Advertisement

ಅರ್ಧಕ್ಕರ್ಧ ಹುದ್ದೆ ಖಾಲಿ ಬಿದ್ದು ಬಡವಾಗಿದೆ ಆಹಾರ ಇಲಾಖೆ!

10:07 AM Feb 25, 2020 | sudhir |

ಮಂಗಳೂರು: ಆಹಾರ ಪೂರೈಕೆಯ ಜವಾಬ್ದಾರಿ ನಿರ್ವಹಿಸುವ ರಾಜ್ಯ ಆಹಾರ ಇಲಾಖೆಯೇ ಸಿಬಂದಿ ಕೊರತೆಯಿಂದ ಬಡವಾಗಿದೆ. 1,567 ಹುದ್ದೆಗಳ ಪೈಕಿ 735 ಖಾಲಿ ಬಿದ್ದಿವೆ!

Advertisement

ಪಡಿತರ ವ್ಯವಸ್ಥೆ ಸುಧಾರಣೆ, ಆ ಮೂಲಕ ಸರಕಾರಕ್ಕೆ ಆದಾಯ, ಜನರಿಗೆ ಆಹಾರ ಸರಬರಾಜು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಹೊಣೆ. ಇದರಲ್ಲಿ ಅರ್ಧದಷ್ಟು ಹುದ್ದೆಗಳು ಸುಮಾರು 8 ವರ್ಷಗಳಿಂದ ಖಾಲಿ ಇವೆ. ಕೊನೆಯ ಬಾರಿ ನೇಮಕಾತಿ ನಡೆದುದು 2013ರಲ್ಲಿ ಎನ್ನುತ್ತಾರೆ ಅಧಿಕಾರಿಗಳು. ಇದರಿಂದ ಇರುವ ಅಧಿಕಾರಿ, ಸಿಬಂದಿ ಮೇಲೆ ಹೆಚ್ಚುವರಿ ಹೊರೆ ಬಿದ್ದಿದೆ. ಸದ್ಯ ನಡೆಯುತ್ತಿರುವ ಅನರ್ಹ ಬಿಪಿಎಲ್‌ ಪಡಿತರ ಚೀಟಿದಾರರ ಪತ್ತೆಯಂತಹ ಮಹತ್ತರ ಕೆಲಸಗಳಿಗೆ ಸಿಬಂದಿ ಕೊರತೆ ತೊಡಕಾಗಿದೆ ಎಂಬುದು ಸಿಬಂದಿಯ ಅಳಲು.

18 ಕಡೆ ಉಪ ನಿರ್ದೇಶಕರೇ ಇಲ್ಲ!
ನಿವೃತ್ತ ಹಿರಿಯ ಅಧಿಕಾರಿ, ಸಿಬಂದಿಯ ಸ್ಥಾನಕ್ಕೆ ನೇಮಕಾತಿ ಆಗುತ್ತಿಲ್ಲ. ಪ್ರಸ್ತುತ 1,567 ಹುದ್ದೆಗಳ ಪೈಕಿ 735 ಹುದ್ದೆಗಳು ಖಾಲಿಯಿದ್ದು, ಈ ಕರ್ತವ್ಯವನ್ನು ಹಾಲಿ ಅಧಿಕಾರಿ, ಸಿಬಂದಿ ನಿರ್ವಹಿಸಬೇಕಿದೆ. ಅಧಿಕಾರಿ ಮಟ್ಟದಲ್ಲಿ ಮಂಜೂರಾದ ಒಟ್ಟು 28 ಉಪ ನಿರ್ದೇಶಕರ ಹುದ್ದೆಗಳ ಪೈಕಿ 18 ಖಾಲಿಯಿವೆ. 14 ಜಂಟಿ ನಿರ್ದೇಶಕರ ಹುದ್ದೆಗಳ ಪೈಕಿ 2 ಭರ್ತಿಯಾಗಿಲ್ಲ ಎಂದು ಇಲಾಖೆಯ ಬೆಂಗಳೂರು ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾರೆ.

