Advertisement

ಹಳ್ಳಿಖೇಡದಲ್ಲಿ ಸೀಮಿನಾಗನಾಥ ಜಾತ್ರೆ ವೈಭವ

11:35 AM Nov 16, 2019 | Naveen |

„ಶಶಿಕಾಂತ ಕೆ.ಭಗೋಜಿ
ಹುಮನಾಬಾದ:
ಭಕ್ತರ ಇಷ್ಟಾರ್ಥ ಪೂರೈಸುವ ಹಳ್ಳಿಖೇಡ(ಬಿ) ಪಟ್ಟಣದ ಭಕ್ತರ ಆರಾಧ್ಯ ದೈವ ಶ್ರೀ ಸೀಮಿನಾಗನಾಥ ಜಾತ್ರೆ ವಿಶಿಷ್ಟ ಪವಾಡಗಳ ಮೂಲಕ ಕರ್ನಾಟಕ ಮಾತ್ರವಲ್ಲದೇ ತೆಲಂಗಾಣ, ಮಹಾರಾಷ್ಟ್ರದ ಅಪಾರ ಸಂಖ್ಯೆಯ ಭಕ್ತರನ್ನು ಆಕರ್ಷಿಸುತ್ತಿದೆ.

Advertisement

ಸೀಮಿನಾಗನಾಥ ನಂಬಿದ ಭಕ್ತರನ್ನು ಕೈಬಿಡದಾತ ಎಂಬ ನಂಬಿಕೆ ಭಕ್ತರದು. ತನ್ನ ಅಸಾಮಾನ್ಯ ಪವಾಡಗಳಿಂದಾಗಿ ನಾಗನಾಥ ಇಲ್ಲಿನ ಭಕ್ತರ ಆರಾಧ್ಯ ದೇವರಾಗಿ ನೆಲೆ ನಿಂತಿದ್ದಾರೆ. ಸಂತಾನ ಪ್ರಾಪ್ತಿ ನಂತರ ಹರಕೆ ತೀರಸದ್ದಕ್ಕೆ ನಾಗನಾಥ ಕೊಟ್ಟ ಶಿಕ್ಷೆ, ದೇವಸ್ಥಾನದಲ್ಲಿನ ಬೆಳ್ಳಿ ನಾಗಮೂರ್ತಿ ಕದ್ದು ಸುಳ್ಳು ಹೇಳಿದ್ದ ಅರ್ಚಕರಿಗೆ ಆದ ಶಿಕ್ಷೆ, ದೇವರ ಗಂಟೆ ಕದ್ದ ಸಂಬಣ್ಣ ಅನುಭವಿಸಿದ್ದು ಸೇರಿದಂತೆ ಹೀಗೆ ಹೇಳುತ್ತ ಹೋದರೆ ಪವಾಡಗಳ ಪಟ್ಟಿ ಬೆಳೆಯುತ್ತ ಹೋಗುತ್ತದೆ.

ಕೇವಲ ಗರ್ಭ ಗುಡಿಗೆ ಸೀಮಿತವಾಗಿದ್ದ ಈ ದೇವಸ್ಥಾನವನ್ನು ಕೇವಲ ಭಕ್ತರ ದೇಣಿಗೆಯಿಂದಲೇ ಬೃಹತ್‌ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಲಾಗಿದೆ. 2003ರಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಅನುದಾನದಲ್ಲಿ ಭಕ್ತರ ವಿಶ್ರಾಂತಿಗಾಗಿ ಉದ್ಯಾನ ನಿರ್ಮಿಸಲಾಗಿದೆ. ಭಕ್ತರ ಸಂಖ್ಯೆ ಹಾಗೂ ಆದಾಯ  ಮನದಲ್ಲಿಟ್ಟುಕೊಂಡು ಈ ದೇವಸ್ಥಾನ 2008ರಲ್ಲಿ ಮುಜರಾಯಿ ಇಲಾಖೆ ತನ್ನ ವ್ಯಾಪ್ತಿಗೆ ತೆಗೆದುಕೊಂಡಿತ್ತು. 2016-17ನೇ ಸಾಲಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರದಲ್ಲಿ ಕೆಆರ್‌ಐಡಿಎಲ್‌ ಅಧ್ಯಕ್ಷರಾಗಿದ್ದ ಈ ಕ್ಷೇತ್ರದ ಶಾಸಕ ರಾಜಶೇಖರ ಬಿ.ಪಾಟೀಲ ಅವರು ಪ್ರವಾಸೋದ್ಯಮ ಖಾತೆ ಸಚಿವರ ಮೇಲೆ ಒತ್ತಡ ಹೇರಿ ಯಾತ್ರಿ ನಿವಾಸ ನಿರ್ಮಿಸುವುದಕ್ಕಾಗಿ 1ಕೋಟಿ ರೂ. ಬಿಡುಗಡೆಗೊಳಿಸಿದ್ದು, ಕಾಮಗಾರಿ ಪ್ರಗತಿ ಹಂತದಲ್ಲಿದೆ. ಭಕ್ತರಿಗಾಗಿ ದೇವಸ್ಥಾನದಲ್ಲಿ ಪ್ರತಿನಿತ್ಯ ಅನ್ನ ದಾಸೋಹ ವ್ಯವಸ್ಥೆ ಇದೆ.

