Advertisement
“ಸಾರ್, ನಮ್ಮನೇಲಿ ನಾವು ನಾಲ್ಕು ಜನ ಇರೋದು. ನಮ್ಮಕ್ಕ, ನಮ್ಮಪ್ಪ, ಅಮ್ಮ. ಅಪ್ಪ ತುಂಬಾ ಕುಡೀತಾರೆ ಸಾರ್. ಅವ್ರು ದುಡಿದಿದ್ದೇನೂ ಮನೆಗೆ ಸಿಗೋಲ್ಲ. ಅಮ್ಮ ನಮ್ಮನ್ನು ನೋಡ್ಕೊತಿರೋದು. ಅವ್ರು ಕಷ್ಟಪಡೋದು ನೋಡೋಕಾಗೆªà ನಾನೂ ಏನಾದರೂ ದುಡಿದು ನಮ್ಮ ವಿದ್ಯಾಭ್ಯಾಸದ ದಾರಿ ನೋಡ್ಕೊಬೇಕು ಅಂತ ಅಂದ್ಕೊಡೆ ಸರ್. ಅಕ್ಕ ಗಾರ್ಮೆಂಟ್ಸಲ್ಲಿ ಕೆಲಸ ಮಾಡ್ತಾಳೆ. ಅವಳ ಮದ್ವೆ ಜವಾಬ್ದಾರೀನೂ ನಮ್ಮದೇ ಸರ್. ಅಮ್ಮ ದಿನಾಲೂ ಕಣ್ಣೀರು ಹಾಕ್ತಾರೆ ಸರ್. ಅದಕ್ಕೆ ನಾನೂ ಅಮ್ಮನಿಗೆ ಗೊತ್ತಾಗದ ಹಾಗೆ ಕೆಲಸಕ್ಕೆ ಹೋಗ್ತಿàನಿ. ಮೂಟೆ ಹೊರೋವಲ್ಲಿಂದ ತೊಡಗಿ ಗಾರೆ ಕೆಲಸದವರೆಗೂ ಸರ್. ಬೇರೆ ಎಲ್ಲಾದರೂ ನೋಡೋಣ ಅಂದ್ರೆ ವಿದ್ಯಾಭ್ಯಾಸ ಇಲ್ಲದೆಲೆ ಆಗಲ್ಲ ಅಲ್ವಾ ಸರ್? ಈಗ ನೀವು ಹಾಲ್ ಟಿಕೆಟ್ ಕೊಡೊಲ್ಲ ಅಂದ್ರೆ ನಮ್ಮಮ್ಮ ನನ್ನ ಮೇಲಿಟ್ಟಿರೋ ಆಸೆಗಳೆಲ್ಲ ಮಣ್ಣು ಪಾಲಾಗ್ತವೆ ಸರ್. ನಿಮ್ಮ ಕಾಲಿಗೆ ಬೀಳ್ತೀನಿ ಸರ್. ನಾನು ಕಾಲೇಜಿಗೆ ಅಂತ ಮನೆಯಿಂದ ಹೊರಟು ಕೆಲಸಕ್ಕೆ ಹೋಗ್ತಿದ್ದದ್ದನ್ನು ಅಮ್ಮಂಗೆ ಮಾತ್ರ ಹೇಳ್ಬೇಡಿ ಸರ್…’ ಒಂದೇ ಉಸಿರಲ್ಲಿ ಆ ವಿದ್ಯಾರ್ಥಿ ಬಡಬಡಿಸುತ್ತಿದ್ದರೆ ಅವನ ಕಣ್ಣಾಲಿಗಳಲ್ಲಿ ಮಾತ್ರವೇ ಏನು, ಹಾಲ್ ಟಿಕೆಟ್ ಕೊಡಬೇಕಾದವರ ಕಣ್ಣಲ್ಲೂ ತೆಳುವಾಗಿ ನೀರಪಸೆಯಿತ್ತು.
