Advertisement

ಮಂಗಳೂರಲ್ಲೂ ರಾಗಿ,ಜೋಳ,ಅಕ್ಕಿ ರೊಟ್ಟಿ ಸಿಗುತ್ತೆ!

12:53 PM Jan 06, 2019 | |

ಗ್ರಾಹಕರಿಗೆ ಗುಣಮಟ್ಟದ ಆಹಾರ ನೀಡುವು ಉದ್ದೇಶದಿಂದ  ಶಿಲ್ಪ ಅವರು ತವರೂರು ಹಾಸನದಿಂದಲೇ ಅಕ್ಕಿ, ರಾಗಿ, ಜೋಳದ ಹಿಟ್ಟನ್ನು ತರುತ್ತಾರೆ. ಬುಧವಾರ ಮತ್ತು ಭಾನುವಾರದಂದು ಇಲ್ಲಿ ರಾಗಿ ಮುದ್ದೆ, ಬಸ್ಸಾರು ದೊರೆಯುತ್ತದೆ. 

Advertisement

ಕಡಲತಡಿಯ ಮಂಗಳೂರಂತಹ ನಗರದಲ್ಲಿ ಅಕ್ಕಿ ರೊಟ್ಟಿ ಸಿಗಬಹುದಾ? ಅನುಮಾನ ಬೇಡ.   ಜೋಳ, ರಾಗಿ ರೊಟ್ಟಿ ಸಿಗುತ್ತದೆ. ಆದರೆ, ತಿನ್ನುವುದಕ್ಕೆ ಮಂಗಳೂರಿನ ಗಾಂಧಿನಗರದ ಸಮೀಪದ ಮಣ್ಣಗುಡ್ಡೆಯಲ್ಲಿರುವ  “ಹಳ್ಳಿ ಮನೆ ರೊಟ್ಟಿಸ್‌’ ಎಂಬ ಮೊಬೈಲ್‌ ಕ್ಯಾಂಟೀನ್‌ಗೆ ಬರಬೇಕು.  ಇಲ್ಲಿ ಎಲ್ಲ ರೀತಿಯ ರೊಟ್ಟಿ ದೊರೆಯುತ್ತದೆ. ಹಾಸನ ಮೂಲದ ಶಿಲ್ಪಾ ಈ ಕ್ಯಾಂಟೀನ್‌ ನಡೆಸುತ್ತಿದ್ದು, ಕರಾವಳಿಯ ಜನರಿಗೆ ರೊಟ್ಟಿಯ ರುಚಿಯನ್ನು ತೋರಿಸಿದ್ದಾರೆ. 

ಮಹಿಂದ್ರಾ ಕಂಪನಿಯಿಂದ ಮಹಿಳಾ ಸಾಧಕ ಪ್ರಶಸ್ತಿ, ಕರ್ನಾಟಕ ರಾಜ್ಯ ಪವರ್‌ ವುಮನ್‌ ಪ್ರಶಸ್ತಿ ಹೀಗೆ ಹಲವು ಸಂಘ ಸಂಸ್ಥೆಗಳಿಂದ ಸನ್ಮಾನಿಸಲ್ಪಟ್ಟಿರುವ ಶಿಲ್ಪಾ ಅವರು, ಅಲ್ಪ ಅವಧಿಯಲ್ಲೇ ಯಶಸ್ಸು ಕಂಡವರು. 


ಇವರು ಓದಿರುವುದು ಹತ್ತನೇ ತರಗತಿ.  2005ರಲ್ಲಿ ಟ್ರಾನ್ಸ್‌ಪೊàರ್ಟ್‌ ಉದ್ಯಮಿಯೊಬ್ಬರನ್ನು ಮದುವೆಯಾಗಿ ಮಂಗಳೂರಿಗೆ ಬಂದರು. ಅವರು ದೂರವಾದ ನಂತರ ಎದುರಾಗಿದ್ದು ದೊಡ್ಡ ಶೂನ್ಯ. ಅದನ್ನು ತುಂಬಲು ಶುರು ಮಾಡಿದ್ದು ಹಳ್ಳಿ ಮನೆ ರೊಟ್ಟಿàಸ್‌ ಎಂಬ ಮೊಬೈಲ್‌ ಕ್ಯಾಂಟೀನ್‌. 

ಆರಂಭದಲ್ಲಿ ಈ ಘಟ್ಟದ ಮೇಲಿನ ಈ ರೊಟ್ಟಿಯನ್ನು ಯಾರು ತಿನ್ನುತ್ತಾರೆ ಎಂಬ ಅಳಕು ಸಹ ಇತ್ತು. ಆದರೆ ಇದು ಜಾಸ್ತಿ ದಿವಸ ಇರಲಿಲ್ಲ.  ರುಚಿ ಹೆಚ್ಚಿಸಲು ಯಾವುದೇ ಪೌಡರ್‌ಗಳನ್ನು ಬಳಕೆ ಮಾಡದೇ, ಜನರಿಗೆ ಶುಚಿ ರುಚಿಯಾದ ರೊಟ್ಟಿ ನೀಡಲು ಪ್ರಾರಂಭಿಸಿದರು. ಗ್ರಾಹಕರಿಗೆ ಇದು  ಇಷ್ಟವಾಗಿ ನಿಧಾನವಾಗಿ ಕ್ಯಾಂಟೀನ್‌ನತ್ತ ಹೆಜ್ಜೆ ಹಾಕಿದರು. ಶಿಲ್ಪಾ ಅವರ ಕೆಲಸದಲ್ಲಿ ಸಹೋದರ ಚಿರಂಜೀವಿ, ತಂದೆ ಚಂದ್ರೇಗೌಡ್ರು ನೆರವಾಗುತ್ತಿದ್ದಾರೆ. 