ಪುಷ್ಕರಣಿ ಕಾಮಗಾರಿ ಪ್ರಗತಿಯಲ್ಲಿ: ಈ ದೇವಸ್ಥಾನ ಪ್ರಾಂಗಣದಲ್ಲಿ ಭಕ್ತರ ಬೇಡಿಕೆಯನ್ನು ಗಂಭೀರ ಪರಿಗಣಿಸಿದ ಶಾಸಕ ಪಾಟೀಲ 40 ಲಕ್ಷ ರೂ. ಮೊತ್ತದಲ್ಲಿ ಅತ್ಯಾಧುನಿಕ ಮಾದರಿಯ 15 ಕೊಠಡಿಗಳ ಸೌಲಭ್ಯದಿಂದ ಕೂಡಿದ ಸುಸಜ್ಜಿತ ಪುಷ್ಕರಣಿ ನಿರ್ಮಾಣ ಕಾರ್ಯ ತೀವ್ರ ಗತಿಯಲ್ಲಿ ಸಾಗುತ್ತಿದ್ದು, ಬಹುತೇಕ ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆಗಳಿವೆ.

ವರ್ಷವಿಡೀ ನಡೆಯುವ ಮದುವೆ, ಉಪನಯನ, ಜಂಗಮ ದಾಸೋಹ ಇತ್ಯಾದಿ ಸಂದರ್ಭದಲ್ಲಿ ಭಕ್ತರಿಗೆ ಅಡಿಗೆ ಸಿದ್ಧತೆಗೆ ಸ್ಥಳದ ಅಭಾವ ಎದುರಾಗುತ್ತಿರುವುದುನ್ನು ಗಮನಿಸಿ, ವಿಶಾಲ ಸ್ಥಳದಲ್ಲಿ ವಿನೂತನ ಮಾದರಿ ಶಡ್‌ಗಳನ್ನು ನಿರ್ಮಿಸಲಾಗಿದೆ. ದೂರದ ಊರುಗಳಿಂದ ಬರುವ ಭಕ್ತರ ವಾಹನ ನಿಲುಗಡೆಗಾಗಿ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.

Advertisement

ಗೋಪುರ ಮೂರ್ತಿ ಶಿಲ್ಪ ಆಕರ್ಷಕ: ದೇವಸ್ಥಾನದಲ್ಲಿ ಕೈಗೊಳ್ಳುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಜೊತೆ ಜೊತೆಗೆ ದೇವಸ್ಥಾನದ ಮುಖ್ಯ ದ್ವಾರದ ಗೋಪುರದ ಮೇಲೆ ಅತ್ಯಾಕರ್ಷಕವಾದ ಮೂರ್ತಿಗಳನ್ನು ಅಳವಡಿಸುತ್ತಿರುವ ಕಾರಣ ದೇವಸ್ಥಾನದ ಅಂದ ಹಿಂದೆಂದಿಗಿಂತ ಈ ಬಾರಿ ಅಧಿಕ ಆಕರ್ಷಿಸುತ್ತಿದೆ. ನಾಗೇಶ್ವರ ಮಾಲಾಧಾರಿ: ಶ್ರೀ ಸೀಮಿನಾಗನಾಥ ದೇವಸ್ಥಾನದಲ್ಲಿ 2004ರಿಂದ ಅಯ್ಯಪ್ಪಸ್ವಾಮಿ ಮಾಲಾಧಾರಿ ಮಾದರಿಯಲ್ಲೇ ನಾಗೇಶ್ವರ ಮಾಲಾಧಾರಿಗಳ ಭಕ್ತಿ ಸೇವೆ ಆರಂಭಗೊಂಡಿದೆ.

