Advertisement

ಕಳೆದ ಬಾರಿ ಸುರಿದ ಅರ್ಧದಷ್ಟೂ ಮಳೆ ಈ ಬಾರಿ ಬರಲಿಲ್ಲ !

10:41 PM Jun 18, 2019 | Team Udayavani |

ಮಹಾನಗರ: ಕರಾವಳಿ ಪ್ರದೇಶದಲ್ಲಿ ಮಳೆ ಕೊರತೆ ಆಗುವುದಿಲ್ಲ. ಸಕಾಲಕ್ಕೆ ಮಳೆಯಾಗುತ್ತದೆ ಎಂಬ ವಾಡಿಕೆ ಈ ಹಿಂದಿನ ವರ್ಷಗಳಲ್ಲಿ ಇತ್ತು. ಆದರೆ, ಈ ಬಾರಿ ಮುಂಗಾರು ಕ್ಷೀಣಿಸಿದ್ದು, ರಾಜ್ಯದಲ್ಲಿಯೇ ಕರಾವಳಿ ಪ್ರದೇಶದಲ್ಲಿ ಶೇ.56ರಷ್ಟು ಮತ್ತು ದ.ಕ. ಜಿಲ್ಲೆಯಲ್ಲಿ ಶೇ.62ರಷ್ಟು ಮಳೆ ಕೊರತೆ ಇದೆ. ಕಳೆದ ಬಾರಿ ಇದೇ ಸಮಯ ದ.ಕ. ಜಿಲ್ಲೆಯಲ್ಲಿ ಶೇ.41ರಷ್ಟು ಮಳೆ ಹೆಚ್ಚಳವಾಗಿತ್ತು.

Advertisement

ಕಳೆದ ಬಾರಿ ಮುಂಗಾರು ಪ್ರವೇಶಿಸಿದ ಬಳಿಕ ಬಿರುಸುಗೊಂಡಿತ್ತು. ಆದರೆ, ಈ ಬಾರಿ ದುರ್ಬಲಗೊಂಡಿದೆ. ಸಾಮಾ ನ್ಯವಾಗಿ ಮುಂಗಾರು ಪ್ರವೇಶ ಪಡೆದು ಒಂದು ವಾರ ಕಾಲ ದಿನವಿಡೀ ಜಿಟಿ ಜಿಟಿ ಮಳೆ ಸುರಿಯುತ್ತದೆ. ಆದರೆ, ಈ ಬಾರಿಯ ಹವಾಮಾನವೇ ಬದಲಾಗಿದೆ.

ದ.ಕ. ಜಿಲ್ಲೆಯಲ್ಲಿ 2019ರ ಜೂ. 1ರಿಂದ ಜೂ. 17ರ ವರೆಗಿನ ಹವಾ ಮಾನ ಇಲಾಖೆಯ ಅಂಕಿಅಂಶದ ಪ್ರಕಾರ ಬೆಳ್ತಂಗಡಿ ತಾಲೂಕಿನಲ್ಲಿ 411 ಮಿ.ಮೀ. ವಾಡಿಕೆ ಮಳೆಯಲ್ಲಿ 172.8 ಮಿ.ಮೀ ಮಳೆಯಾಗಿದ್ದು ಶೇ.58ರಷ್ಟು ಮಳೆ ಕೊರತೆ ಇದೆ. ಬಂಟ್ವಾಳ ತಾಲೂಕಿನಲ್ಲಿ 452.1 ಮಿ.ಮೀ ವಾಡಿಕೆ ಮಳೆಯಲ್ಲಿ 224 ಮಿ.ಮೀ. ಮಳೆ ಸುರಿದು ಶೇ.50ರಷ್ಟು ಮಳೆ ಕೊರತೆ, ಮಂಗಳೂರು ತಾಲೂಕಿನಲ್ಲಿ 497.8 ಮಿ.ಮೀ. ವಾಡಿಕೆ ಮಳೆಯಲ್ಲಿ 212 ಮಿ.ಮೀ. ಮಳೆ ಬಂದು ಶೇ.57 ಮಳೆ ಕೊರತೆ, ಪುತ್ತೂರು ತಾಲೂಕಿನಲ್ಲಿ 404.9 ಮಿ.ಮೀ. ಮಳೆಯಲ್ಲಿ 115.3 ಮಿ.ಮೀ. ಮಳೆ ಬಂದು ಶೇ.72ರಷ್ಟು ಮಳೆ ಕೊರತೆ, ಸುಳ್ಯ ತಾಲೂಕಿನಲ್ಲಿ 381.5 ಮಿ.ಮೀ. ವಾಡಿಕೆ ಮಳೆಯಲ್ಲಿ 100.7 ಮಿ.ಮೀ. ಮಳೆ ಸುರಿದು ಶೇ.74ರಷ್ಟು ಮಳೆ ಕೊರತೆ ಅನುಭವಿಸುತ್ತಿದೆ.

