Advertisement

Hamas: ಮತ್ತೆ ಅಟ್ಟಹಾಸ ಮೆರೆದ ಹಮಾಸ್‌- ಉಗ್ರರ ದಮನಕ್ಕೆ ಇಸ್ರೇಲ್‌ ಪ್ರಧಾನಿ ಪಣ

01:24 AM Oct 08, 2023 | Team Udayavani |

ಶನಿವಾರ ಬೆಳಗ್ಗೆ ಇಸ್ರೇಲ್‌ನ ಮೇಲೆ ಹಮಾಸ್‌ ಉಗ್ರರು ಏಕಾಏಕಿ ರಾಕೆಟ್‌ಗಳ ಸರಣಿ ದಾಳಿ ನಡೆಸಿದ್ದು ಇಸ್ರೇಲ್‌ ನಾಗರಿಕರ ಸಹಿತ ವಿಶ್ವಾದ್ಯಂತದ ಜನರನ್ನು ಬೆಚ್ಚಿಬೀಳಿಸಿದೆ. ಪ್ಯಾಲೆಸ್ತೀನ್‌ನ ಗಾಜಾ ಪಟ್ಟಿಯಿಂದ ಉಗ್ರರು ಇಸ್ರೇಲ್‌ನತ್ತ 5,000ಕ್ಕೂ ಅಧಿಕ ರಾಕೆಟ್‌ಗಳನ್ನು ಉಡಾಯಿಸಿದ್ದು ಇಸ್ರೇಲ್‌ನ ವಿವಿಧೆಡೆ ಭಾರೀ ಹಾನಿ ಸಂಭವಿಸಿದೆ. ಇದರ ಪರಿಣಾಮ ಇಸ್ರೇಲ್‌ ಯುದ್ಧವನ್ನು ಸಾರಿದ್ದಲ್ಲದೆ ದೇಶಾದ್ಯಂತ ತುರ್ತುಪರಿಸ್ಥಿತಿಯನ್ನು ಘೋಷಿಸಿದೆ. ಅತ್ತ ಹಮಾಸ್‌ ಉಗ್ರರು ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ಇಸ್ರೇಲ್‌ ವಿರುದ್ಧ “ಆಪರೇಶನ್‌ ಅಲ್‌-ಅಕ್ಸಾ ಫ್ಲಡ್‌’ ನ್ನು ಕೈಗೆತ್ತಿಕೊಂಡಿದ್ದು ಇದರ ಮೊದಲ ಹಂತವಾಗಿ ಈ ಸರಣಿ ರಾಕೆಟ್‌ ದಾಳಿಗಳನ್ನು ನಡೆಸಿರುವು ದಾಗಿ ಹೇಳಿಕೊಂಡಿದ್ದಾರೆ. ಇತ್ತ ಇಸ್ರೇಲ್‌ನ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ಈ ಬಾರಿ ಹಮಾಸ್‌ ಉಗ್ರರನ್ನು ಸದೆಬಡಿದೇ ಸಿದ್ಧ ಎಂದು ಘಂಟಾಪೋಷವಾಗಿ ಸಾರಿದ್ದಾರೆ. ಇಸ್ರೇಲ್‌ ಕೂಡ ಗಾಜಾಪಟ್ಟಿಯಲ್ಲಿನ ಹಮಾಸ್‌ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಪ್ರತಿದಾಳಿ ನಡೆಸಲಾರಂಭಿಸಿದ್ದು ಮುಂದಿನ ದಿನಗಳಲ್ಲಿ ಯುದ್ಧ ಮತ್ತಷ್ಟು ತೀವ್ರ ಸ್ವರೂಪಕ್ಕೆ ತಿರುಗುವ ಸ್ಪಷ್ಟ ಲಕ್ಷಣಗಳು ಗೋಚರಿಸಿವೆ.

