ಗಾಜಾ: ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವೆ ಮತ್ತೆ ಸಂಘರ್ಷ ಮುಂದುವರಿದಿದ್ದು, ಗಾಜಾ ಪಟ್ಟಿಯನ್ನು ಕೇಂದ್ರವಾಗಿರಿಸಿಕೊಂಡು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್ ನ ಹಲವು ಬಂಡುಕೋರ ನಾಯಕರು ಸಾವಿಗೀಡಾಗಿದ್ದಾರೆ ಎಂದು ವರದಿ ತಿಳಿಸಿದೆ. ಇದಕ್ಕೆ ಪ್ರತೀಕಾರವಾಗಿ ಹಮಾಸ್ ಗುರುವಾರ(ಮೇ 13) ಜೆರುಸಲೇಂ ಮತ್ತು ಟೆಲ್ ಅವೀವ್ ಮೇಲೆ ರಾಕೆಟ್ ದಾಳಿ ನಡೆಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:ರಂಜಾನ್ ಹಬ್ಬ : ಸಾಮೂಹಿಕ ಪ್ರಾರ್ಥನೆ ಮಾಡದಂತೆ ಪೊಲೀಸರ ಸೂಚನೆ
ಮಂಗಳವಾರ ರಾತ್ರಿ ಹಮಾಸ್ ನಡೆಸಿದ ರಾಕೆಟ್ ದಾಳಿಗೆ ಗಾಜಾದಲ್ಲಿ ಸಾವನ್ನಪ್ಪಿದವರ ಸಂಖ್ಯೆ 65ಕ್ಕೆ ಏರಿಕೆಯಾಗಿದ್ದು, ಇಸ್ರೇಲ್ ನಲ್ಲಿ 7 ಮಂದಿ ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಗಾಜಾ ಮೂಲದ ಬಂಡುಕೋರರು ಸೋಮವಾರ ಸಂಜೆಯಿಂದ ಇಸ್ರೇಲ್ ಮೇಲೆ ನೂರಾರು ರಾಕೆಟ್ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಹಮಾಸ್ ಹಾಗೂ ಇಸ್ಲಾಮಿಕ್ ಬಂಡುಕೋರರ ನೆಲೆ ಮೇಲೆ ಇಸ್ರೇಲ್ ಕೂಡಾ ವೈಮಾನಿಕ ದಾಳಿ ನಡೆಸಿತ್ತು.
2014ರಲ್ಲಿಯೂ ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವೆ 50 ದಿನಗಳ ಕಾಲ ಯುದ್ಧ ನಡೆದಿತ್ತು. ಈ ಬಾರಿಯೂ ಯುದ್ಧದ ಕಾರ್ಮೋಡ ಕವಿದಿದ್ದು, ಈ ಹಿನ್ನೆಲೆಯಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಸಂಘರ್ಷದಿಂದ ಹಿಂದೆ ಸರಿಯುವಂತೆ ಅಮೆರಿಕ ಸಲಹೆ ನೀಡಿದೆ. ಅಲ್ಲದೇ ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಜತೆ ಸಂಧಾನ ಮಾತುಕತೆ ನಡೆಸಲು ರಾಯಭಾರಿಯನ್ನು ಕಳುಹಿಸುವುದಾಗಿ ಅಮೆರಿಕ ತಿಳಿಸಿದೆ.