ಟೆಲ್ ಅವೀವ್ : ಸಂಘಟನೆ ಮುಖ್ಯಸ್ಥ ಯಾಹ್ಯಾ ಸಿನ್ವರ್ ಹತ್ಯೆಗೀಡಾಗಿರುವ ವಿಚಾರದ ಬೆನ್ನಲ್ಲೇ ಹಮಾಸ್ ಉಗ್ರರು ಇನ್ನಷ್ಟು ಆಕ್ರೋಶಿತರಾಗಿದ್ದು ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ನಿಲ್ಲಿಸುವವರೆಗೆ ಒತ್ತೆಯಾಳುಗಳ ಬಿಡುಗಡೆಯ ಪ್ರಶ್ನೆಯೇ ಇಲ್ಲ ಎಂದು ಶುಕ್ರವಾರ(ಅ18) ಹೇಳಿದೆ.
ದಕ್ಷಿಣ ಗಾಜಾದ ರಫಾದಲ್ಲಿ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ ಯಾಹ್ಯಾ ಸೇರಿ 3 ಪ್ರಮುಖ ಉಗ್ರರು ಹತರಾಗಿದ್ದಾರೆ ಎಂದು ಇಸ್ರೇಲ್ ಸೇನೆ ಹೇಳಿದೆ. ಈತನ ಸಾವು ದೃಢ ಪಡುವುದರೊಂದಿಗೆ ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಬೃಹತ್ ಯಶಸ್ಸು ಸಿಕ್ಕಿದಂತಾಗಿದೆ. ಡಿಎನ್‌ಎ ಪರೀಕ್ಷೆಯಲ್ಲೂ ಸಾವನ್ನಪ್ಪಿರುವುದು ಯಾಹ್ಯಾನೇ ಎಂಬುದು ದೃಢಪಟ್ಟಿದೆ. ಶುಕ್ರವಾರ ಯಾಹ್ಯಾ ನ ಅಂತಿಮ ಕ್ಷಣಗಳನ್ನು ತೋರಿಸುವ ಡ್ರೋನ್ ತುಣುಕನ್ನು ಇಸ್ರೇಲ್ ಬಿಡುಗಡೆ ಮಾಡಿದೆ. ಹತ್ಯೆಯನ್ನು ಹಮಾಸ್ ಗಂಟೆಗಳ ನಂತರ ದೃಢಪಡಿಸಿದೆ.
ಯಾಹ್ಯಾ ಹತ್ಯೆ ಬೆನ್ನಲ್ಲೇ ಹಮಾಸ್, ‘ಗಾಜಾದಲ್ಲಿ ಆಕ್ರಮಣ ನಿಲ್ಲುವವರೆಗೆ ಮತ್ತು ಇಸ್ರೇಲ್ ಪಡೆಗಳನ್ನು ಪ್ರದೇಶದಿಂದ ಹಿಂತೆಗೆದುಕೊಳ್ಳುವವರೆಗೆ ಇಸ್ರೇಲಿ ಒತ್ತೆಯಾಳುಗಳನ್ನು ಮುಕ್ತಗೊಳಿಸಲಾಗುವುದಿಲ್ಲ” ಎಂದು ಹೇಳಿದೆ.
2023 ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಭಾರೀ ದಾಳಿ ನಡೆಸಿದ್ದ ಹಮಾಸ್ ಉಗ್ರರು 1,200 ಜನರನ್ನು ಬಲಿತೆಗೆದುಕೊಂಡಿದ್ದರು. ಅದೇ ವೇಳೆ ಸುಮಾರು 250 ಜನರನ್ನು ಒತ್ತೆಯಾಳಾಗಿ ತೆಗೆದುಕೊಂಡಿದ್ದರು. ಸದ್ಯ ಒತ್ತೆಯಾಳುಗಳ ಸ್ಥಿತಿ ಏನಾಗಿದೆ ಎನ್ನುವುದೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ.