಿದ್ಧವಾಗಿದ್ದು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಪಟ್ಟಿ ತಲುಪಿದೆ.
ಭಾನುವಾರ ಮುಂಜಾನೆಯೇ 2ನೇ ಹಂತದಲ್ಲಿ ಒತ್ತೆಯಾಳುಗಳ ಬಿಡುಗಡೆಯಾಗಬೇಕಿತ್ತು. ಆದರೆ ಹಮಾಸ್, ಇಸ್ರೇಲ್ ಒಪ್ಪಂದವನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂದು ತಕರಾರು ತೆಗೆಯಿತು.
ಅಂತಿಮವಾಗಿ ಕತಾರ್ ಮತ್ತು ಈಜಿಪ್ಟ್ಗಳು ಮಧ್ಯಪ್ರವೇಶಿಸಿದ್ದರಿಂದ ಬಿಕ್ಕಟ್ಟು ಬಗೆಹರಿಯಿತು. ಒಟ್ಟು ಮಾತುಕತೆಯ ಪ್ರಕಾರ 4 ದಿನಗಳಲ್ಲಿ 50 ಇಸ್ರೇಲಿಗಳು, 150 ಪ್ಯಾಲೆಸ್ತೀನಿಯನ್ನರ ಬಿಡುಗಡೆಯಾಗಬೇಕಿದೆ.
ಇಸ್ರೇಲ್‌ನಲ್ಲಿ ಆಕ್ರೋಶ: 2ನೇ ಹಂತದ ಒತ್ತೆಯಾಳುಗಳ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಇಸ್ರೇಲಿ ನಾಗರಿಕರು ಟೆಲ್‌ಅವಿವ್‌ನಲ್ಲಿ ಸೇರಿ ಸ್ವಾಗತಕ್ಕೆ ಸಜ್ಜಾಗಿದ್ದರು. ತಡವಾಗುತ್ತದೆ ಎಂಬ ಸುದ್ದಿ ಕೇಳಿದೊಡನೆಯೇ ಆತಂಕ ಶುರುವಾಗಿತ್ತು. ಸದ್ಯ ಇಸ್ರೇಲ್‌ನಲ್ಲಿ ಆಳುವ ಸರ್ಕಾರದ ವಿರುದ್ಧ ತುಸು ಆಕ್ರೋಶವಿದೆ. ಹಮಾಸ್ ಉಗ್ರರು ಇಸ್ರೇಲ್‌ಗೆ ನುಗ್ಗಿದ್ದನ್ನು ತಡೆಯಲು ಏಕೆ ಆಗಲಿಲ್ಲ ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
ನಾಲ್ವರು ಹಮಾಸ್ ನಾಯಕರ ಹತ್ಯೆ: ಹಮಾಸ್ ತಾನೇ ಬಹಿರಂಗಪಡಿಸಿರುವಂತೆ, ಅದರ ನಾರ್ದರ್ನ್ ಬ್ರಿಗೇಡಿಯರ್ ಅಹ್ಮದ್ ಅಲ್ ಘಾಂದೂರ್ ಸೇರಿ ಒಟ್ಟು ಅದರ ನಾಲ್ವರು ನಾಯಕರನ್ನು ಇಸ್ರೇಲ್ ಹತ್ಯೆ ಮಾಡಿದೆ.