Advertisement

ಅರ್ಧ ರಾಜ್ಯ ಅನ್‌ ಲಾಕ್‌ಗೆ ಸಜ್ಜು: ತಾಳ್ಮೆಇರಲಿ ಎಂದ ತಜ್ಞರು

08:50 AM Jun 07, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಒಂದು ವಾರದ ಕೋವಿಡ್ ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಶೇ.10ಕ್ಕೂ ಕಡಿಮೆಯಾಗಿದೆ. ಐದು ಜಿಲ್ಲೆ ಗಳಲ್ಲಿ ಶೇ.5ಕ್ಕೂ ಕಡಿಮೆ, 9 ಜಿಲ್ಲೆಗಳಲ್ಲಿ ಶೇ.10ಕ್ಕೂ ಕಡಿಮೆ ಪಾಸಿಟಿವಿಟಿ ದರವಿದೆ. ಈ ಮೂಲಕ ಹೆಚ್ಚು ಕಡಿಮೆ ಅರ್ಧ ರಾಜ್ಯವೇ ಅನ್‌ಲಾಕ್‌ಗೆ ಸಜ್ಜಾ ಗುತ್ತಿದೆ. ಈ ನಡುವೆ ಜೂ.14ಕ್ಕೂ ಮುಂಚೆಯೇ ಅವಸರದಲ್ಲಿ, ಒಂದೇ ಬಾರಿಗೆ ಅನ್‌ಲಾಕ್‌ ಮಾಡುವುದು ಬೇಡ ಎಂದು ತಜ್ಞರು ಸಲಹೆ ನೀಡಿದ್ದಾರೆ.

Advertisement

ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆ ಬಂದರೆ ಮಾತ್ರವೇ ರಾಜ್ಯದಲ್ಲಿ ಅನ್‌ಲಾಕ್‌ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಹೀಗಾಗಿಯೇ ಒಂದು ವಾರದ ಮಟ್ಟಿಗೆ ಬಿಗಿ ನಿರ್ಬಂಧ (ಲಾಕ್‌ಡೌನ್‌) ವಿಸ್ತರಣೆ ಮಾಡಿದ್ದಾರೆ. ಮೇ 30 ರಿಂದ ಜೂನ್‌ 6ರವರೆಗೂ ಅಂದರೆ ಒಂದು ವಾರದಿಂದ ರಾಜ್ಯದ ಸರಾಸರಿ ಪಾಸಿಟಿವಿಟಿ ದರ ಶೇ.9.8ರಷ್ಟಿದೆ. ಬೆಂಗಳೂರು, ಯಾದಗಿರಿ, ಹಾವೇರಿ, ಕಲಬುರಗಿ, ಬೀದರ್‌ನಲ್ಲಿ ಶೇ.5ಕ್ಕಿಂತ ಕಡಿಮೆಯಾಗಿವೆ. ರಾಮನಗರ, ಧಾರವಾಡ, ರಾಯಚೂರು, ಬಾಗಲಕೋಟೆ, ಗದಗ, ಬೆಳಗಾವಿ, ವಿಜಯಪುರ, ಚಿಕ್ಕಬಳ್ಳಾಪುರ ಹಾಗೂ ಶಿವಮೊಗ್ಗದಲ್ಲಿ ಶೇ.10ಕ್ಕಿಂತ ಕಡಿಮೆಯಿದೆ.

ಇದನ್ನೂ ಓದಿ:ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಬಾವಿಗೆ ತಳ್ಳಿದ ಕ್ರೂರಿ: 8 ವರ್ಷದ ಮಗು ಸಾವು

ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಕ್ರಮವಾಗಿ ಶೇ.7 ಮತ್ತು ಶೇ.8ಕ್ಕೆ ಇಳಿಕೆಯಾಗಿದ್ದು, ಇನ್ನಷ್ಟು ಜಿಲ್ಲೆಗಳಲ್ಲಿ ಶೇ.5ಕ್ಕಿಂತ ಕಡಿಮೆಯಾಗುವ ಸಾಧ್ಯತೆಗಳಿವೆ. ಬಿಗಿ ನಿರ್ಬಂಧ ಮುಕ್ತಾಯವಾಗಲು ಇನ್ನೂ ಒಂದು ವಾರ (ಜೂನ್‌14) ಕಾಲಾವಕಾಶವಿದ್ದು, ಅಷ್ಟರಲ್ಲಿ ಒಟ್ಟಾರೆ ರಾಜ್ಯದ ಪಾಸಿಟಿವಿಟಿ ದರವೂ ಶೇ.5ಕ್ಕಿಂತ ಕೆಳಗಿಳಿಯಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