Related Articles
Advertisement
ಕನಸು ಕಾಣುವ ವಯಸ್ಸೇ ಆದರೂ ಕೆಲವು ಮಕ್ಕಳ ಕಣ್ಣ ಮುಂದೆ ಕೇವಲ ಬಣ್ಣಗಳಿರುವುದಿಲ್ಲ. ಬದುಕಿನ ಭಾರಕ್ಕೆ ಹೆಗಲು ಕೊಡಬೇಕಾದ ಹೊಣೆಗಾರಿಕೆ ಅವರನ್ನು ಬಣ್ಣಗಳ ಸಂತೆಯಿಂದ ಹೊರಗೆ ತಂದಿರುತ್ತದೆ. ಅವರೆದುರು ಇರುವುದು ಏನಿದ್ದರೂ ಕಪ್ಪುಬಿಳುಪಿನ ಬದುಕಿನ ಭಾವಚಿತ್ರಗಳು ಮಾತ್ರ. ಅಷ್ಟನ್ನಾದರೂ ಅವರು ಉಳಿಸಿಕೊಳ್ಳಬೇಕಾದರೆ ದುಡಿಮೆ ಅನಿವಾರ್ಯ. ಆದರೆ, ಎದೆಗೆ ಗುದ್ದುವ ಅಕ್ಷರಗಳನ್ನು ಮರೆಯಲಾದೀತೇ? ಓದಿನ ಹಂಬಲ ಅವರಲ್ಲಿ ಉಂಟುಮಾಡುವ ತಲ್ಲಣಗಳನ್ನು ಪದಗಳು ಕಟ್ಟಿ ಹಾಕಿಯಾವೇ? ಹಾಗೆಂದು, ಇರುವ ಸಣ್ಣ ಜಮೀನಿನಲ್ಲಿ ಬೆಳೆ ತೆಗೆಯಬೇಕಾದರೆ ಆಳುಗಳನ್ನಿಟ್ಟುಕೊಂಡು ಮಾಡಲಾಗದ ಅಪ್ಪ- ಅಮ್ಮನ ಸಂಕಷ್ಟ ತನ್ನದೂ ಎಂದು ಅರ್ಥಮಾಡಿಕೊಂಡ ಹುಡುಗ ಕೃಷಿ ಚಟುವಟಿಕೆಗಳು ಚುರುಕಾಗಿರಬೇಕಾದ ಸಮಯದಲ್ಲಿ ಕಾಲೇಜಿಗೆ ಬರಲೊಲ್ಲ. ತರಗತಿಯೆಂಬುದು ತನ್ನನ್ನು ಕಷ್ಟದ ಬದುಕಿನಿಂದ ಇನ್ನೊಂದು ಮಗ್ಗುಲಿಗೆ ಹೊರಳಿಸಬಲ್ಲ ರಂಗಮನೆ ಎಂಬುದು ತಿಳಿದಿದ್ದರೂ ಅವನು ಬದುಕಿನ ಸವಾಲುಗಳನ್ನು ಎದುರಿಸುವಲ್ಲಿ ರಂಗಮನೆಯಿಂದ ಕೊಂಚ ದೂರವೇ ಇರುತ್ತಾನೆ.
ಇಂತಹ ಮಕ್ಕಳಿಗೆ ಹಾಜರಾತಿಯ ಕೊರತೆಯ ನೆವ ಹಿಡಿದು ಪರೀಕ್ಷೆ ಬರೆಯಲು ಬಿಡುವುದಿಲ್ಲ ಎಂಬ ಕಟು ನಿರ್ಧಾರಕ್ಕೆ ಉಪನ್ಯಾಸಕನೂ ಬರಲೊಲ್ಲ. ನಿಯಮಗಳು ಇರುವುದು ಮುರಿಯುವುದಕ್ಕೇ ಎಂಬ ತತ್ವ ಅರಳಿಕೊಳ್ಳುವುದೇ ಇಲ್ಲಿ! ಯಾಕೆಂದರೆ ತನ್ನ ಶಿಕ್ಷಣ ಪಥವೂ ಕಲ್ಲುಮುಳ್ಳುಗಳ ದಾರಿಯಾಗಿದ್ದನ್ನು ಅವನೂ ಮರೆತಿರುವುದಿಲ್ಲವಲ್ಲ! ತಾನು ಸ್ವತಃ ನೊಂದವನಿಗೆ ಇತರರ ಕಂಬನಿ ಬಹುಬೇಗ ಕಾಣಿಸುತ್ತದೆ.
ಸುಳ್ಳು ಹೇಳುವುದಿದ್ದರೆ ನಂಬುವಂಥ ಸುಳ್ಳು ಹೇಳಬೇಕು ಎಂಬುದನ್ನು ವಿದ್ಯಾರ್ಥಿಗಳಷ್ಟು ಚೆನ್ನಾಗಿ ಅರಿತುಕೊಂಡವರು ಯಾರೂ ಇಲ್ಲ. ಈ ದಾರಿಯಲ್ಲಿ ಸಾಗುತ್ತಿರುವ ಹೆಣ್ಣುಮಕ್ಕಳಿಗೂ ಏನೂ ಕೊರತೆಯಿಲ್ಲ. ತಂತ್ರಜ್ಞಾನ ಮುಂದುವರಿದಷ್ಟೂ ಪ್ರಯೋಜನವಾಗುವುದಕ್ಕಿಂತ ತೊಂದರೆಯೇ ಹೆಚ್ಚು ಎಂಬುದಕ್ಕೆ ಇಂದಿನ ವಿದ್ಯಾರ್ಥಿಗಳಿಗಿಂತ ಹೆಚ್ಚಿನ ಉದಾಹರಣೆ ಬೇಕಿಲ್ಲ.
