ಗುಂಡ್ಲುಪೇಟೆ: ಎಪಿಎಂಸಿ ಹಾಗೂ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ವಿವಿಧ ಪ್ರಗತಿಪರ ಸಂಘಟನೆಗಳು ನೀಡಿದ್ದ ಬಂದ್ ಕರೆಗೆ ಪಟ್ಟಣ ಹಾಗೂ ತಾಲೂಕಿನಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಯಿತು.
ಮುಂಜಾನೆಯಿಂದಲೇ ಪಟ್ಟಣದ ವ್ಯಾಪ್ತಿಯಲ್ಲಿ ವರ್ತಕರು ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತರಾಗಿ ಬಂದ್ ಮಾಡುವುದರೊಂದಿಗೆ ರೈತರಿಗೆ ಬೆಂಬಲ ಸೂಚಿಸಿದರು. ಕೆಲಕಾಲ ಕೆಎಸ್ ಆರ್‌ಟಿಸಿಬಸ್‌ಸೇವೆಆರಂಭಗೊಂಡಿತ್ತು. ನಂತರ ಪ್ರತಿಭಟನಾಕಾರರ ಮನವಿಯ ಮೇರೆಗೆ ಸಾರಿಗೆ ಓಡಾಟವನ್ನು ನಿಲ್ಲಿಸಲಾಯಿತು. ಬಸ್‌ಗಳು ರಸ್ತೆಗಿಳಿಯದ ಪರಿಣಾಮಜನಸಂಚಾರವಿರಳವಾಗಿತ್ತು. ಸರ್ಕಾರಿ ಕಚೇರಿಗಳಿಗೆ ಹಾಜರಾಗಲು ಸಿಬ್ಬಂದಿ ಪರದಾಡಿದರು.
ಬೆಳಗ್ಗೆ 6 ರಿಂದಲೇ ಪಟ್ಟಣ, ತೆರಕಣಾಂಬಿ ಹಾಗೂ ಬೇಗೂರಿನಲ್ಲಿ ರಸ್ತೆ ತಡೆದ ಪ್ರತಿಭಟನಾಕಾರರು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ರೈತ ವಿರೋಧಿ ಕಾಯ್ದೆಗಳನ್ನು ಹಿಂದೆಗೆದುಕೊಳ್ಳುವಂತೆ ಒತ್ತಾಯಿಸಿದರು. ಮಾನವ ಸರಪಳಿ ರಚಿಸಿ ಆಕ್ರೋಶ ವ್ಯಕ್ತಪಡಿಸಿದರು.
ಇದರಿಂದ ಮಧ್ಯಾಹ್ನದವರೆಗೂ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ರಸ್ತೆ ತಡೆ ತೆರವುಗೊಳಿಸಲು ಮುಂದಾದ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಮಧ್ಯಾಹ್ನದ ವೇಳೆಗೆ ಪ್ರತಿಭಟ ನಾಕಾರರನ್ನು ಬಂಧಿಸಿದ ಪೊಲೀಸರು ರಸ್ತೆ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಕಡಬೂರು ಮಂಜುನಾಥ್, ಸಂಪತ್, ಶಾಂತಮಲ್ಲಪ್ಪ, ಮಾಡ್ರಹಳ್ಳಿ ಮಹದೇವಪ್ಪ, ಶಿವಪುರ ಮಹದೇವಪ್ಪ, ಶಿವಮಲ್ಲು, ಜಯ ಕರ್ನಾಟಕ ಸಂಘಟನೆಯ ಮಹೇಶ್, ಕರವೇ ಸುರೇಶ್ ನಾಯ್ಕ, ಮಾನವ ಬಂಧುತ್ವ ವೇದಿಕೆಯ ಸುಭಾಷ್ ಮಾಡ್ರಹಳ್ಳಿ, ಮಾಲೀಕ್, ಸೋಮಣ್ಣ ಇತರರಿದ್ದರು.