ಚಿಕ್ಕಬಳ್ಳಾಪುರ: ಜಿಲ್ಲೆಯ 2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಈ ಬಾರಿ ರಾಜ್ಯ ಕ್ರಮಾಂಕದಲ್ಲಿ ಕನಿಷ್ಠ ಐದನೇ ಸ್ಥಾನದ ಒಳಗೆ ಪಡೆಯಬೇಕೆಂಬ ನಿಟ್ಟಿನಲ್ಲಿ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಅನೇಕ ಕರಸತ್ತುಗಳನ್ನು ನಡೆಸುತ್ತಿದ್ದರೂ ಇತ್ತೀಚೆಗೆ ನಡೆದ ಎಸ್ಸೆಸ್ಸೆಲ್ಸಿ ಅರ್ಧ ವಾರ್ಷಿಕ ಪರೀಕ್ಷೆಯಲ್ಲಿ ಒಟ್ಟಾರೆ ವಿದ್ಯಾರ್ಥಿಗಳ ಪೈಕಿ ಅರ್ಧಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣ ಗೊಂಡಿರುವ ಅಂಶ ಬೆಳಕಿಗೆ ಬಂದಿದೆ.
ಇಲಾಖೆಗೆ ತಲೆ ನೋವು: ಕಳೆದ 201-18ನೇ ಸಾಲಿನಲ್ಲಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಕ್ರಮಾಂಕದಲ್ಲಿ 31ನೇ ಸ್ಥಾನದಲ್ಲಿತ್ತು. ಕಳೆದ ವರ್ಷ ಅಂದರೆ 2018-19ನೇ ಸಾಲಿನಲ್ಲಿ 31ನೇ ಸ್ಥಾನದಿಂದ 20ನೇ ಸ್ಥಾನಕ್ಕೆ ಜಿಗಿತು ಫಲಿತಾಂಶ ಸುಧಾರಿಸಿತು. ಮುಂದಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆ ಫಲಿತಾಂಶ ಕನಿಷ್ಠ ರಾಜ್ಯ ಕ್ರಮಾಂಕದಲ್ಲಿ ಒಂದಂಕಿ ಸ್ಥಾನ ಪಡೆಯ ಬೇಕೆಂದು ಜಿಲ್ಲಾಡಳಿತ, ಜಿಪಂ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವಿಶೇಷ ಕಾಳಜಿ ವಹಿಸಿ ಕೆಲಸ ಮಾಡುತ್ತಿದೆ. ಆದರೆ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಅರ್ಧಕ್ಕೆ ಅರ್ಧ ವಿದ್ಯಾರ್ಥಿಗಳು ಫೇಲ್ ಆಗಿರುವುದು ಇಲಾಖೆಯನ್ನು ಚಿಂತೆಗೀಡು ಮಾಡಿದೆ.
ಶೇ.49.48 ರಷ್ಟು ಫಲಿತಾಂಶ: ಜಿಲ್ಲೆಯಲ್ಲಿ ಈ ಬಾರಿ ಸರ್ಕಾರಿ ಪ್ರೌಢ ಶಾಲೆಯಲ್ಲಿ 6,914 ವಿದ್ಯಾರ್ಥಿಗಳು, ಅನುದಾನಿತ ಶಾಲೆಗಳಲ್ಲಿ 2,113 ವಿದ್ಯಾರ್ಥಿ ಗಳು ಹಾಗೂ ವಸತಿ ಶಾಲೆಗಳಲ್ಲಿ 585 ವಿದ್ಯಾರ್ಥಿಗಳು ಸೇರಿ ಒಟ್ಟು 10,425 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಆ ಪೈಕಿ ಅರ್ಧ ವಾರ್ಷಿಕ ಪರೀಕ್ಷೆಯಲ್ಲಿ ಕೇವಲ 5,158 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.49.48 ರಷ್ಟು ಫಲಿತಾಂಶ ಪಡೆದರೆ 5,267 ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವುದು ಕಂಡು ಬಂದಿದೆ.
ವಿಷಯವಾರು ಫಲಿತಾಂಶ: ಅರ್ಧವಾರ್ಷಿಕ ಪರೀಕ್ಷೆ ಬರೆದ ಜಿಲ್ಲೆ ಒಟ್ಟು 10,425 ವಿದ್ಯಾರ್ಥಿಗಳ ಪೈಕಿ ಪ್ರಥಮ ಭಾಷೆ ಕನ್ನಡದಲ್ಲಿ ಒಟ್ಟು 7,498 ವಿದ್ಯಾರ್ಥಿಗಳು ಉತ್ತೀಣರಾಗಿ ಶೇ.71.,92 ರಷ್ಟು ಫಲಿತಾಂಶ ಪಡೆದರೆ, ಎರಡನೇ ಭಾಷೆ ಆಂಗ್ಲದಲ್ಲಿ 6.703 ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ. ಹಿಂದಿಯಲ್ಲಿ 6,807 ವಿದ್ಯಾರ್ಥಿಗಳು ಉತ್ತೀರ್ಣ ರಾದರೆ, ಗಣಿತದಲ್ಲಿ 6,127 ವಿದ್ಯಾರ್ಥಿಗಳು, ವಿಜ್ಞಾನ ದಲ್ಲಿ 6,387 ವಿದ್ಯಾರ್ಥಿಗಳು, ಸಮಾಜ ವಿಜ್ಞಾನದಲ್ಲಿ 6,667 ವಿದ್ಯಾರ್ಥಿಗಳು ಉತ್ತರ್ಣರಾಗಿದ್ದಾರೆ.
ಇನ್ನೂ ಸರ್ಕಾರಿ ಶಾಲೆಗಲ್ಲಿ ಅರ್ಧವಾರ್ಷಿಕ ಪರೀಕ್ಷೆ ಬರೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಲ್ಲಿ 6,914 ವಿದ್ಯಾರ್ಥಿಗಳ ಪೈಕಿ ಕೇವಲ 3,318 ವಿದ್ಯಾರ್ಥಿ ಗಳು ಉತ್ತೀರ್ಣರಾಗಿ ಉಳಿದ 3,596 ವಿದ್ಯಾರ್ಥಿ ಗಳು ಅನುತ್ತೀರ್ಣರಾಗಿದ್ದಾರೆ. ಅನುದಾನಿತ ಶಾಲೆಗಳ ಪೈಕಿ ಪರೀಕ್ಷೆ ಬರೆದ ಒಟ್ಟು 2,926 ವಿದ್ಯಾರ್ಥಿಗಳ ಪೈಕಿ ಬರೀ 1,381 ವಿದ್ಯಾರ್ಥಿಗಳು ಉತ್ತೀರ್ಣ ರಾಗಿ ಉಳಿದ 1,545 ವಿದ್ಯಾರ್ಥಿಗಳು ಅನುತ್ತೀರ್ಣರಾದರೆ ವಸತಿ ಶಾಲೆಗಳಲ್ಲಿ ಅರ್ಧವಾರ್ಷಿಕ ಪರೀಕ್ಷೆ ಬರೆದ ಒಟ್ಟು 585 ವಿದ್ಯಾರ್ಥಿಗಳ ಪೈಕಿ 459 ವಿದ್ಯಾರ್ಥಿಗಳು ಉತ್ತೀರ್ಣ ರಾಗಿ ಉಳಿದ 126 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.