Advertisement

ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ನ ನಡುವಣ ಸಂಘರ್ಷ ಹೊಸ ದೇನಲ್ಲ. ಸರಿಸುಮಾರು ಏಳೂವರೆ ದಶಕಗಳ ಹಿಂದಿನಿಂದಲೂ ಇಸ್ರೇಲ್‌-ಪಾಲೆಸ್ತೀನ್‌ ನಡುವೆ ಸಮರ ನಡೆಯುತ್ತಲೇ ಬಂದಿದ್ದು ಪದೇಪದೆ ಭುಗಿಲೇಳುತ್ತಲೇ ಇರುತ್ತದೆ. ಈ ಎರಡು ರಾಷ್ಟ್ರಗಳ ನಡುವೆ ಯುದ್ಧ ನಿರಂತರವಾಗಿ ನಡೆಯುತ್ತಲೇ ಬಂದಿದ್ದರೂ ಆಗಾಗ ಒಂದಿಷ್ಟು ಹಿನ್ನೆಲೆಗೆ ಸರಿದು ಬೂದಿ ಮುಚ್ಚಿದ ಕೆಂಡದಂತಿರುತ್ತದೆ . ಈ ಕೆಂಡಕ್ಕೆ ಗಾಳಿ ಹಾಕುವ ಅಥವಾ ತುಪ್ಪ ಸುರಿಯುವ ಕಾರ್ಯವನ್ನು ಹಮಾಸ್‌ ಉಗ್ರರು ಮತ್ತು ಇಸ್ರೇಲ್‌ ಸೇನಾಪಡೆಗಳು ನಡೆಸುತ್ತ ಬಂದಿದ್ದು ಸಮರ ಸನ್ನಿವೇಶವನ್ನು ಸೃಷ್ಟಿಸುತ್ತಿವೆೆ. ಇಸ್ರೇಲ್‌-ಪಾಲೆ ಸ್ತೀನ್‌ ನಡುವೆ ಸಂಘರ್ಷಕ್ಕೆ ಕಾರಣವೇನು?, ಹಮಾಸ್‌ ಉಗ್ರರು ಯಾರು? ಏನಿದರ ಇತಿಹಾಸ? ಎಂಬೆಲ್ಲ ಮಾಹಿತಿಗಳು ಇಲ್ಲಿವೆ.

ಯಾರು ಈ ಹಮಾಸ್‌ ಉಗ್ರರು?
ಹಮಾಸ್‌, ಪ್ಯಾಲೆಸ್ತೀನ್‌ನ ಅತೀ ದೊಡ್ಡ ಉಗ್ರಗಾಮಿ ಇಸ್ಲಾಮಿಸ್ಟ್‌ ಸಂಘಟನೆ. ಸದ್ಯ ಇದು ಗಾಜಾ ಪಟ್ಟಿಯಲ್ಲಿ 20 ಲಕ್ಷಕ್ಕೂ ಅಧಿಕ ಪ್ಯಾಲೆಸ್ತೀನಿಯರ ಮೇಲೆ ಹಿಡಿತ ಸಾಧಿಸಿದೆ. ಜತೆಗೆ ಇದು ಇಲ್ಲಿನ ಒಂದು ಪ್ರಬಲವಾದ ರಾಜಕೀಯ ಪಕ್ಷವೂ ಆಗಿದೆ. ಇಸ್ರೇಲ್‌ ವಿರುದ್ಧದ ಸಶಸ್ತ್ರ ಹೋರಾಟದಲ್ಲಿ ಈ ಸಂಘಟನೆ ಆರಂಭದಿಂದಲೂ ತೊಡಗಿಸಿಕೊಂಡಿದೆ. ಈ ಕಾರಣದಿಂದಾಗಿಯೇ ಇಸ್ರೇಲ್‌, ಅಮೆರಿಕ, ಯು.ಕೆ., ಯುರೋಪಿಯನ್‌ ಒಕ್ಕೂಟ ಮತ್ತು ಇತರ ರಾಷ್ಟ್ರಗಳು ಇದನ್ನು ಉಗ್ರಗಾಮಿ ಸಂಘಟನೆ ಎಂದು ಸಾರಿದ್ದು ಇದರ ವಿರುದ್ಧ ನಿರ್ದಾಕ್ಷಿಣ್ಯ ನೀತಿಯನ್ನು ತಮ್ಮದಾಗಿಸಿಕೊಂಡಿವೆ.

ಸ್ಥಾಪನೆ ಯಾವಾಗ?
1980ರ ದಶಕದ ಕೊನೆಯಲ್ಲಿ ವೆಸ್ಟ್‌ ಬ್ಯಾಂಕ್‌ ಹಾಗೂ ಗಾಜಾ ಪಟ್ಟಿಯ ಮೇಲೆ ಇಸ್ರೇಲ್‌ ನಡೆಸಿದ ಆಕ್ರಮಣದ ಅನಂತರ ಈ ಸಂಘಟನೆಯನ್ನು ಸ್ಥಾಪಿಸಲಾಯಿತು. 1967ರಲ್ಲಿ ಇಸ್ರೇಲ್‌-ಅರಬ್‌ ಯುದ್ಧದ ಬಳಿಕ ಯಹೂದಿ ರಾಷ್ಟ್ರವು ಪ್ಯಾಲೆಸ್ತೀನ್‌ನ ಎರಡು ಪ್ರದೇಶಗಳನ್ನು ವಶಪಡಿಸಿಕೊಂಡಿತ್ತು. 1987ರಲ್ಲಿ ಇಸ್ರೇಲ್‌ ಆಕ್ರಮಣವನ್ನು ಎದುರಿಸುವ ಪ್ರಬಲ ಗುಂಪಾಗಿ ಹಮಾಸ್‌ ಪರಿವರ್ತನೆಗೊಂಡಿತು.

1980ರ ದಶಕದ ಕೊನೆಯಲ್ಲಿ ಇಸ್ರೇಲ್‌ ವಿರುದ್ಧ ನಡೆಸಲಾದ ಪ್ಯಾಲೆಸ್ತೀನ್‌ ನ್ಯಾಶನಲ್‌ ಚಳವಳಿಯಲ್ಲಿ ಸೋಲು ಕಂಡ ಪ್ಯಾಲೆಸ್ತೀನ್‌ ಲಿಬರೇಶನ್‌ ಆರ್ಗನೈಸೇಶನ್‌(ಪಿಎಲ್‌ಒ)ನಲ್ಲಿ ಆಂತರಿಕವಾಗಿ ಸೋಲಿನ ಬೇಗುದಿ ಕುದಿಯತೊಡಗಿತು. ಇದರ ಪರಿಣಾಮವೇ ಹಮಾಸ್‌ ಸಂಘಟನೆ ತಲೆಎತ್ತಿತ್ತು. ಪಿಎಲ್‌ಒ 1960ರಿಂದಲೇ ಇಸ್ರೇಲ್‌ ವಿರುದ್ಧ ಪ್ಯಾಲೆಸ್ತೀನ್‌ನನ್ನು ವಿಮೋಚನೆಗೊಳಿಸುವ ಸಶಸ್ತ್ರ ದಂಗೆಯಲ್ಲಿ ತೊಡಗಿಸಿಕೊಂಡಿತ್ತು. ಆದರೆ ಅನಂತರ ಇಸ್ರೇಲ್‌ನ ಹಕ್ಕನ್ನು ಗುರುತಿಸಿ ಪ್ಯಾಲೆಸ್ತೀನ್‌ನನ್ನು ವಿಮೋಚನೆಗೊಳಿಸುವ ವಿಚಾರವನ್ನು ಪಿಎಲ್‌ಒ ಕೈಬಿಟ್ಟಿತ್ತು, ಜತೆಗೆ ಸಶಸ್ತ್ರ ಹೋರಾಟದಿಂದಲೂ ಹಿಂದೆ ಸರಿದಿತ್ತು. ಆದರೆ ಹೊಸದಾಗಿ ರಚನೆಯಾದ ಹಮಾಸ್‌ ಸಂಘಟನೆ ಮಾತ್ರ ಇಸ್ರೇಲ್‌ ಸರಕಾರದ ವಿರುದ್ಧ ಕತ್ತಿ
ಮಸೆಯುತ್ತಲೇ ಬಂದಿದೆ.

Advertisement

ಮುರಿದು ಬಿದ್ದ ಶಾಂತಿ ಒಪ್ಪಂದ
1990ರ ದಶಕದ ಆರಂಭದಲ್ಲಿ ಪಿಎಲ್‌ಒ ಹಾಗೂ ಇಸ್ರೇಲ್‌ ನಡುವೆ ಒಸ್ಲೋ ಶಾಂತಿ ಒಪ್ಪಂದ ಏರ್ಪಟ್ಟಿತು. ಇಸ್ರೇಲ್‌ನಂತೆ ಪ್ಯಾಲೆಸ್ತೀನ್‌ನ್ನು ಇಸ್ರೇಲ್‌ ಅಧೀನದ ಪ್ರತ್ಯೇಕ ರಾಷ್ಟ್ರದ ರೂಪದಲ್ಲಿ ಪರಿಗಣಿಸುವ ನಿರ್ಧಾರಕ್ಕೆ ಬರಲಾಗಿತ್ತು. ಆದರೆ ಪ್ಯಾಲೆಸ್ತೀನ್‌ ಉಗ್ರಗಾಮಿ ಗುಂಪುಗಳು ಇದರ ವಿರುದ್ಧವಾಗಿದ್ದವು. ಎರಡು ರಾಷ್ಟ್ರಗಳ ನಿರ್ಮಾಣವು ಪ್ಯಾಲೆಸ್ತೀನಿಯರ ಹಕ್ಕನ್ನು ಕಸಿದುಕೊಳ್ಳಬಹುದು ಎಂಬುದು ಅವರ ವಾದವಾಗಿತ್ತು.

