ಶಿವಮೊಗ್ಗ: “ಹಮಾರಾ ಬಾರಾ’ ಸಿನೆಮಾವನ್ನು ನಿಷೇಧಿಸುತ್ತಿರುವುದು ವಾಕ್ ಸ್ವಾತಂತ್ರ್ಯದ ಉಲ್ಲಂಘನೆ. ಕೇವಲ ಟ್ರೈಲರ್ ನೋಡಿ ಸಿನೆಮಾ ನಿಷೇಧ ಮಾಡುವುದು ಸರಿಯಲ್ಲ ಎಂದು ನಟ ಚೇತನ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಸಿನೆಮಾಗಳ ಬಗ್ಗೆ ಚರ್ಚೆ ಆಗಬೇಕೇ ಹೊರತು ನಿಷೇಧ ಆಗಬಾರದು. ಮುಸ್ಲಿಂ ವಿರೋ ಧಿ ಸಿನೆಮಾ ಮಾಡಲು ನನಗೆ ಸಾಕಷ್ಟು ಆಫರ್ ಬಂದಿತ್ತು. ಆದರೂ ನಾನು ಮಾಡಿಲ್ಲ. ಕೋಟಿ, ಕೋಟಿ ರೂ. ಬಂಡವಾಳ ಹಾಕಿ ಸಿನೆಮಾ ಮಾಡಿರುತ್ತಾರೆ. ಒಂದು ಡೈಲಾಗ್ ನೋಡಿ ಸಿನೆಮಾ ನಿಷೇಧಿಸುವುದು ಸರಿಯಲ್ಲ ಎಂದರು.
ಜಾತಿಗಣತಿ ವರದಿ ಬಿಡುಗಡೆ ಮಾಡಲಿ:
ಜಾತಿಗಣತಿಗಾಗಿ ಸರಕಾರ ಕೋಟ್ಯಂತರ ರೂ. ಖರ್ಚು ಮಾಡಿದೆ. ಆದರೆ ಇಲ್ಲಿಯವರೆಗೆ ಅದರ ವರದಿಯನ್ನು ಬಿಡುಗಡೆ ಮಾಡಿಲ್ಲ. ಜಾತಿಗಣತಿ ಮಾಡಿ ಸಾಮಾಜಿಕ ನ್ಯಾಯ ಕೊಡಬೇಕು ಎನ್ನುವ ಬಗ್ಗೆ ಯಾರಿಗೂ ಇಷ್ಟ ಇಲ್ಲ. ಅಹಿಂದ ನಾಯಕ ಎನ್ನುವ ಸಿದ್ದರಾಮಯ್ಯ ಅವರು ಯಾಕೆ ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡುತ್ತಿಲ್ಲ? ವರದಿಯನ್ನು ಬಿಡುಗಡೆ ಮಾಡದೆ ತಾನು ಅಹಿಂದ ಪರವಾಗಿದ್ದೇನೆ ಎಂದು ಹೇಳುವ ನೈತಿಕ ಹಕ್ಕು ಅವರಿಗಿಲ್ಲ. ವರದಿ ಬಿಡುಗಡೆಯಾಗಿ ಅದಕ್ಕೆ ತಕ್ಕಂತೆ ಯೋಜನೆ ರೂಪುಗೊಳ್ಳಬೇಕು ಎಂದು ಚೇತನ್ ಆಗ್ರಹಿಸಿದರು.
ಕೆಮರಾದ ಮುಂದೆ ನಟಿಸುವವರು ಮಾತ್ರ ನಟರಲ್ಲ. ಕಲೆಯನ್ನು ಉಳಿಸುತ್ತಿರುವವರು, ಅಲೆಮಾರಿಗಳು ಮುಂತಾದವರೂ ಕಲಾವಿದರೇ. ಆದ್ದರಿಂದ ಸರಕಾರ ಕೂಡಲೇ ಅಲೆಮಾರಿ ಸಮುದಾಯಗಳಿಗೆ ಮನೆಗಳನ್ನು ಕಟ್ಟಿಕೊಡಬೇಕು ಎಂದು ಆಗ್ರಹಿಸಿದರು.