ಹಳ್ಳಿ ಮನೆ ವಿಶೇಷ
ಶಿಲ್ಪಾ ಅವರ ಕ್ಯಾಂಟೀನ್‌ನಲ್ಲಿ ರಾಗಿ, ಜೋಳ, ಅಕ್ಕಿ ರೊಟ್ಟಿಯೇ ವಿಶೇಷ ತಿನಿಸು. ಇದರ ಜೊತೆಗೆ ತಟ್ಟೆ ಇಡ್ಲಿ, ಟೊಮೆಟೊ ಆಮ್ಲೆಟ್‌, ಮೆಂತ್ಯ ಪಲಾವ್‌, ಪಾಲಕ್‌ ಪಲಾವ್‌, ಬಿಸಿಬೇಳೆಬಾತ್‌, ವೆಜ್‌ ಬಿರಿಯಾನಿಯಂಥ ರೈಸ್‌ ಬಾತ್‌ಗಳು ದೊರೆಯುತ್ತವೆ.   ಇದರ ಜೊತೆಗೆ ಹಾಸನ ಕಡೆ ಮಾಡುವ ಚಟ್ನಿ, ಪಲ್ಯ, ಖಾರ ಚಟ್ನಿ ಹಾಗೂ ಸಾಂಬಾರ್‌ಗಳಿಂದ ಇವರ ಕ್ಯಾಂಟೀನ್‌ ರುಚಿ ವಿಭಿನ್ನವಾಗಿದೆ. 

Advertisement

ರಾಗಿ ಮುದ್ದೆ ಊಟ
ಗ್ರಾಹಕರಿಗೆ ಗುಣಮಟ್ಟದ ಆಹಾರ ನೀಡಬೇಕೆಂದು ಇವರ ಮೂಲ ಉದ್ದೇಶ. ಹೀಗಾಗಿ, ತವರೂರು ಹಾಸನದಿಂದಲೇ ಅಕ್ಕಿ, ರಾಗಿ, ಜೋಳದ ಹಿಟ್ಟನ್ನು ತರುತ್ತಾರೆ. ಅಲ್ಲದೆ, ಬುಧವಾರ ಮತ್ತು ಭಾನುವಾರ ರಾಗಿ ಮುದ್ದೆ ಬಸ್ಸಾರು ಕೂಡ ದೊರೆಯುತ್ತದೆ.   ಶುಭ ಸಮಾರಂಭಗಳಿಗೆ ಆರ್ಡ್‌ರ್‌ ಕೊಟ್ಟರೆ ಊಟ ತಿಂಡಿಯನ್ನು ಮಾಡಿಕೊಡುತ್ತಾರೆ. ಇವರ ರೊಟ್ಟಿ ರುಚಿಗೆ ಮನಸೋತವರು ಮತ್ತೆ ಆ ಕಡೆ ಹೋದಾಗ ತಿನ್ನದೇ ಹೋಗುವುದಿಲ್ಲ. ಡಾಕ್ಟರ್‌, ಎಂಬಿಬಿಎಸ್‌ ವಿದ್ಯಾರ್ಥಿಗಳು, ಕೂಲಿ ಕೆಲಸಗಾರು ಎಲ್ಲಾ ವರ್ಗದವರೂ ಹಳ್ಳಿ ಮನೆಯ ರೊಟ್ಟಿಯನ್ನು ಸವಿಯುತ್ತಾರೆ.

ಮಹಿಂದ್ರಾ ಕಂಪನಿ ಸಪೋರ್ಟ್‌
ಶಿಲ್ಪಾ ಅವರ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಹರಡಿದ್ದ ಸುದ್ದಿಯನ್ನು ನೋಡಿದ ಮಹಿಂದ್ರ ಕಂಪೆನಿಯ ಸಿಇಒ ಆನಂದ್‌ ಮಹಿಂದ್ರಾ, ಇವರಿಗೆ ಮತ್ತೂಂದು ಮೊಬೈಲ್‌ ಕ್ಯಾಂಟೀನ್‌ ಆರಂಭಿಸಲು ವಾಹನವನ್ನು ಕೊಡುಗೆಯಾಗಿ ನೀಡಿದ್ದಾರೆ.

ಹೋಟೆಲ್‌ ಸಮಯ: ಸಂಜೆ 4ರಿಂದ ರಾತ್ರಿ 10 ಗಂಟೆವರೆಗೆ

– ಭೋಗೇಶ ಆರ್‌. ಮೇಲುಕುಂಟೆ

Advertisement

Udayavani is now on Telegram. Click here to join our channel and stay updated with the latest news.

Next