ಮಾನದಂಡದಿಂದ ದೂರವಿರುವ 12 ಜಿಲ್ಲೆಗಳು: 12 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ. 15ಕ್ಕೂ ಹೆಚ್ಚಿದ್ದು, ಈ ಜಿಲ್ಲೆಗಳಲ್ಲಿ ಒಂದು ವಾರದಲ್ಲಿಯೇ ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆಯಾಗುವುದು ಅನುಮಾನ. ಅದರಲ್ಲೂ, ಮೈಸೂರು, ಚಿಕ್ಕಮಗಳೂರು ಹಾಗೂ ದಾವಣಗೆರೆಯಲ್ಲಿ ಶೇ.20 ಆಸುಪಾಸಿನಲ್ಲಿದೆ.

Advertisement

ಅನ್‌ಲಾಕ್‌ಗೆ ಅವಸರ ಬೇಡ: ಜೂ.14ರ ಪೂರ್ವದಲ್ಲಿಯೇ ಅನ್‌ ಲಾಕ್‌ ಮಾಡಲಾಗುತ್ತದೆ ಎಂಬ ಅಭಿಪ್ರಾಯಗಳು ಕೇಳಿಬಂದಿವೆ. ಇದನ್ನು ತಜ್ಞರು ವಿರೋಧಿಸಿದ್ದು, ಅವಸರ ಬೇಡ ಎಂಬ ಸಲಹೆ ನೀಡಿದ್ದಾರೆ. ಅನ್‌ಲಾಕ್‌ ಬಳಿಕ ಜನರ ಓಡಾಟ ಹೆಚ್ಚಳವಾಗಿ ಒಂದಿಷ್ಟು ಪ್ರದೇಶಗಳಲ್ಲಿ ಮತ್ತೆ ಹೆಚ್ಚಳವಾಗುವ ಸಾಧ್ಯತೆಗಳಿವೆ. ಈ ವಾರವೂ ಬಿಗಿಯಾದ ನಿರ್ಬಂಧ ಜಾರಿ ಮಾಡಿ ಸಾಧ್ಯವಾದಷ್ಟು ತೀವ್ರತೆ ಯನ್ನು ಇಳಿಕೆ ಮಾಡಬೇಕು. ಆಗ ಅನ್‌ಲಾಕ್‌ ಬಳಿಕ ಏರುಪೇರಾದರೂ ಸಮಸ್ಯೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಹಂತ ಹಂತವಾಗಿ ಅನ್‌ಲಾಕ್‌ ಮಾಡಿ: “ಬಿಗಿ ನಿರ್ಬಂಧದಿಂದ ಸದ್ಯ ಕೊರೊನಾ ಸೋಂಕಿನ ಸರಪಳಿ ಬಿರುಕು ಬಿಟ್ಟಿದ್ದು, ನಾಶವಾಗಿಲ್ಲ. ಈಗ ನಿರ್ಬಂಧ ಒಮ್ಮೆಗೆ ತೆಗೆದರೆ ಮತ್ತೆ ಸೋಂಕು  ತೀವ್ರವಾಗುವ ಸಾಧ್ಯತೆಯಿದೆ. ಮೊದಲು ಅತ್ಯವಶ್ಯಕ, ವಾಣಿಜ್ಯ ಚಟುವಟಿಕೆಗಳಿಗೆ ಅನುಮತಿ ನೀಡಬೇಕು. ಆನಂತರವೇ ಮಾರುಕಟ್ಟೆ, ಮನೋರಂಜನೆ, ಸಾರಿಗೆ ವಲಯವನ್ನು ಆರಂಭಿಸಬೇಕು. ಸಭೆ ಸಮಾರಂಭ, ಅದ್ಧೂರಿ ಮದುವೆಗಳನ್ನು ಡಿಸೆಂಬರ್‌ ಅಂತ್ಯದವರೆಗೂ ನಿಯಂತ್ರಿಸಬೇಕು’ ಎಂದು ಜಯದೇವ ಹೃದ್ರೋಗ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next