ಈ ಒಪ್ಪಂದವನ್ನು ಮುರಿಯುವ ಸಲುವಾಗಿ ಹಮಾಸ್‌ ಉಗ್ರಗಾಮಿಗಳು ಆತ್ಮಾಹುತಿ ಬಾಂಬ್‌ ದಾಳಿಯನ್ನು ನಡೆಸಿದರು. ಈ ಕಾರಣದಿಂದಾಗಿ ಇಸ್ರೇಲ್‌ ಶಾಂತಿ ಒಪ್ಪಂದದಿಂದ ಹಿಂದೆ ಸರಿದಿತ್ತು. 2000-2005ರಲ್ಲಿ ಪುನಃ ಇಸ್ರೇಲ್‌ ಹಾಗೂ ಪ್ಯಾಲೆಸ್ತೀನ್‌ ನಡುವೆ ಶಾಂತಿ ಮಾತುಕತೆ ನಡೆದು ಮುರಿದು ಬಿದ್ದಾಗ ಹಮಾಸ್‌ ಆತ್ಮಾಹುತಿ ಬಾಂಬ್‌ ದಾಳಿ ಮತ್ತೆ ಮುನ್ನೆಲೆಗೆ ಬಂದಿತ್ತು. 2006ರಲ್ಲಿ ವೆಸ್ಟ್‌ ಬ್ಯಾಂಕ್‌ ಹಾಗೂ ಗಾಜಾ ಪಟ್ಟಿಯಲ್ಲಿರುವ ಸೀಮಿತ ಪ್ಯಾಲೆಸ್ತೀನಿಗಳ, ಪ್ಯಾಲೆಸ್ತೀನ್‌ ಲೆಜಿಸ್ಲೇಟಿವ್‌ ಕೌನ್ಸಿಲ್‌ ಚುನಾವಣೆಯಲ್ಲಿ ಹಮಾಸ್‌ ಪಕ್ಷವು ದೊಡ್ಡ ಮಟ್ಟದ ಜಯ ಗಳಿಸಿತ್ತು.

ಹಮಾಸ್‌ ಹಾಗೂ ಇಸ್ರೇಲ್‌ನ ನಡುವೆ ಕಳೆದ ಕೆಲವು ವರ್ಷಗಳಿಂದೀಚೆಗೆ ಸಂಘರ್ಷ, ಯುದ್ಧ ಗಳು ನಡೆಯುತ್ತಲೇ ಬಂದಿವೆ. ಇದರಲ್ಲಿ 2014ರಲ್ಲಿ ನಡೆದ ದಂಗೆಯು ಅತ್ಯಂತ ಭಯಾನಕ ಯುದ್ಧವಾಗಿತ್ತು. ಇದರಲ್ಲಿ ಅಂದಾಜು 1,462 ನಾಗರಿಕರ ಸಹಿತ 2,100 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದರು. 50 ದಿನಗಳ ಕಾಲ ನಡೆದ ಈ ಯುದ್ಧದಲ್ಲಿ ಇಸ್ರೇಲ್‌ನ ಯೋಧರು ಹಾಗೂ ಹಲವು ನಾಗರಿಕರು ಸಾವಿಗೀಡಾಗಿದ್ದರು.

2021ರಲ್ಲೂ ಸಹ ಇಸ್ರೇಲ್‌ ಹಾಗೂ ಹಮಾಸ್‌ಗಳ ನಡುವೆ 11 ದಿನಗಳ ಕಾಲ ಸಂಭವಿಸಿದ ವಾಯು ದಾಳಿಯಲ್ಲಿ ಗಾಜಾದಲ್ಲಿ 250 ಹಾಗೂ ಇಸ್ರೇಲ್‌ನಲ್ಲಿ 13 ಮಂದಿ ಮೃತಪಟ್ಟಿದ್ದರು.

ಪರಿಹಾರ ಕಾಣದ ಸಮಸ್ಯೆ
ಗಾಜಾಪಟ್ಟಿ ಮತ್ತು ವೆಸ್ಟ್‌ಬ್ಯಾಂಕ್‌ನಲ್ಲಿ ನಿರಂತರವಾಗಿ ಹಮಾಸ್‌ ಉಗ್ರರು ಮತ್ತು ಇಸ್ರೇಲ್‌ ಸೇನೆ ನಡುವೆ ದಾಳಿಗಳು ನಡೆಯುತ್ತಲೇ ಬಂದಿವೆ. ಈ ಸಂಘರ್ಷದ ಜತೆಜತೆಯಲ್ಲಿ ಇತ್ತಂಡಗಳ ನಡುವೆ ಸಂಧಾನ ಮಾತುಕತೆಗಳು ನಡೆಯುತ್ತಲೇ ಇದ್ದರೂ ಅವೆಲ್ಲವೂ ಸಂಘರ್ಷಕ್ಕೆ ತಾತ್ಕಾಲಿಕ ಅಂತ್ಯ ಹಾಡಲು ಯಶ ಕಂಡಿವೆಯೇ ವಿನಾ ಇಂದಿಗೂ ಮೂಲ ಸಮಸ್ಯೆಗೆ ಶಾಶ್ವತ ಪರಿಹಾರ ಲಭಿಸಿಲ್ಲ.

~  ವಿಧಾತ್ರಿ ಭಟ್‌, ಉಪ್ಪುಂದ

Advertisement

Udayavani is now on Telegram. Click here to join our channel and stay updated with the latest news.

Next