ದ.ಕ., ಉಡುಪಿ: 46 ಹುದ್ದೆ ಖಾಲಿ
ದ.ಕ. ಜಿಲ್ಲೆಯಲ್ಲಿ 47 ಹುದ್ದೆಗಳ ಪೈಕಿ 28 ಖಾಲಿ ಇವೆ. 6 ವ್ಯವಸ್ಥಾಪಕ/ಶಿರಸ್ತೇದಾರರ ಹುದ್ದೆ ಪೈಕಿ 4, 20 ಪ್ರ.ದ. ಸಹಾಯಕರ ಪೈಕಿ 13, 8 ದ್ವಿ. ದ. ಸಹಾಯಕರ ಪೈಕಿ 4, ಓರ್ವ ಬೆರಳಚ್ಚುಗಾರ, ಓರ್ವ ವಾಹನ ಚಾಲಕ, 5 ಗ್ರೂಪ್‌ ಡಿ ನೌಕರರ ಹುದ್ದೆ ಖಾಲಿ ಇವೆ. ಉಡುಪಿಯಲ್ಲಿ 25 ಹುದ್ದೆಗಳ ಪೈಕಿ ಕೇವಲ 7 ಭರ್ತಿಯಾಗಿದ್ದು, 18 ಖಾಲಿ ಇವೆ. ಉಪ ನಿರ್ದೇಶಕ ಹುದ್ದೆಯೇ ಖಾಲಿ ಇದ್ದು, ಸರ್ವೆ ಇಲಾಖೆಯ ಅಧಿಕಾರಿ ಪ್ರಭಾರ ನೆಲೆಯಲ್ಲಿದ್ದಾರೆ. ಸಹಾಯಕ ನಿರ್ದೇಶಕ, ವ್ಯವಸ್ಥಾಪಕ, ಶಿರಸ್ತೇದಾರರು-2, ಆಹಾರ ನಿರೀಕ್ಷಕರು-5, ಸಬ್‌ ಡಿವಿಜನ್‌-1, ಸೆಕೆಂಡ್‌ ಡಿವಿಜನ್‌- 3, ಟೈಪಿಸ್ಟ್‌-1, ವಾಹನ ಚಾಲಕರು-1,
ಗ್ರೂಪ್‌ ಡಿ-2 ಹುದ್ದೆಗಳು ಖಾಲಿ ಇವೆ.

ಉಡುಪಿ ಜಿಲ್ಲೆಯಲ್ಲಿ 25 ಹುದ್ದೆ ಪೈಕಿ ಕೇವಲ 7 ಭರ್ತಿಯಾಗಿವೆ. ಉಪ ನಿರ್ದೇಶಕರು, ಸಹಾಯಕ ನಿರ್ದೇಶಕರಂತಹ ಹುದ್ದೆಯೇ ಖಾಲಿ ಇವೆ. ಪ್ರಸ್ತುತ ನಾನು ಪ್ರಭಾರ ನೆಲೆಯಲ್ಲಿ ಡಿಡಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದು ಉಡುಪಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕರಾಗಿ ಪ್ರಭಾರ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕುಸುಮಾಧರ್‌ ತಿಳಿಸಿದ್ದಾರೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 28 ಹುದ್ದೆಗಳು ಹಲವಾರು ವರ್ಷಗಳಿಂದ ಖಾಲಿ ಇವೆ. ಇದರಿಂದ ಇರುವ ಸಿಬಂದಿ ಮೇಲೆ ಒತ್ತಡ ಬೀಳುತ್ತಿದೆ. ಈ ಬಗ್ಗೆ ಆಹಾರ ಸಚಿವರ ಗಮನ ಸೆಳೆಯಲಾಗಿದೆ.
-ಡಾ| ಮಂಜುನಾಥನ್‌,
ಜಂಟಿ ನಿರ್ದೇಶಕ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ

ಆಹಾರ ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇರುವ ಬಗ್ಗೆ ತಿಳಿದಿದೆ. ಹುದ್ದೆ ಭರ್ತಿಗೆ ಅಗತ್ಯ ಗಮನಹರಿಸಲಾಗುವುದು. ಈ ಬಗ್ಗೆ ಶೀಘ್ರ ಸಿಎಂ ಜತೆಗೆ ಚರ್ಚಿಸುತ್ತೇನೆ. ನಾನು ಈಗಷ್ಟೇ ಈ ಇಲಾಖೆ ಜವಾ ಬ್ದಾರಿ ವಹಿಸಿ ಕೊಂಡಿದ್ದು, ಮುಂದೆ ಕೊರತೆ ನೀಗಲು ಕ್ರಮ ಕೈಗೊಳ್ಳುತ್ತೇನೆ.
– ಕೆ. ಗೋಪಾಲಯ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next