ಉಪನ್ಯಾಸಕನ ಪೀಠದಲ್ಲಿ ಕುಳಿತವರಿಗೆ ಸಮಸ್ಯೆಯಾಗುವುದೆಂದರೆ ಮಕ್ಕಳು ಕಟ್ಟುವ ನೂರು ಕಥೆಗಳಲ್ಲಿ ನೈಜ ಯಾವುದು, ಕಾಲ್ಪನಿಕ ಯಾವುದು ಎಂದು ತಿಳಿಯುವುದು. ಸತ್ಯವು ಇನ್ನೂ ಶೂ ಲೇಸ್ ಕಟ್ಟುವಷ್ಟರಲ್ಲಿ, ಸುಳ್ಳೆಂಬುದು ಅದಾಗಲೇ ಪ್ರಪಂಚ ಪರ್ಯಟನೆಯ ಅರ್ಧಸುತ್ತು ಮುಗಿಸಿರುತ್ತದಂತೆ. ಹಾಲ್ ಟಿಕೇಟಿಗಾಗಿ ದುಂಬಾಲು ಬೀಳುವ ವಿದ್ಯಾರ್ಥಿಗಳ ಕಥೆಗಳೂ ಹೀಗೆಯೇ. ಹತ್ತು ಮಕ್ಕಳು ವಾಸ್ತವದ ಮಾತಾಡಿದರೆ ಇನ್ನು ತೊಂಭತ್ತು ಮಂದಿ ಮಿಥ್ಯೆಗೇ ನಿಜವೆಂಬ ಸುಣ್ಣ ಬಳಿದಿರುತ್ತಾರೆ. ಸತ್ಯಾಸತ್ಯತೆಯನ್ನು ವಿವೇಚಿಸಿ ಅರಿಯಬೇಕಾದದ್ದು ಉಪನ್ಯಾಸಕರಿಗಿರುವ ಸವಾಲು. “ವಜ್ರಾದಪಿ ಕಠೊರಾನಿ ಮೃದೂನಿ ಕುಸುಮಾದಪಿ’ ಎಂಬಂತಿರಬಲ್ಲ ಶಿಕ್ಷಕ ಮಾತ್ರ ಇಲ್ಲಿ ಗೆಲ್ಲುತ್ತಾನೆ, ಸಲ್ಲುತ್ತಾನೆ!
ಮಗಳು ಹೇಳಿದ ಸುಳ್ಳುಇತ್ತೀಚೆಗೆ ತಾಯಿಯೊಬ್ಬರು ಕಾಲೇಜಿಗೆ ಬಂದಿದ್ದರು. ಬಹಳ ಕಂಗಾಲಾಗಿ ಸೊರಗಿದಂತೆ ಇದ್ದ ಅವರನ್ನು ನೋಡಿದರೇ ಏನೋ ಎಡವಟ್ಟಾಗಿದೆ ಎಂಬುದು ಸರ್ವವಿದಿತವಾಯ್ತು. ಆಕೆ ತಳಮಳಿಸಿಕೊಂಡು “ಮೇಡಮ್ಮೊàರೇ, ದಯವಿಟ್ಟು ನಮ್ಮ ಮಗಳಿಗೆ ಇದೊಂದು ಸಲ ಪರೀಕ್ಷೆ ಬರೆಯೋದಕ್ಕೆ ಅವಕಾಶ ಮಾಡ್ಕೊಡಿ. ಪರೀಕ್ಷೆ ಬರೆಯೋದಕ್ಕೆ ಹಾಲ್ ಟಿಕೆಟ್ಟು ಕೊಡಲ್ಲ. ಕೊಡಬೇಕಾದರೆ ಮೊಬೈಲ್ ಕೊಡಿಸಬೇಕು ಅಂತೇನೋ ಹೇಳಿದ್ದೀರಂತಲ್ಲ… ಸದ್ಯ ಇವಳ ಕಾಲೇಜು ಫೀಸು ಪೂರ್ತಿ ಕಟ್ಟಿಬಿಡ್ತೀನಿ. ನಮ್ಮನೆಯೋರು ಹೋದಾಗಿನಿಂದ ಇವಳಿಗಾಗಷ್ಟೇ ನಾನು ಜೀವ ಹಿಡಿದಿರೋದು… ನಿಮ್ಮ ಕೈನೇ ಕಾಲು ಅಂತ ಹಿಡ್ಕೊತೀನಿ. ದಯವಿಟ್ಟು ಆಗಲ್ಲ ಅನ್ನಬೇಡಿ’ ಎಂದ ಆ ತಾಯಿಗೆ ಮಗಳು ಹೇಳಿದ್ದ ಸುಳ್ಳು ತಾನು ಬಯಸಿದ ಮೊಬೈಲ್ ಕೊಡಿಸದಿದ್ದರೆ (ಅವಳ ಪ್ರಕಾರ, ಕಾಲೇಜಿನಿಂದ ಸೂಚಿಸಿದಂತೆ) ಪರೀಕ್ಷೆ ಬರೆಯಲು ಹಾಲ್ ಟಿಕೆಟ್ ಕೊಡುವುದಿಲ್ಲ ಎಂಬುದು! ಕೊರಳಿಗೊಂದು ಕರಿನೂಲನ್ನಷ್ಟೇ ಕಟ್ಟಿಕೊಂಡ ಆ ತಾಯಿಯ ಸಂಕಟವನ್ನು ಅರಿಯದಷ್ಟರ ಮಟ್ಟಿಗೆ ಮಗಳನ್ನು ಮೊಬೈಲ್ ಸೆಳೆದಿದೆ ಎಂದರೆ ಏನು ಮಾಡೋಣ? ಆರತಿ ಪಟ್ರಮೆ