ಕಳೆದ ವರ್ಷ ಮುಂಗಾರು ಉತ್ತಮವಾಗಿದ್ದು, ಬೆಳ್ತಂಗಡಿ ತಾಲೂಕಿ ನಲ್ಲಿ ಶೇ.81, ಬಂಟ್ವಾಳ ತಾಲೂಕಿನಲ್ಲಿ ಶೇ.18, ಪುತ್ತೂರು ತಾಲೂಕಿನಲ್ಲಿ ಶೇ.51 ಮತ್ತು ಸುಳ್ಯ ತಾಲೂಕಿನಲ್ಲಿ ಶೇ.40ರಷ್ಟು ಮಳೆ ಹೆಚ್ಚಳವಾಗಿತ್ತು. ಮಂಗಳೂರು ತಾಲೂಕಿನಲ್ಲಿ ಶೇ.-2ರಷ್ಟು ಮಳೆ ಕೊರತೆ ಇತ್ತು.

ಇನ್ನೂ ಚುರುಕಾಗದ ಮಳೆ
ಸಾಮಾನ್ಯವಾಗಿ ಜೂನ್‌ ಮೊದಲ ವಾರವೇ ಮಳೆಯಾಗಿ, ಕರಾವಳಿ ಭಾಗದಲ್ಲಿ ಕೃಷಿ ಚಟುವಟಿಕೆಗಳು ಆರಂಭವಾಗುತ್ತದೆ. ಈ ಬಾರಿ ಜೂನ್‌ ಮೊದಲ ವಾರ ಕರಾವಳಿಗೆ ಮುಂಗಾರು ಅಪ್ಪಳಿಸಬಹುದು ಎಂದು ಅಂದಾಜಿಸಲಾಗಿತ್ತು.

Advertisement

ಆದರೆ ಜೂ. 9ರಂದು ಕೇರಳ ಕರಾವಳಿಗೆ ಮುಂಗಾರು ಬಂದರೂ, “ವಾಯು’ ಎಂಬ ಹೆಸರಿನ ಚಂಡಮಾರುತದ ಪರಿಣಾಮ ರಾಜ್ಯ ಕರಾವಳಿಗೆ ಒಂದು ವಾರಗಳ ಬಳಿಕ ಜೂ. 14ರಂದು ಮುಂಗಾರು ಆಗಮನವಾಯಿತು.ಈ ಹಿಂದೆಯೇ ಪೂರ್ವ ಮುಂಗಾರು ಮಳೆ ಕರಾವಳಿಯಲ್ಲಿ ಕ್ಷೀಣಿಸಿದ್ದ ಕಾರಣದಿಂದ ಮುಂಗಾರು ಉತ್ತಮವಾಗಿರಬಹುದು ಎಂದು ಅಂದಾಜಿಸಲಾಗಿತ್ತು. ಮುಂಗಾರು ಪ್ರವೇಶಗೊಂಡು ಮೂರ್‍ನಾಲ್ಕು ದಿನ ಗಳಾದರೂ, ಮಂಗಳೂರು ಸಹಿತ ದ.ಕ. ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗಿಲ್ಲ.

ಬೆಳಗ್ಗಿನ ವೇಳೆ ಮೋಡ ಕವಿದು ಬಿಸಿಲಿನ ವಾತಾವರಣ ಇರುತ್ತದೆ. ಕೆಲವೊಮ್ಮೆ ಅಲ್ಲಲ್ಲಿ ಹಗುರದಿಂದ ಕೂಡಿದ ಮಳೆಯಾದರೂ ಬಿರುಸು ಪಡೆಯುತ್ತಿಲ್ಲ. ಇದೇ ಕಾರಣಕ್ಕೆ ಇಡೀ ರಾಜ್ಯಕ್ಕೆ ಹೋಲಿಸಿದಾಗ ಕರಾವಳಿ ಪ್ರದೇಶದಲ್ಲಿ ಅತೀ ಹೆಚ್ಚು ಮಳೆ ಕೊರತೆ ಇದೆ.

ಮುಂಗಾರು ದುರ್ಬಲಕ್ಕೆ ಏನು ಕಾರಣ?
ಕೆಎಸ್‌ಎನ್‌ಡಿಎಂಸಿ ನಿರ್ದೇಶಕ ಶ್ರೀನಿವಾಸ ರೆಡ್ಡಿ ಅವರು “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ ಈ ಬಾರಿಯ ಮುಂಗಾರು ಆಗಮನದ ವೇಳೆ “ವಾಯು’ ಚಂಡಮಾರುತದಿಂದಾಗಿ ಇಲ್ಲಿನ ಮೋಡ ಮತ್ತು ತೇವಾಂಶ ಕೂಡ ಕಡಿಮೆಯಾಗಿದೆ. ಜೂ. 20ರ ಬಳಿಕ ಕರಾವಳಿಯಲ್ಲಿ ಉತ್ತಮ ಮಳೆ ನಿರೀಕ್ಷಿಸಬಹುದು. ಬಂಗಾಲಕೊಲ್ಲಿಯಲ್ಲಿ ನಿಮ್ನ ಒತ್ತಡ ಉಂಟಾಗಿದ್ದು,ಇದು ಮುಂಗಾರಿನ ಪ್ರಗತಿಗೆ ಪೂರಕವಾಗಿಯೇ ಇದೆ. ಇದರಿಂದಾಗಿ ದಕ್ಷಿಣ ಭಾರತದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next