2004ರಲ್ಲಿ ಕೇವಲ 55 ವೃತಧಾರಿಗಳಿಂದ ಆರಂಭಗೊಂಡ ಮಾಲಾಧಾರಿಗಳ ಸಂಖ್ಯೆ ಈಗ 600ಕ್ಕೂ ಮೇಲ್ಪಟ್ಟಿದೆ. ಮಾಲಾಧಾರಿಗಳಲ್ಲಿ ಕೆಲವರಿಗೆ ತಾವು ಹೊತ್ತ ಹರಕೆಯಂತೆ ಸರ್ಕಾರಿ ನೌಕರಿ ಲಭಿಸಿದ್ದರಿಂದ ಪ್ರತೀ ವರ್ಷ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಅಯ್ಯಪ್ಪಸ್ವಾಮಿ ಭಕ್ತರು ಕಪ್ಪು ವಸ್ತ್ರ ಧರಿಸಿದರೇ ನಾಗೇಶ್ವರ ಮಾಲಾಧಾರಿಗಳು ಕೆಂಪು ಕಂದು ಬಣ್ಣದ ವಸ್ತ್ರ ಧರಿಸುತ್ತಾರೆ.

ವಾರಕಾಲ ನಡೆಯುವ ಜಾತ್ರೆ: ಕಲ್ಯಾಣ ಕರ್ನಾಟಕ ಭಾಗದ ನಾಗೇಶ್ವರ ದೇವಸ್ಥಾನಗಲ್ಲಿ ಉತ್ಸವ ವಿಶೇಷ ಪೂಜೆ ನಡೆಯಬಹುದು. ಆದರೆ ವಾರ ಕಾಲ ಜಾತ್ರೆ ನಡೆಯುವುದು ಹಳ್ಳಿಖೇಡ(ಬಿ)ದ ಸೀಮಿನಾಗನಾಥ ಜಾತ್ರೆ ಮಾತ್ರ. ರಥೋತ್ಸವ, ಪಲ್ಲಕ್ಕಿ ಒಳಗೊಂಡಂತೆ ಇಲ್ಲಿನ ನಡೆಯುವ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಎಲ್ಲ ಸಮುದಾಯದವರು ಭಾಗವಹಿಸಿ, ಸೇವೆ
ಸಲ್ಲಿಸುವುದು ಈ ಜಾತ್ರೆಯ ವಿಶೇಷ. ಜಾತ್ರೆ ಅಂಗವಾಗಿ ಪ್ರತೀ ವರ್ಷ ಜಂಗೀಕುಸ್ತಿ ನಡೆಯುತ್ತದೆ. ಜೊತೆಗೆ ವಾಲಿಬಾಲ್‌ ಸಹ ನಡೆಯುತ್ತದೆ. ಆದರೆ ಈ ಬಾರಿ ವಿಸೇಷವಾಗಿ ಮಹಿಳೆಯರಿಗಾಗಿ ರಾಜ್ಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್‌ ಪಂದ್ಯಾವಳಿ ಆಯೋಜಿಸುತ್ತಿದ್ದು, ರಾಜ್ಯದ ಬೆಂಗಳೂರು, ಮೈಸೂರು, ಬೆಳಗಾವಿ, ವಿಜಯಪುರ ತೆಲಂಗಾಣದ ಹೈದರಾಬಾದ್‌ ಇನ್ನೂ ಅನೇಕ ಜಿಲ್ಲೆಗಳು ಮಾತ್ರವಲ್ಲದೇ ಮಹಾರಾಷ್ಟ್ರ ರಾಜ್ಯದ ಪುಣೆ, ಮುಂಬೈ, ಚಿನ್ನೈ ಇನ್ನೂ ಮೊದಲಾದ ರಾಜ್ಯಗಳಿಂದ 250ಕ್ಕೂ ಅಧಿಕ ಜನ ಖ್ಯಾತ ಕ್ರೀಡಾಪಟುಗಳು ಆಗಮಿಸುತ್ತಿರುವುದು ಈ ಬಾರಿ ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next